Home ರಾಜ್ಯ ರಾಜ್ಯ ಸರ್ಕಾರದ ಒಳಮೀಸಲಾತಿ ಅಧಿಸೂಚನೆಗೆ ಹೈಕೋರ್ಟ್ ಬ್ರೇಕ್: ಸರ್ಕಾರಕ್ಕೆ ನೋಟಿಸ್ ಜಾರಿ

ರಾಜ್ಯ ಸರ್ಕಾರದ ಒಳಮೀಸಲಾತಿ ಅಧಿಸೂಚನೆಗೆ ಹೈಕೋರ್ಟ್ ಬ್ರೇಕ್: ಸರ್ಕಾರಕ್ಕೆ ನೋಟಿಸ್ ಜಾರಿ

0

ಬೆಂಗಳೂರು: ರಾಜ್ಯ ಸರ್ಕಾರದ ಒಳಮೀಸಲಾತಿ ವರ್ಗೀಕರಣದ ಮೇ 8 ರ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.

‘ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಒಕ್ಕೂಟ’ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು, ಈ ಕುರಿತು ಆಕ್ಷೇಪಣೆ ಹಾಗೂ ವಿವರವಾದ ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ (ಸರ್ಕಾರಕ್ಕೆ) ನಿರ್ದೇಶನ ನೀಡಿದೆ.

ಅರ್ಜಿದಾರರ ಪರ ವಕೀಲರು, ಮೇ 8 ರ ಒಳಮೀಸಲಾತಿ ಅಧಿಸೂಚನೆಯಲ್ಲಿ ಅತ್ಯಂತ ಹಿಂದುಳಿದ ಅಸ್ಪೃಶ್ಯ ಸಮುದಾಯಗಳನ್ನು ‘ಸಿ’ ವರ್ಗಕ್ಕೆ ಸೇರಿಸಲಾಗಿದ್ದು, ಗ್ರೂಪ್ ‘ಎ’ ಮತ್ತು ‘ಬಿ’ ಉದ್ಯೋಗಗಳಲ್ಲಿ ಕೇವಲ ಶೇಕಡಾ 4.5 ರಷ್ಟು ಮಾತ್ರ ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಪರಿಶಿಷ್ಟ ಜಾತಿ (SC) ಪಟ್ಟಿಯಲ್ಲಿರುವ ಇತರ ಪ್ರಭಾವಿ ಜಾತಿಗಳಿಗೆ ಶೇಕಡಾ 5.25 ರಷ್ಟು ಹೆಚ್ಚಿನ ಮೀಸಲಾತಿ ನೀಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಆಗಸ್ಟ್ 25, 2025 ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಈಗಾಗಲೇ ನ್ಯಾಯಾಲಯದ ಮುಂದೆ ಬಾಕಿ ಇರುವಾಗಲೇ, ಸರ್ಕಾರವು ನಿಯಮಬಾಹಿರವಾಗಿ ಮೇ 8 ರ ಹೊಸ ಆದೇಶವನ್ನು ಹೊರಡಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

“ಸರ್ಕಾರದ ಮೇ 8 ರ ಆದೇಶವು ಹಳೆಯ ದೋಷಗಳನ್ನೇ ಮುಂದುವರಿಸಿದ್ದು, ಯಾವುದೇ ವೈಜ್ಞಾನಿಕ, ತಾರ್ಕಿಕ ಅಥವಾ ವಸ್ತುನಿಷ್ಠ ಮಾನದಂಡಗಳಿಲ್ಲದೆ ಪರಿಶಿಷ್ಟ ಜಾತಿಗಳ ಒಳವರ್ಗೀಕರಣ ಮಾಡಲಾಗಿದೆ. ವಿವಿಧ ಸಮುದಾಯಗಳ ನಡುವಿನ ಹಿಂದುಳಿದಿರುವಿಕೆಯನ್ನು ಅಳೆಯಲು ಯಾವುದೇ ಪ್ರಾಯೋಗಿಕ ದತ್ತಾಂಶಗಳು (Empirical Data) ಅಥವಾ ಸ್ಪಷ್ಟ ವರ್ಗೀಕರಣದ ಆಧಾರಗಳು ಸರ್ಕಾರದ ಬಳಿ ಇಲ್ಲ. ಹೀಗಾಗಿ ಸರ್ಕಾರದ ಈ ಕ್ರಮವು ಕರ್ನಾಟಕದ ಪರಿಶಿಷ್ಟ ಜಾತಿಗಳ ನಡುವೆ ತಾರತಮ್ಯ ಮತ್ತು ಅಭಾಗಲಬ್ಧ ವಿಭಜನೆಗೆ ಕಾರಣವಾಗುತ್ತದೆ,” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಒಂದೇ ಪರಿಸ್ಥಿತಿಯಲ್ಲಿರುವ ಪರಿಶಿಷ್ಟ ಜಾತಿಯ ವಿವಿಧ ಸಮುದಾಯಗಳ ನಡುವೆ ಇದು ಪ್ರತಿಕೂಲ ತಾರತಮ್ಯವನ್ನು ಸೃಷ್ಟಿಸಲಿದ್ದು, ಅತ್ಯಂತ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯಗಳು ಸಮಾನವಾಗಿ ಹಂಚಿಕೆಯಾಗುವುದನ್ನು ತಡೆಯುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇ 8 ರ ಅಧಿಸೂಚನೆಯು ಕಾನೂನುಬಾಹಿರ, ಅನಿಯಂತ್ರಿತ ಮತ್ತು ಸಂವಿಧಾನದ ವಿಧಿಗಳಾದ 14, 15(4) ಮತ್ತು 16(4) ರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

You cannot copy content of this page

Exit mobile version