ಬೇತುಲ್: ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಪೊಲೀಸ್ ಪೇದೆಯೋರ್ವ ಸಾರ್ವಜನಿಕವಾಗಿ ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಅಮಾನುವೀಯ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಳೆದ ವಾರ ಮೊಹ್ದಾ ಪೊಲೀಸ್ ಠಾಣಾ ವ್ಯಾಪ್ತಿಯ ಡೆಸ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಅಂಗಡಿಗಳ ಮುಂಭಾಗದಲ್ಲಿ ಇಬ್ಬರು ಯುವಕರನ್ನು ಹಗ್ಗದಿಂದ ಕಟ್ಟಿ ಹಾಕಿ ಪೊಲೀಸರು ಥಳಿಸುತ್ತಿರುವುದು ಸೆರೆಯಾಗಿದೆ. ಈ ವೇಳೆ ಸ್ಥಳದಲ್ಲಿ ನಿಂತಿಕೊಂಡು ನೋಡುತ್ತಿದ್ದ ಸ್ಥಳೀಯರು ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ. ಅಪ್ರಾಪ್ತ ವಯಸ್ಕರು ಸೇರಿದಂತೆ ಹಲವರು ಘಟನೆ ನಡೆದಾಗ ಸ್ಥಳದಲ್ಲಿದ್ದರು. ವ್ಯಕ್ತಿಯೊಬ್ಬರು ಇಬ್ಬರನ್ನು ಕಟ್ಟಲು ಬಳಸಿದ ಹಗ್ಗವನ್ನು ಹಿಡಿದುಕೊಂಡಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಮಲಾ ಜೋಶಿ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದು, ಮೊಬೈಲ್ ಫೋನ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಡ್ ಕಾನ್ಸ್ಟೆಬಲ್ ಕಮತಾ ಪ್ರಸಾದ್ ಕೀರ್ ಇಬ್ಬರನ್ನು ಥಳಿಸಿದ ವಿಡಿಯೋ ಗಮನಕ್ಕೆ ಬಂದಿದೆ. ವೀಡಿಯೋವನ್ನು ಆಧರಿಸಿ, ಬೇತುಲ್ ಪೊಲೀಸ್ ಅಧೀಕ್ಷಕರು ದಾಮ್ಜಿಪುರ ಪೊಲೀಸ್ ಹುದ್ದೆಗೆ ನಿಯೋಜಿಸಲಾದ ಹೆಡ್ ಕಾನ್ಸ್ಟೇಬಲ್ ಕಮತಾ ಪ್ರಸಾದ್ ಕೀರ್ ಅವರನ್ನು ಅಮಾನತುಗೊಳಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.