ಬೆಂಗಳೂರು: “ಸಹಜೀವನ ತಪ್ಪು ಮಗಳೇ, ಇಷ್ಟೊಂದು ಲಕ್ಷ ರೂಪಾಯಿ ಸಾಲ ಏಕೆ ಮಾಡಿದೆ?” ಎಂದು ಪ್ರಶ್ನಿಸಿದ ಹೆತ್ತವರ ವಿರುದ್ಧ ಹಗೆ ಸಾಧಿಸಿದ ಹಿರಿಯ ಮಗಳು, ಕಣ್ಣೆದುರೇ ತನ್ನ ಪ್ರೇಮಿಯೊಂದಿಗೆ ಸೇರಿ ಹೆತ್ತ ಅಮ್ಮ-ಅಪ್ಪ ಹಾಗೂ ಒಡಹುಟ್ಟಿದ ತಂಗಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಸೋಮವಾರ ನಡೆದಿದೆ. ಪ್ರಾಣ ಉಳಿಸಿಕೊಳ್ಳಲು ತಂದೆ-ತಾಯಿ ಮತ್ತು ತಂಗಿ ಎಷ್ಟೇ ಪ್ರಯತ್ನಿಸಿದರೂ ಬಿಡದ ಹಿರಿಯ ಮಗಳು, ತನ್ನ ಪ್ರಿಯಕರನೊಂದಿಗೆ ಸೇರಿ ಇಡೀ ಕುಟುಂಬವನ್ನೇ ಮುಗಿಸಿದ್ದಾಳೆ.
ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಹಳ್ಳಿ ಪ್ರದೇಶದ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಾಗಿದ್ದ ಸೋಮಸುಂದರ್ (55), ಅವರ ಪತ್ನಿ ಮುತ್ತುಲಕ್ಷ್ಮಿ (48) ಮತ್ತು ಕಿರಿಯ ಮಗಳು ಸುಪ್ರಿಯಾ (20) ಸೋಮವಾರ ದಾರುಣವಾಗಿ ಹತ್ಯೆಗೀಡಾದ ದುರ್ದೈವಿಗಳು. ಕುಟುಂಬದ ಹಿರಿಯ ಮಗಳು ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನ್ನೆತ್ ಈ ತ್ರಿವಳಿ ಕೊಲೆ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ.
ಶ್ವೇತಾ ಕಳೆದ ಕೆಲವು ಸಮಯದಿಂದ ಕೆನ್ನೆತ್ ಎಂಬಾತನೊಂದಿಗೆ ಸಹಜೀವನ (ಲಿವ್-ಇನ್ ರಿಲೇಶನ್‌ಶಿಪ್) ನಡೆಸುತ್ತಿದ್ದಳು ಎನ್ನಲಾಗಿದೆ. ಈ ನಡವಳಿಕೆಯನ್ನು ತಿದ್ದಿಕೊಳ್ಳುವಂತೆ ಹಾಗೂ ಜೀವನದ ಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ಹೆತ್ತವರು ಆಕೆಯನ್ನು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಈ ಭೀಕರ ಕೃತ್ಯ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ
