ಕಲಬುರಗಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ, ಕಲಬುರಗಿ ವೃತ್ತದ ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಅಧೀಕ್ಷಕ ಇಂಜಿನಿಯರ್ ಮಾಣಿಕ್ ಕನಕಟ್ಟೆ ಅವರಿಗೆ ಸೇರಿದ ಮನೆಗಳು, ಫಾರ್ಮ್‌ಹೌಸ್ ಹಾಗೂ ವಾಣಿಜ್ಯ ಸಂಕೀರ್ಣಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಮುಂಜಾನೆ ಏಕಕಾಲದಲ್ಲಿ ಭಾರಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳು ಪತ್ತೆಯಾಗಿವೆ.
ಕಲಬುರಗಿ ಲೋಕಾಯುಕ್ತ ಎಸ್‌ಪಿ ಸಿ. ಸಿದ್ದರಾಜು ಅವರ ನೇರ ಮಾರ್ಗದರ್ಶನದಲ್ಲಿ ಒಟ್ಟು ಐದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡಗಳು ಈ ಕಾರ್ಯಾಚರಣೆ ಕೈಗೊಂಡಿವೆ. ಕಲಬುರಗಿಯ ಗೋದೂತಾಯಿ ನಗರದಲ್ಲಿರುವ ಮಾಣಿಕ್ ಅವರ ಎರಡು ಐಷಾರಾಮಿ ಮನೆಗಳು, ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಕೇಡ್ (ಬಿ) ಗ್ರಾಮದಲ್ಲಿರುವ ನಿವಾಸ ಹಾಗೂ ಫಾರ್ಮ್‌ಹೌಸ್ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿರುವ ಎರಡು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್‌ಗಳ ಮೇಲೆ ಈ ದಾಳಿ ನಡೆದಿದೆ.
ಲೋಕಾಯುಕ್ತ ಅಧಿಕೃತ ಮೂಲಗಳ ಮಾಹಿತಿಯ ಪ್ರಕಾರ, ದಾಳಿಯ ವೇಳೆ ಬರೋಬ್ಬರಿ 275 ಗ್ರಾಂ ಚಿನ್ನಾಭರಣ, 750 ಗ್ರಾಂ ಬೆಳ್ಳಿ, ವಿವಿಧ ಬ್ಯಾಂಕ್‌ಗಳಲ್ಲಿ ಇಡಲಾಗಿರುವ 50 ಲಕ್ಷ ರೂಪಾಯಿ ಮೌಲ್ಯದ ಸ್ಥಿರ ಠೇವಣಿಗಳು ಹಾಗೂ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ. ಇದರೊಂದಿಗೆ ಬೀದರ್ ಜಿಲ್ಲೆಯ ಹಳ್ಳಿಕೇಡ್ (ಬಿ) ಗ್ರಾಮದಲ್ಲಿರುವ ಒಂದು ಭವ್ಯ ಬಂಗಲೆ, 16 ಎಕರೆ ಕೃಷಿ ಜಮೀನು, ಕಲಬುರಗಿ ನಗರದಲ್ಲಿರುವ ಎರಡು ಬಹುವಡಿಗಳ ದೊಡ್ಡ ವಸತಿ ಮನೆಗಳು, ಟೊಯೋಟಾ ಇನೋವಾ ಕ್ರಿಸ್ಟಾ ಮತ್ತು ಮಾರುತಿ ಸುಜುಕಿ ಬ್ರೆಜ್ಜಾ ಕಾರುಗಳು, ಒಂದು ಸ್ಕೂಟರ್ ಹಾಗೂ ಒಂದು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ವಿಶೇಷವೆಂದರೆ, ಮಾಣಿಕ್ ಕನಕಟ್ಟೆ ಅವರು ಕಳೆದ ಮೇ 30 ರಂದುವಷ್ಟೇ ತಮ್ಮ ಸುದೀರ್ಘ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು. ಸದ್ಯ ಲೋಕಾಯುಕ್ತ ಪೊಲೀಸರು ಆಸ್ತಿಪಾಸ್ತಿಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
