ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಟಿ.ಡಿ ರಾಜೇಗೌಡ ಅವರ ವಿರುದ್ಧ ಚಿಕ್ಕಮಗಳೂರಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಕೇವಲ ರಾಜೇಗೌಡ ಮಾತ್ರವಲ್ಲದೆ.. ಕುಟುಂಬ ಸದಸ್ಯರಾದ ಪತ್ನಿ ಮತ್ತು ಪುತ್ರನ ಮೇಲೂ ಎಫ್ಐಆರ್ ದಾಖಲಾಗಿದೆ.
ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಆದಾಯ ತೆರಿಗೆಯಲ್ಲಿ ವಂಚನೆ ಆರೋಪದಡಿಯಲ್ಲಿ ಶಾಸಕ ರಾಜೇಗೌಡ ಅವರ ಪತ್ನಿ ಪುಷ್ಪಾ ಮತ್ತು ಮಗ ರಾಜ್‌ದೇವ್ ಅವರನ್ನು ಎಫ್ಐಆರ್ ನಲ್ಲಿ ಸೇರಿಸಲಾಗಿದೆ.
ಶಾಸಕ ರಾಜೇಗೌಡ ಅವರ ವಿರುದ್ಧದ ದೂರಿನಲ್ಲಿ ಶಾಸಕರು ತಮ್ಮ ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಚಿಕ್ಕಮಗಳೂರು ಬಿಜೆಪಿ ಮುಖಂಡ ದಿನೇಶ್ ಹೆಚ್.ಕೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಇದೇ ದೂರನ್ನು ಲೋಕಾಯುಕ್ತಕ್ಕೂ ನೀಡಿದ್ದರು. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಗಳು ಸತ್ಯವೆಂದು ತಿಳಿದುಬಂದಿದೆ ಎನ್ನಲಾಗಿದೆ.
ಜನಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿ, ನವೆಂಬರ್ 17ರೊಳಗೆ ತನಿಖಾ ವರದಿ ಸಲ್ಲಿಸಲು ತಿಳಿಸಿತು. ಈ ಆದೇಶದಂತೆ ಲೋಕಾಯುಕ್ತ ಕಚೇರಿಯು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದೆ. ಸೆಪ್ಟೆಂಬರ್ 16ರಂದು ನ್ಯಾಯಾಲಯವು ಫೈನಲ್ ಆದೇಶ ನೀಡಿ, ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಸೂಚಿಸಿತು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಅನ್ವಯ ರಾಜೇಗೌಡ ಮತ್ತು ಅವರ ಕುಟುಂಬದ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಈ ಎಫ್‌ಐಆರ್‌ನಲ್ಲಿ ಸೆಕ್ಷನ್ 7 (ಎರಡು ವ್ಯಕ್ತಿಗಳ ನಡುವೆ ಲಾಭಕ್ಕಾಗಿ ಪ್ರಕಟಣೆ), 8 (ಅಧಿಕಾರಿಯಾಗಿ ಲಾಭಕ್ಕಾಗಿ ಕೃತ್ಯ), 13 (ಅಧಿಕಾರದ ದುರ್ಬಳಕೆಯಿಂದ ಆಸ್ತಿ ಗಳಿಕೆ), 120(B) (ಕುಟ್ರೆ), 420 (ಮೋಸ), 193 (ಸಾಕ್ಷಿ ಮೋಸ) ಮತ್ತು 200 (ತಪ್ಪು ದೂರು) ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.