Home ದೇಶ ಉಜ್ಜಯಿನಿ ಮಾಸ್ಟರ್ ಪ್ಲಾನ್ ಮುಂದಿಟ್ಟುಕೊಂಡು ಸಿಎಂ ಮೋಹನ್ ಯಾದವ್ ಕುಟುಂಬದಿಂದ 168 ಎಕರೆ ಭೂ ಖರೀದಿ:...

ಉಜ್ಜಯಿನಿ ಮಾಸ್ಟರ್ ಪ್ಲಾನ್ ಮುಂದಿಟ್ಟುಕೊಂಡು ಸಿಎಂ ಮೋಹನ್ ಯಾದವ್ ಕುಟುಂಬದಿಂದ 168 ಎಕರೆ ಭೂ ಖರೀದಿ: ಭಾರಿ ಹಗರಣ ಬಯಲಿಗೆ!

0

ಹೊಸದೆಹಲಿ: ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎನ್ನಲಾದ ಬೃಹತ್ ಭೂ ಹಗರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಉಜ್ಜಯಿನಿ ಮಾಸ್ಟರ್ ಪ್ಲಾನ್ ಅನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳ ಕುಟುಂಬಸ್ಥರು ಮತ್ತು ಅವರಿಗೆ ಸಂಬಂಧಿಸಿದ ಕಂಪನಿಗಳು ಸ್ವಂತ ಲಾಭಕ್ಕಾಗಿ ನೂರಾರು ಎಕರೆ ಭೂಮಿಯನ್ನು ಖರೀದಿಸಿವೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ನಡೆಸಿದ ತನಿಖಾ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಉಜ್ಜಯಿನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 137 ಪ್ಲಾಟ್‌ಗಳ ಮೂಲಕ ಕನಿಷ್ಠ 168 ಎಕರೆ ಭೂಮಿಯನ್ನು ಸಿಎಂ ಕುಟುಂಬ ಖರೀದಿಸಿದೆ ಎಂದು ವರದಿ ತಿಳಿಸಿದೆ. ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಈ ಭೂ ಖರೀದಿಯ ನಂತರ, ಈ ಗ್ರಾಮಗಳು ಮತ್ತು ಪ್ರದೇಶಗಳು ಸರ್ಕಾರದ ಪ್ರಮುಖ ಮೂಲಸೌಕರ್ಯ ಯೋಜನೆಗಳು, ಹೊಸ ರಸ್ತೆಗಳು, ಹೆದ್ದಾರಿಗಳ ಜೋಡಣೆ (Alignments) ಹಾಗೂ ‘ಉಜ್ಜಯಿನಿ ಮಾಸ್ಟರ್ ಪ್ಲಾನ್-2035’ ಅಡಿಯಲ್ಲಿ ಪ್ರಸ್ತಾಪಿಸಲಾದ ಪ್ರಮುಖ ಬದಲಾವಣೆಗಳ ವ್ಯಾಪ್ತಿಗೆ ಒಳಪಟ್ಟಿವೆ. ಈ ಮಾಸ್ಟರ್ ಪ್ಲಾನ್ ಅನ್ನು 2023 ರ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

ಈ ಅಕ್ರಮ ಭೂ ವ್ಯವಹಾರಗಳಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಮಾತ್ರವಲ್ಲದೆ ಅವರ ಪತ್ನಿ ಸೀಮಾ ಯಾದವ್, ಪುತ್ರ ವೈಭವ್ ಯಾದವ್, ಸೊಸೆ ಶಾಲಿನಿ ಯಾದವ್, ಸಹೋದರರಾದ ನಾರಾಯಣ್ ಮತ್ತು ನಂದ್‌ಲಾಲ್ ಯಾದವ್, ಸಹೋದರಿ ಕಲಾವತಿ ಯಾದವ್, ಸೋದರಸಳಿಯ ಅಭಯ್ ಯಾದವ್ ಹಾಗೂ ಹತ್ತಿರದ ಸಂಬಂಧಿಗಳಾದ ಗೋವಿಂದ್ ಮತ್ತು ನೀಲೇಶ್ ಯಾದವ್ ಸೇರಿದಂತೆ ದೊಡ್ಡ ಕುಟುಂಬವೇ ಭಾಗಿಯಾಗಿದೆ ಎಂದು ಪತ್ರಿಕೆ ಉಲ್ಲೇಖಿಸಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿಗಳು ಸ್ವತಃ ಉಜ್ಜಯಿನಿಯಲ್ಲಿ ಕನಿಷ್ಠ 17 ಎಕರೆ ಭೂಮಿಯನ್ನು ಹೊಂದಿದ್ದು, ಇದರಲ್ಲಿ 1998 ರಲ್ಲಿ ಸವಾರಖೇಡಿಯಲ್ಲಿ ಖರೀದಿಸಿದ 13 ಎಕರೆ ಭೂಮಿಯೂ ಸೇರಿದೆ. ಇಷ್ಟೇ ಅಲ್ಲದೆ, ಸಿಎಂ ಮತ್ತು ಅವರ ಪತ್ನಿ ತಮ್ಮ ಕುಟುಂಬಕ್ಕೆ ಸೇರಿದ ‘ಶ್ರೀ ಸಿದ್ಧಿ ವಿನಾಯಕ ದೇವ್‌ಕಾನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಶೇಕಡಾ 73 ರಷ್ಟು ಪಾಲನ್ನು ಹೊಂದಿದ್ದಾರೆ.

ಈ ಸಂಸ್ಥೆಯ ಹೆಸರಿನಲ್ಲಿ ಸುಮಾರು 40 ಎಕರೆ ಭೂಮಿ ಇದ್ದು, ಇದರಲ್ಲಿ 2024-25ರ ಅವಧಿಯಲ್ಲಿ ಹೊಸದಾಗಿ ಖರೀದಿಸಿದ ಜಮೀನು ಕೂಡ ಸೇರಿದೆ ಎನ್ನಲಾಗಿದೆ.

ಭೂ ಹಗರಣದ ಆರೋಪಗಳ ಕುರಿತು ಮುಖ್ಯಮಂತ್ರಿ ಮೋಹನ್ ಯಾದವ್ ನೇರವಾಗಿ ಪ್ರತಿಕ್ರಿಯಿಸದಿದ್ದರೂ, ಅವರ ಸೋದರಸಂಬಂಧಿ ಗೋವಿಂದ್ ಯಾದವ್ ಅವರ ಪುತ್ರ ಅನಂತ್ ಯಾದವ್ ತಮ್ಮ ಕುಟುಂಬದ ರಿಯಲ್ ಎಸ್ಟೇಟ್ ವ್ಯವಹಾರವನ್ನು ಸಮರ್ಥಿಸಿಕೊಂಡಿದ್ದಾರೆ. ತಾವು 2010 ರಿಂದಲೂ ರಿಯಾಲ್ಟಿ ವ್ಯವಹಾರದಲ್ಲಿದ್ದೇವೆ ಮತ್ತು ತಮ್ಮ ತಂದೆ ಹಾಗೂ ಮೋಹನ್ ಯಾದವ್ ಅವರಿಗೆ ಹಲವು ಹೌಸಿಂಗ್ ಯೋಜನೆಗಳು ಮತ್ತು ಕಂಪನಿಗಳಿವೆ ಎಂದು ಅವರು ಹೇಳಿದ್ದಾರೆ.

ಖಾಸಗಿ ಜಮೀನುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ತಮ್ಮ ಹಕ್ಕಾಗಿದ್ದು, ಮುಖ್ಯಮಂತ್ರಿಗಳು ನಮ್ಮ ಕುಟುಂಬದವರಾದ ತಕ್ಷಣಕ್ಕೆ ನಾವು ನಮ್ಮ ವ್ಯಾಪಾರವನ್ನು ಮುಚ್ಚಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಮೂಲಸೌಕರ್ಯ ಯೋಜನೆಗಳಿಂದ ಭವಿಷ್ಯದಲ್ಲಿ ಕೋಟ್ಯಂತರ ರೂಪಾಯಿ ಲಾಭ ತಂದುಕೊಡುವ ಜಾಗಗಳಲ್ಲೇ ಮಧ್ಯಪ್ರದೇಶ ಮುಖ್ಯಮಂತ್ರಿಗಳ ಕುಟುಂಬ ಎಕರೆಗಟ್ಟಲೆ ಭೂಮಿ ಖರೀದಿಸಿದೆ ಎಂಬ ವರದಿಯ ಬೆನ್ನಲ್ಲೇ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ರಾಜ್ಯದಲ್ಲಿರುವ ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರದ ಅವಧಿಯಲ್ಲಿ ‘ಲೂಟಿ ಇಂಜಿನ್’ ಪೂರ್ಣ ವೇಗದಲ್ಲಿ ಸಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮುಖ್ಯಮಂತ್ರಿ ಮೋಹನ್ ಯಾದವ್ ಅವರೇ ಖುದ್ದಾಗಿ ಈ ಲೂಟಿಯಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘X’ ಪೋಸ್ಟ್‌ನಲ್ಲಿ ಆಪಾದಿಸಿದ್ದಾರೆ.

“ಮಧ್ಯಪ್ರದೇಶದಿಂದ ಕೇಂದ್ರಕ್ಕೆ ಹೋಗಿರುವ ಕೃಷಿ ಸಚಿವರೇ (ಶಿವರಾಜ್ ಸಿಂಗ್ ಚೌಹಾಣ್ ಅವರ ಕುರಿತು ಉಲ್ಲೇಖಿಸಿ) ಮುಖ್ಯಮಂತ್ರಿಗಳ ವಿರುದ್ಧ ಇಂತಹ ತಪ್ಪು ವರದಿಗಳು ಪ್ರಚಾರವಾಗುವಂತೆ ಮಾಡಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ಅಧಿಕಾರದ ಪೀಠ ಮತ್ತು ಅದರಿಂದ ಸಿಗುವ ಲಾಭದ ಪಾಲಿನ ಒಡೆತನಕ್ಕಾಗಿಯೇ ಈ ಆಂತರಿಕ ಕಚ್ಚಾಟ ನಡೆಯುತ್ತಿರುವಂತೆ ಕಾಣಿಸುತ್ತಿದೆ,” ಎಂದು ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ.

You cannot copy content of this page

Exit mobile version