ಬೆಂಗಳೂರು: ಹೆಣ್ಣೂರಿನಲ್ಲಿ ಕಟ್ಟಡ ಕುಸಿದು ಕನಿಷ್ಠ ಎಂಟು ಮಂದಿ ಕಟ್ಟಡ ಕಾರ್ಮಿಕರು ಸಾವಿಗೀಡಾಗಿದ್ದು, ಹತ್ತಾರು ಮಂದಿ ಗಾಯಗೊಂಡ ಘಟನೆಯ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತರು ಬುಧವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆಣ್ಣೂರು ಸಮೀಪದ ಅಂಜನಾದ್ರಿ ಲೇಔಟ್‌ನಲ್ಲಿ ಕುಸಿದಿರುವ ಜಿ+6 ಕಟ್ಟಡವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ.ವೀರಪ್ಪ ಅವರೊಂದಿಗೆ ಪರಿಶೀಲನೆ ನಡೆಸಿದರು.
ಪಾಟೀಲ್ ಅವರು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾಗಿರುವ ಹಲವಾರು ಅಕ್ರಮಗಳನ್ನು ಎತ್ತಿ ತೋರಿಸಿದರು.
‘ಕಟ್ಟಡಕ್ಕೆ ಪರವಾನಗಿ ಹಾಗೂ ಮಂಜೂರಾತಿ ಯೋಜನೆ ಇಲ್ಲದಿರುವುದು ಹಾಗೂ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವುದು ಪತ್ತೆಯಾಗಿದೆ’ ಎಂದು ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. “ಎರಡು ವರ್ಷಗಳಿಂದ ನಿರ್ಮಾಣ ನಡೆಯುತ್ತಿದೆ ಎಂದು ನಮಗೆ ತಿಳಿಸಲಾಯಿತು, ಆದರೂ ಅದನ್ನು ತಡೆಯಲು ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನಾಲ್ಕು ಮಹಡಿಗಳನ್ನು ನಿರ್ಮಿಸುವವರೆಗೆ ಯಾವುದೇ ನೋಟಿಸ್ ನೀಡಲಾಗಿಲ್ಲ” ಎಂದು ಅವರು ಹೇಳಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಟೀಲ್ ಭರವಸೆ ನೀಡಿದರು.
“ನಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಉನ್ನತ ಶ್ರೇಣಿಯ ಅಧಿಕಾರಿಗಳಿಂದ ಕೆಳಮಟ್ಟದವರೆಗೆ, ಭಾಗಿಯಾಗಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ” ಎಂದು ಅವರು ಹೇಳಿದರು.
ಬಿಬಿಎಂಪಿಯ ವಲಯ ಆಯುಕ್ತರು, ಜಂಟಿ ಆಯುಕ್ತರು, ಸೂಪರಿಂಟೆಂಡೆಂಟ್ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಗುರುವಾರ ಹಾಜರಾಗಿ ವಿವರಣೆ ನೀಡಿ ವರದಿ ಸಲ್ಲಿಸುವಂತೆ ಸಮನ್ಸ್ ನೀಡಲಾಗಿದೆ ಎಂದು ಲೋಕಾಯುಕ್ತ ಕಚೇರಿಯ ಮೂಲಗಳು ತಿಳಿಸಿವೆ.