ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ (ಐಎಎಸ್ ಅಧಿಕಾರಿ) ಫೌಜಿಯಾ ತರನ್ನಮ್ ಅವರ ವಿರುದ್ಧ “ಪಾಕಿಸ್ತಾನಿ” ಎಂದು ಹೇಳಿಕೆ ನೀಡಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ (MLC) ಎನ್. ರವಿಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. “ರಾಜಕಾರಣಿಗಳು ತಮ್ಮ ನಾಲಿಗೆಯ ಮೇಲೆ ನಿಯಂತ್ರಣವಿಟ್ಟುಕೊಳ್ಳಬೇಕು” ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ.
ಎನ್. ರವಿಕುಮಾರ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಅಧಿಕಾರಿಗಳ ಧರ್ಮದ ಆಧಾರದ ಮೇಲೆ ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ಕೋರ್ಟ್ ಎಂದಿಗೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
:
”ಫೌಜಿಯಾ ತರನ್ನಮ್ ಅವರು ನಮ್ಮ ರಾಜ್ಯದ ಗೌರವಾನ್ವಿತ ಐಎಎಸ್ ಅಧಿಕಾರಿ. ಅವರು ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಅವರನ್ನು ಪಾಕಿಸ್ತಾನದವರು ಎಂದು ಕರೆಯುವುದನ್ನು ಕ್ಷಮಿಸಲು ಸಾಧ್ಯವಿಲ್ಲ. ನೀವು ಏನೇ ಬೇಕಾದರೂ ಮಾತನಾಡಬಹುದು ಎಂದು ಕೊಂಡಿದ್ದೀರಾ?” ಎಂದು ನ್ಯಾಯಮೂರ್ತಿಗಳು ಅರ್ಜಿದಾರರನ್ನು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ನ್ಯಾಯಮೂರ್ತಿಗಳು, “ಎಲ್ಲಾ ರಾಜಕೀಯ ನಾಯಕರು ತಮ್ಮ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳಬೇಕು. ಇಲ್ಲವಾದರೆ ಕ್ರಿಮಿನಲ್ ನ್ಯಾಯಾಲಯಗಳು ಅನಗತ್ಯ ಪ್ರಕರಣಗಳಿಂದ ತುಂಬಿಹೋಗುತ್ತವೆ. ಪಕ್ಷ ಯಾವುದೇ ಇರಲಿ, ಪರಸ್ಪರ ಕೆಸರೆರಚಾಟ ನಡೆಸುವುದನ್ನು ನಿಲ್ಲಿಸಿ. ನಾಯಕರು ಜ್ವಲಂತ ಸಮಸ್ಯೆಗಳು ಮತ್ತು ನೀತಿಗಳ ಬಗ್ಗೆ ಚರ್ಚಿಸುತ್ತಿಲ್ಲ, ಬದಲಿಗೆ ಕೇವಲ ವೈಯಕ್ತಿಕ ವಾಗ್ದಾಳಿ ನಡೆಸುತ್ತಿದ್ದಾರೆ. ಇದರಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ” ಎಂದು ಕಳವಳ ವ್ಯಕ್ತಪಡಿಸಿದರು.
ರವಿಕುಮಾರ್ ಪರ ವಕೀಲರು, ‘ಅವರು ಈಗಾಗಲೇ ಕ್ಷಮೆಯಾಚಿಸಿದ್ದಾರೆ’ ಎಂದು ಕೋರ್ಟ್‌ಗೆ ತಿಳಿಸಿದಾಗ, “ಕೇವಲ ಕ್ಷಮೆಯಾಚಿಸುವುದರಿಂದ ಅವರು ಆಡಿದ ಮಾತಿನಿಂದಾದ ಪರಿಣಾಮವನ್ನು ಅಳಿಸಿಹಾಕಲು ಸಾಧ್ಯವೇ? ಒಬ್ಬ ಅಧಿಕಾರಿಯನ್ನು ಧರ್ಮದ ಆಧಾರದ ಮೇಲೆ ಹೇಗೆ ಗುರಿಮಾಡುತ್ತೀರಿ?” ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಪ್ರತಿಭಟನೆಯ ವೇಳೆ ರಾಷ್ಟ್ರಧ್ವಜ ಹಿಡಿಯಲು ಪೊಲೀಸರು ತಡೆದಿದ್ದಾರೆ ಎಂಬ ಆರೋಪಕ್ಕೂ ಸಂಬಂಧಿಸಿದಂತೆ ಎಲ್ಲಾ ವಿವರಗಳು ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ.
