ಹಾಸನ : ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಭ್ರಷ್ಠ ಅಧಿಕಾರಿಗಳ ಮನೆ ಹಾಗೂ ಪತ್ನಿ ನಿವಾಸ, ಹಾರ್ಡ್‌ವೇರ್ ಮೇಲೆ ದಿಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದಲ್ಲದೇ ಮಹತ್ವದ ದಾಖಲೆ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಮಾಡಿರುವ ಬಗ್ಗೆ ಅನೇಕ ದೂರುಗಳು ಬಂದ ಹಿನ್ನಲೆಯಲ್ಲಿ ಹೊಸ ಬಸ್ ನಿಲ್ದಾಣದ ಎದುರು ಹೌಸಿಂಗ್ ಬೋರ್ಡ್ ನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಎಂಬುವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸಿದರು. ಜಯಣ್ಣ ಅವರ ಪತ್ನಿ ನಿವಾಸ ಹಾಗೂ ಹಾರ್ಡ್‌ವೇರ್ ಅಂಗಡಿ ಸೇರಿದಂತೆ ಅವರಿಗೆ ಸಂಬಂಧಿಸಿದ ಇತರೆ ಕಡೆ ದಾಳಿ ನಡೆದಿದೆ. ಜಯಣ್ಣನ ಅವರ ಮೊದಲ ಪತ್ನಿಯ ನಿವಾಸ (ಹಾಸನ ಜಯನಗರ), ಎರಡನೇ ಪತ್ನಿಯ ನಿವಾಸ (ಚನ್ನಪಟ್ಟಣ ಬಡಾವಣೆ ಹೌಸಿಂಗ್ ಬೋರ್ಡ್), ಎರಡನೇ ಪತ್ನಿಗೆ ಸೇರಿದ ಹಾರ್ಡ್‌ವೇರ್ ಅಂಗಡಿ (ಚನ್ನಪಟ್ಟಣ), ಕೊಡಗು ಶನಿವಾರಸಂತೆಯಲ್ಲಿರುವ ಫಾರಂ ಹೌಸ್ ಮತ್ತು ಹಾಸನ ಆರ್‌ಸಿ ರಸ್ತೆಯಲ್ಲಿರುವ ಲೋಕೋಪಯೋಗಿ ಭವನದಲ್ಲಿರುವ ಜಯಣ್ಣ ಕಚೇರಿ ಸೇರಿದಂತೆ ಎಲ್ಲೆಡೆ ಲೋಕಾಯುಕ್ತ ಎಸ್ಪಿ ಸ್ನೇಹ ನೇತೃತ್ವದಲ್ಲಿ ಡಿವೈಎಸ್ಪಿ, ಇನ್ಸ್ ಪೆಕ್ಟರ್ ಹಾಗೂ ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿಗಳೂ ಸೇರಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ತಿ ಗಳಿಕೆಯ ಕೆಲವು ಮಹತ್ವದ ದಾಖಲೆ ಸಿಕ್ಕಿದ್ದು, ವಶಪಡಿಸಿಕೊಂಡು ಮುಂದಿನ ತನಿಖೆಗೆ ಮುಂದಾಗಿದ್ದಾರೆ