ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಆಗಸ್ಟ್ 10ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ‘ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026’ (FCRA Bill) ಮಂಡನೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ತಮ್ಮ ಬಲ ಪ್ರದರ್ಶಿಸಲು ಮತ್ತು ಪ್ರತಿಭಟನೆಯನ್ನು ತೀವ್ರಗೊಳಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ.
ಶಾ ಅವರ ಆಗಮನವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೇಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ತಮ್ಮ ಎಲ್ಲಾ ಸಂಸದರಿಗೆ ಅಧಿವೇಶನಕ್ಕೆ ತಪ್ಪದೇ ಹಾಜರಾಗುವಂತೆ ತ್ರಿಲೈನ್ ವೀಪ್ (Whip) ಜಾರಿಗೊಳಿಸಿವೆ.
ವಿಪಕ್ಷಗಳ ಕಾರ್ಯತಂತ್ರ:
ಅಧಿವೇಶನ ಪ್ರಾರಂಭವಾದಾಗಿನಿಂದಲೂ ವಿರೋಧ ಪಕ್ಷಗಳು ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ಆಗಮಿಸಿ ಪ್ರಚಲಿತ ವಿಷಯಗಳ ಕುರಿತು ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದಿವೆ. ಹೀಗಾಗಿ, ಗೃಹ ಸಚಿವಾಲಯಕ್ಕೆ ಸಂಬಂಧಿಸಿದ FCRA ಮಸೂದೆ ಚರ್ಚೆಗೆ ಬಂದಾಗ ಅಮಿತ್ ಶಾ ಸದನದಲ್ಲಿ ಹಾಜರಿರುತ್ತಾರೆ ಎಂಬ ನಿರೀಕ್ಷೆಯಿದ್ದು, ಆ ಸಮಯದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ತಂತ್ರ ರೂಪಿಸಿವೆ.
ಕ್ರಿಶ್ಚಿಯನ್ ಸಂಸ್ಥೆಗಳ ಕಳವಳ ಮತ್ತು ಸರ್ಕಾರದ ಭರವಸೆ:
ಈ ನಡುವೆ, ಎಫ್‌ಸಿಆರ್‌ಎ ಮಸೂದೆಯ ಕೆಲ ನಿಬಂಧನೆಗಳ ಕುರಿತು ಕ್ರಿಶ್ಚಿಯನ್ ಸಂಸ್ಥೆಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ವಿದೇಶಿ ದೇಣಿಗೆ ನೋಂದಣಿ ರದ್ದಾದ ಸಂಸ್ಥೆಗಳ ಆಸ್ತಿಯನ್ನು ಹಿಂದಿನ ದಿನಾಂಕದಿಂದ ಜಾರಿಗೆ ಬರುವಂತೆ (Retrospective effect) ಸರ್ಕಾರಿ ಕಂಟ್ರೋಲ್‌ಗೆ ತೆಗೆದುಕೊಳ್ಳುವ ನಿಬಂಧನೆಗಳ ಬಗ್ಗೆ ಆಕ್ಷೇಪ ಕೇಳಿಬಂದಿದೆ.
ಮಿಝೋರಾಂ ಮುಖ್ಯಮಂತ್ರಿ ಲಾಲ್ದುಹೋಮಾ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಈ ವೇಳೆ, ಯಾವುದೇ ಕಾಯ್ದೆಯನ್ನು ‘ಹಿಂದಿನ ದಿನಾಂಕದಿಂದ ಜಾರಿಗೆ ಬರುವಂತೆ’ (Retrospective) ಅನ್ವಯಿಸುವುದಿಲ್ಲ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಮಸೂದೆಯು ಆಗಸ್ಟ್ 10ರಿಂದ 12ರ ನಡುವೆ ಲೋಕಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದ್ದು, ಮುಂದಿನ ವಾರದ ಸಂಸತ್ ಕಲಾಪ ತೀವ್ರ ಕಾವು ಪಡೆದುಕೊಳ್ಳಲಿದೆ
