Home ದೆಹಲಿ ಗ್ಯಾಸ್ ಸಬ್ಸಿಡಿಗೆ ಕತ್ತರಿ: ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ದಾಟಿದರೆ ಇನ್ನು ಮುಂದೆ ರಿಯಾಯಿತಿ...

ಗ್ಯಾಸ್ ಸಬ್ಸಿಡಿಗೆ ಕತ್ತರಿ: ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ದಾಟಿದರೆ ಇನ್ನು ಮುಂದೆ ರಿಯಾಯಿತಿ ಇಲ್ಲ!

0

ದೆಹಲಿ: ಈಗಾಗಲೇ ಅಡುಗೆ ಅನಿಲದ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಲು ಸಜ್ಜಾಗಿದೆ. 10 ಲಕ್ಷ ರೂಪಾಯಿಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಎಲ್‌ಪಿಜಿ ಗ್ರಾಹಕರು ಶೀಘ್ರದಲ್ಲೇ ತಮ್ಮ ಸಬ್ಸಿಡಿಯನ್ನು ಕಳೆದುಕೊಳ್ಳಲಿದ್ದಾರೆ.

ದೇಶಾದ್ಯಂತ ತೈಲ ಕಂಪನಿಗಳು ಸಬ್ಸಿಡಿ ಕುರಿತು ಹೊಸ ಸಮೀಕ್ಷೆಯನ್ನು ಆರಂಭಿಸಿವೆ. ವಾರ್ಷಿಕ ಹತ್ತು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳು ಇನ್ನು ಮುಂದೆ ಗೃಹಬಳಕೆಯ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಪಡೆಯಲು ಅರ್ಹರಾಗಿರುವುದಿಲ್ಲ. ಆದಾಯ ತೆರಿಗೆ (Income Tax) ದಾಖಲೆಗಳನ್ನು ಬಳಸಿಕೊಂಡು ಈ ಹೊಸ ಪರಿಶೀಲನಾ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.

ಮೊಬೈಲ್‌ಗಳಿಗೆ ಸಂದೇಶ ರವಾನೆ: ನಿಗದಿತ ಆದಾಯ ಮಿತಿಯನ್ನು ಮೀರಿದ ಗ್ರಾಹಕರನ್ನು ತೈಲ ಕಂಪನಿಗಳು ಈಗಾಗಲೇ ಗುರುತಿಸುತ್ತಿವೆ. ಅಂತಹ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಸಬ್ಸಿಡಿ ಸ್ಥಗಿತಗೊಳಿಸುವ ಕುರಿತು ಸಂದೇಶಗಳನ್ನು ರವಾನಿಸಲಾಗುತ್ತಿದೆ. ಒಂದು ವೇಳೆ ಸರ್ಕಾರದ ಈ ನಿರ್ಧಾರದ ಬಗ್ಗೆ ಗ್ರಾಹಕರಿಗೆ ಆಕ್ಷೇಪವಿದ್ದರೆ, ಏಳು ದಿನಗಳ ಒಳಗಾಗಿ ಟೋಲ್ ಫ್ರೀ ಸಂಖ್ಯೆ 1800-2333-555 ಗೆ ಕರೆ ಮಾಡಬಹುದು ಅಥವಾ ಸಂಬಂಧಿತ ತೈಲ ಕಂಪನಿಯ ಆನ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದು. ನಿಗದಿತ ಅವಧಿಯಲ್ಲಿ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಸಬ್ಸಿಡಿಯನ್ನು ಸ್ವಯಂಚಾಲಿತವಾಗಿ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೈಲ ಕಂಪನಿಗಳ ವಿವರಣೆ: ಗ್ರಾಹಕರು ಅಥವಾ ಅವರ ಕುಟುಂಬದ ಸದಸ್ಯರ ತೆರಿಗೆಗೆ ಒಳಪಡುವ ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ಮೀರಿದೆ ಎಂದು ಆದಾಯ ತೆರಿಗೆ ಇಲಾಖೆಯ ದಾಖಲೆಗಳಿಂದ ತಿಳಿದುಬಂದಿದೆ ಎಂದು ಕಂಪನಿಗಳು ಸಂದೇಶದಲ್ಲಿ ಸ್ಪಷ್ಟಪಡಿಸಿವೆ. ಪ್ರಸ್ತುತ ಹಲವು ರಾಜ್ಯಗಳಲ್ಲಿ ಗ್ರಾಹಕರು ಪ್ರತಿ 14.2 ಕೆಜಿ ಸಿಲಿಂಡರ್ ಮೇಲೆ ಸರಿಸುಮಾರು 59.05 ರೂಪಾಯಿ ಸಬ್ಸಿಡಿ ಪಡೆಯುತ್ತಿದ್ದಾರೆ. ವರ್ಷಕ್ಕೆ 12 ರಿಂದ 13 ಸಿಲಿಂಡರ್‌ಗಳ ಮೇಲೆ ಈ ರಿಯಾಯಿತಿ ಲಭ್ಯವಿದ್ದು, ಗರಿಷ್ಠ ಮಿತಿಯನ್ನು 15 ಸಿಲಿಂಡರ್‌ಗಳಿಗೆ ನಿಗದಿಪಡಿಸಲಾಗಿದೆ.

ಈ ಹೊಸ ನಿಯಮವು ಸಬ್ಸಿಡಿ ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸಲಿದ್ದು, ಅರ್ಹರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

You cannot copy content of this page

Exit mobile version