Friday, June 14, 2024

ಸತ್ಯ | ನ್ಯಾಯ |ಧರ್ಮ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಗಾಯಕ ಲಕ್ಕಿ ಅಲಿ

ಬೆಂಗಳೂರು: ನೇರ ನಡೆ-ನುಡಿಯ ಕರ್ತವ್ಯ ನಿರ್ವಹಣೆಯಿಂದಲೇ ಗುರುತಿಸಿಕೊಂಡಿರುವ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸಹ ಐಎಎಸ್ ಅಧಿಕಾರಿ ಹಾಗೂ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರೊಂದಿಗಿನ ವಿವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ.

2009ರ ಬ್ಯಾಚ್ ಕರ್ನಾಟಕ ಕೇಡರ್‌ನ ರೋಹಿಣಿ ಸಿಂಧೂರಿ ಆರಂಭದಲ್ಲಿ ತುಮಕೂರು ಜಿಲ್ಲೆಯ ಸಹಾಯಕ ಕಲೆಕ್ಟರ್ ಹಾಗೂ ಮಂಡ್ಯ ಜಿಲ್ಲಾ ಪರಿಷತ್ ಸಿಇಒ ಆಗಿ ಕೆಲಸ ನಿರ್ವಹಿಸಿದ್ದರು. ನಂತರ ಹಾಸನ ಮತ್ತು ಮೈಸೂರು ಜಿಲ್ಲೆಗಳ ಕಲೆಕ್ಟರ್ ಆಗಿದ್ದರು. ಮೈಸೂರಿನಲ್ಲಿದ್ದಾಗ ವಿವಾದಗಳು ಅವರನ್ನು ಸುತ್ತುವರಿದಿದ್ದವು. 2017ರಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಅವರು 2018 ರಲ್ಲಿ KSIDC ಯ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು 2019 ರಲ್ಲಿ ಸಿಲ್ಕ್ ಬೋರ್ಡ್ ಆಯುಕ್ತರಾಗಿ ವರ್ಗಾವಣೆಗೊಂಡರು. 2020ರಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಅಲ್ಲಿ ಬಹಳ ದಿನ ಮುಂದುವರೆಯಲಾಗಲಿಲ್ಲ. ಮುಂದಿನ ವರ್ಷ ಅವರನ್ನು ಇನ್ನೊಂದು ಇಲಾಖೆಗೆ ವರ್ಗಾಯಿಸಲಾಯಿತು.

ಇತ್ತೀಚೆಗೆ ಭೂಸ್ವಾಧೀನ ವಿವಾದ ರೋಹಿಣಿ ಸಿಂಧೂರಿ ಅವರನ್ನು ಸುತ್ತುವರೆದಿತ್ತು. ಹೀಗಾಗಿ ಬಾಲಿವುಡ್ ಗಾಯಕ ಲಕ್ಕಿ ಅಲಿ ಆರೋಪಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಬೆಂಗಳೂರು ಹೊರವಲಯದ ಯಲಹಂಕ ಕೆಂಚನಹಳ್ಳಿಯಲ್ಲಿರುವ ತಮ್ಮ ಕೃಷಿ ಭೂಮಿಯನ್ನು ಭೂಮಾಫಿಯಾ ಅತಿಕ್ರಮಣ ಮಾಡುತ್ತಿದೆ ಎಂದು ಲಕ್ಕಿ ಅಲಿ ಆರೋಪಿಸಿದ್ದಾರೆ. 50 ವರ್ಷಗಳಿಂದ ಆ ಜಮೀನು ವಶದಲ್ಲಿದ್ದು, ಈಗ ಕೆಲವರು ಒತ್ತುವರಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಲಕ್ಕಿ ಅಲಿಯವರ ಟ್ವೀಟ್

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನೆರವಿನೊಂದಿಗೆ ಸುಧೀರ್ ರೆಡ್ಡಿ ಎಂಬ ವ್ಯಕ್ತಿ ಭೂಮಿಯನ್ನು ಕಬಳಿಸಲು ಯತ್ನಿಸುತ್ತಿದ್ದಾನೆ ಎಂದು ಲಕ್ಕಿ ಅಲಿ ಹೇಳಿಕೊಂಡಿದ್ದಾರೆ. ತಾನು ಸದ್ಯ ದುಬೈನಲ್ಲಿಯೇ ಇದ್ದು ನಾನಿಲ್ಲದ ವೇಳೆಯಲ್ಲಿ ಕೃಷಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ರೋಹಿಣಿ ಸಿಂಧೂರಿ ಅವರ ಪತಿ ಅತಿಕ್ರಮಣದಾರರಿಗೆ ಸಹಾಯ ಮಾಡುತ್ತಿರುವುದು ನನಗೆ ಗೊತ್ತಿತ್ತು ಇದು ಸಂಪೂರ್ಣ ಕಾನೂನು ಬಾಹಿರ ಎಂದು ಲಕ್ಕಿ ಅಲಿ ಹೇಳಿದ್ದಾರೆ.

ಈ ವಿಷಯವನ್ನು ಎಸಿಪಿ ಗಮನಕ್ಕೆ ತಂದು ಅತಿಕ್ರಮಣದಾರರ ವಿರುದ್ಧ ದೂರು ನೀಡಿದ್ದೇನೆ ಎಂದು ಲಕ್ಕಿ ಅಲಿ ಹೇಳಿದ್ದಾರೆ. ಇಲ್ಲಿಯವರೆಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಅಲ್ಲಿ ಅವರ ಕುಟುಂಬ ಮತ್ತು ಮಕ್ಕಳು ವಾಸಿಸುತ್ತಿದ್ದು, ಸ್ಥಳೀಯ ಪೊಲೀಸರಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಪೊಲೀಸರು ದಾಳಿಕೋರರಿಗೆ ಬೆಂಬಲ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಆರೋಪಿಸಲಾಗಿದೆ. ಇದೇ ತಿಂಗಳ 7ರಂದು ನ್ಯಾಯಾಲಯದ ವಿಚಾರಣೆಯಲ್ಲಿ ಈ ಕೃಷಿ ಭೂಮಿ ತಮ್ಮದೆಂದು ತೋರಿಸಲು ಅಗತ್ಯ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಆರೋಪದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಈ ವಿಚಾರವನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದು ಏಕೆಂದು ಹಾಗೂ ಪೊಲೀಸ್ ಠಾಣೆಯ ಮಾಹಿತಿ ತೆಗೆದುಕೊಳ್ಳುತ್ತೇನೆ. ಈ ಬಗ್ಗೆ ಡಿಜಿ ಜತೆ ಮಾತನಾಡುತ್ತೇನೆ’ ಎಂದರು.

ಈ ಕುರಿತು ಪ್ರತಿಕ್ರಿಯಿಸಿರುವ ರೋಹಿಣಿ ಸಿಂಧೂರಿಯವರು, “ಲಕ್ಕಿ ಅಲಿ ಆರೋಪದ ವಿರುದ್ಧ ನನ್ನ ಪತಿ ಸುಧೀರ್ ರೆಡ್ಡಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಪತಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ” ಎಂದರು.

Related Articles

ಇತ್ತೀಚಿನ ಸುದ್ದಿಗಳು