ಹಾಸನ: ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ವಿರುದ್ಧ ಜೆಡಿಎಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲಗೊಂಡ ಬಳಿಕ, ಚಂದ್ರೇಗೌಡ ತಮ್ಮ ಗೆಲುವನ್ನು ಹಾಸನ ಜಿಲ್ಲೆಯ ಜನತೆಯ ಆತ್ಮಗೌರವದ ಗೆಲುವು ಎಂದು ಬಣ್ಣಿಸಿದ್ದಾರೆ.
ಈ ಗೆಲುವಿಗೆ ಬಿಜೆಪಿಯ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್‌ರ ಬೆಂಬಲವೇ ಕಾರಣ ಎಂದು ಅವರು ತಿಳಿಸಿದ್ದಾರೆ.“ನಾನು ಯಾವುದೇ ಅವ್ಯವಹಾರ, ಅನೈತಿಕ ಚಟುವಟಿಕೆಯಲ್ಲಿ ತೊಡಗಿಲ್ಲ. ಕಪ್ಪು ಚುಕ್ಕೆ ಬಾರದಂತೆ ಆಡಳಿತ ನಡೆಸಿದ್ದೇನೆ. ಜೆಡಿಎಸ್ ಸದಸ್ಯರಿಗೆ ಪಕ್ಷದಿಂದ ವಿಪ್ ಜಾರಿಯಾಗಿತ್ತು, ಆದರೆ ಮಾನಸಿಕವಾಗಿ ಅವರು ನನ್ನ ಪರವೇ ಇದ್ದರು. ಹೀಗಾಗಿ ಪ್ರೀತಂ ಗೌಡ ಮತ್ತು ಶ್ರೇಯಸ್ ಪಟೇಲ್‌ರ ಮೊರೆ ಹೋದೆ,” ಎಂದು ಚಂದ್ರೇಗೌಡ ಸ್ಪಷ್ಟಪಡಿಸಿದ್ದಾರೆ.
ತಮ್ಮ ಗೆಲುವಿಗೆ ಬಿಜೆಪಿ ಸದಸ್ಯರು ಮತ್ತು ಸಂಸದರ ಸಂಪೂರ್ಣ ಬೆಂಬಲವಿತ್ತು ಎಂದು ಹೇಳಿರುವ ಚಂದ್ರೇಗೌಡ, “ಹಾಸನಾಂಬೆ ದೇವಿ ಮತ್ತು ಕೊಲ್ಲಾಪುರದ ದೇವಿಯ ಆಶೀರ್ವಾದದಿಂದ ಕೆಂಡದ ಹಾದಿಯಲ್ಲಿ ಜಯಶಾಲಿಯಾಗಿದ್ದೇನೆ. ಇನ್ಮುಂದೆ ಪ್ರೀತಂ ಗೌಡ ಮತ್ತು ಶ್ರೇಯಸ್ ಪಟೇಲ್ ಸೂಚಿಸಿದ ಮಾರ್ಗದಲ್ಲಿ ಹಾಸನವನ್ನು ಉತ್ತಮ ನಗರವಾಗಿ ರೂಪಿಸುತ್ತೇನೆ,” ಎಂದು ಘೋಷಿಸಿದ್ದಾರೆ.
ಜೆಡಿಎಸ್‌ನ ರಾಜಕೀಯ ತಂತ್ರವನ್ನು ವಿಫಲಗೊಳಿಸಿ ಅಧಿಕಾರದಲ್ಲಿ ಮುಂದುವರಿದಿರುವ ಚಂದ್ರೇಗೌಡ, ಈ ಗೆಲುವಿನ ಮೂಲಕ ತಮ್ಮ ಸ್ಥಾನವನ್ನು ಭದ್ರಗೊಳಿಸಿದ್ದಾರೆ. ಈ ಘಟನೆಯಿಂದ ಜೆಡಿಎಸ್‌ಗೆ ಭಾರೀ ಹಿನ್ನಡೆಯಾಗಿದ್ದು, ಮುಂದಿನ ರಾಜಕೀಯ ನಡೆಗಳ ಬಗ್ಗೆ ಕುತೂಹಲ ಮೂಡಿಸಿದೆ.