Monday, April 29, 2024

ಸತ್ಯ | ನ್ಯಾಯ |ಧರ್ಮ

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ದಾಖಲೆ ಇಲ್ಲದೇ ಹಣ ವರ್ಗಾವಣೆ ; ದೂರು ದಾಖಲು

ಕೋಲಾರ : ಕೋಲಾರ ಜಿಲ್ಲಾಸ್ಪತ್ರೆಯಲ್ಲಿ 2019-20, ಮತ್ತು 2020-21 ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ಸುಮಾರು 35.64 ಲಕ್ಷ ಅನುದಾನದ ದುರುಪಯೋಗ ಪಡಿಸಿಕೊಂಡ ಮತ್ತು ದೊಡ್ಡ ಮಟ್ಟದ ಅವ್ಯವಹಾರ ನಡೆದ ಬಗ್ಗೆ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಯ ಮೇಲೆ ಪ್ರಕರಣ ದಾಖಲಾಗಿದೆ. ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ, ಶಸ್ತ್ರಚಿಕಿತ್ಸಕ ಡಾ. ಎಸ್.ಜಿ ನಾರಾಯಣಸ್ವಾಮಿ ಸೇರಿದಂತೆ ಪ್ರಕರಣದಲ್ಲಿ ಒಟ್ಟು 11 ಜನರ ಮೇಲೆ ದೂರು ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಾಕ್ಟರ್ ಎಸ್.ಜಿ ನಾರಾಯಣಸ್ವಾಮಿ ಮಾತ್ರವಲ್ಲದೆ ಅಲ್ಲದೆ ಸ್ಥಾನಿಕ ವೈದ್ಯಾಧಿಕಾರಿ ನಾರಾಯಣಸ್ವಾಮಿ, ಪ್ರಥಮ ದರ್ಜೆ ಸಹಾಯಕ ಹರೀಶ್, ಕಂಪ್ಯೂಟರ್ ನಿರ್ವಾಹಕ ಕಿಶೋರ್ ಕುಮಾರ್, ಹೊರಗುತ್ತಿಗೆ ಡಿ ದರ್ಜೆ ನೌಕರ ಸೋಮಶೇಖರ್, ಶ್ರೀನಿವಾಸ್, ಪ್ರಶಾಂತ್ ಸೇರಿದಂತೆ ಒಟ್ಟು 11 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.

2019-20 2020-21 ನೇ ಸಾಲಿನಲ್ಲಿ ಜಿಲ್ಲಾ ವೈದ್ಯಾಧಿಕಾರಿ ಮುಖ್ಯಸ್ಥರಾಗಿರುವ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ನಿಯಮಬಾಹಿರವಾಗಿ ಹಲವು ಬಾರಿ ಅಕ್ರಮವಾಗಿ ಹಣ ಬಿಡುಗಡೆ ಮಾಡಲಾಗಿದೆ. ಅಷ್ಟೂ ಹಣವು ಚೆಕ್ ಗಳಿಂದ ಹಣ ಪಾವತಿ ಮಾಡಲಾಗಿದೆ. ಆದರೆ ಖರ್ಚು ವೆಚ್ಚದ ಪುಸ್ತಕಗಳಲ್ಲಿ ಇದ್ದರ ಬಗ್ಗೆ ಯಾವುದೇ ದಾಖಲೆ ನಮೂದಿಸಿಲ್ಲ. ದಾಖಲೆ ಪುಸ್ತಕ ಇದ್ದರೂ ಸಹ ಯಾವುದೇ ಖರ್ಚು ವೆಚ್ಚದ ಉಲ್ಲೇಖವಿಲ್ಲ. ಇತ್ತ ಮೌಖಿಕವಾಗಿಯೂ ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯಾವುದೇ ದಾಖಲೆ ಇಲ್ಲದ ಹಾಗೂ ಒದಗಿಸದ ಹಿನ್ನೆಲೆಯಲ್ಲಿ ನಾನು ದೂರು ದಾಖಲು ಮಾಡಿದ್ದೇನೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವಿಜಯ್ ಕುಮಾರ್ ದೂರು ನೀಡಿದ್ದಾರೆ. ಹಣ ವರ್ಗಾವಣೆ ಮಾಡಿದ್ದಾರೆ ಎಂಬುದು ಸ್ಪಷ್ಟ. ಆದರೆ ಇಲ್ಲಿಯವರೆಗೂ ಯಾವುದಕ್ಕೆ ಹಣ ಖರ್ಚು ಮಾಡಿದ್ದಾರೆ ಎಂಬ ದಾಖಲೆಯನ್ನು ಒದಗಿಸಿಲ್ಲ. ಇತ್ತ ಆಸ್ಪತ್ರೆಯ ಯಾವ ಕೆಲಸಕ್ಕೆ ಆ ಹಣ ಖರ್ಚಾಗಿದೆ ಎಂಬುದಕ್ಕೂ ಸಾಕ್ಷಿಗಳಿಲ್ಲ ಎಂದು ಡಾ.ವಿಜಯ್ ಕುಮಾರ್ ಆರೋಪಿಸಿದ್ದಾರೆ.

‘ನಾನು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಲು ಕೆಲಸ ವಹಿಸಿಕೊಳ್ಳುವಾಗ ಅನುಮಾನ ಬಂದು ದಾಖಲೆ ಪರಿಶೀಲಿಸಿದೆ. ಅಗತ್ಯ ದಾಖಲೆ ಸಿಗದ ಬಗ್ಗೆ ಮೇಲಾಧಿಕಾರಿಗಳಿಗೂ ದೂರು ನೀಡಿದ್ದೇನೆ. ಅವರುಗಳ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿದ್ದೇನೆ ಎಂದು ಜಿಲ್ಲಾ ವೈದ್ಯಾಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ನಿವೃತ್ತ ವೈದ್ಯಾಧಿಕಾರಿ ಡಾಕ್ಟರ್ ಎಸ್.ಜಿ ನಾರಾಯಣಸ್ವಾಮಿ ಅವರ ಹೆಸರಿಗೆ 8.20 ಲಕ್ಷ, ಸೋಮಶೇಖರ್ ಅವರ ಹೆಸರಿಗೆ 4.23 ಲಕ್ಷ, ಶ್ರೀನಿವಾಸ್ ಹೆಸರಿಗೆ 9.42 ಲಕ್ಷ, ಸಂಜಯ್ ಎಂಬ ಹೆಸರಿಗೆ 68 ಸಾವಿರ, ಪುರುಷೋತ್ತಮ್ ಎಂಬುವರ ಹೆಸರಿಗೆ 1.22 ಲಕ್ಷ, ಪ್ರಸನ್ನ ಎಂಬುವರಿಗೆ 68 ಸಾವಿರ, ಮನೋಹರ್ ಬಾಬು ಎಂಬವರಿಗೆ 62 ಸಾವಿರ ಮತ್ತು ಕೃಷ್ಣಪ್ಪ ಎಂಬುವರ ಹೆಸರಿಗೆ 3.15 ಲಕ್ಷ ಹಣ ಪಾವತಿಯಾಗಿದೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು