ಮಧ್ಯಪ್ರದೇಶದಲ್ಲಿ ಘೋರ ದುರಂತ ಸಂಭವಿಸಿದೆ. ಖಾಂಡವಾದಲ್ಲಿ ತೀವ್ರ ವಿಷಾದದ ಛಾಯೆ ಆವರಿಸಿದೆ. ದುರ್ಗಾಮಾತೆ ವಿಗ್ರಹ ವಿಸರ್ಜನೆ ಉತ್ಸವದಲ್ಲಿ ಈ ದುರ್ಘಟನೆ ನಡೆದಿದೆ. ದುರ್ಗಾ ಮೂರ್ತಿಯನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿದ್ದ ಟ್ರಾಕ್ಟರ್ ಕೆರೆಗೆ ಬಿದ್ದಿದೆ.
ಪರಿಣಾಮವಾಗಿ, 11 ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಆ ಪ್ರದೇಶದಲ್ಲಿ ತೀವ್ರ ದುಃಖ ಮಡುಗಟ್ಟಿದೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಟ್ರಾಕ್ಟರ್ ಅಬ್ನಾ ನದಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 14 ಜನರು ಮುಳುಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಅಧಿಕಾರಿಗಳು ಇದುವರೆಗೆ 11 ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಪಾಂದಾನ ಪೊಲೀಸ್ ಠಾಣೆ ವ್ಯಾಪ್ತಿಯ ಜಮಾಲಿ ಸಮೀಪದ ಸ್ಥಳದಲ್ಲಿ ಜಿಲ್ಲಾಡಳಿತ ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ.
ಸಹಾಯಕ ಪೊಲೀಸ್ ಅಧೀಕ್ಷಕರು (ಗ್ರಾಮೀಣ) ಅಭಿಷೇಕ್ ರಂಜನ್ ಮಾತನಾಡಿ, 12 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಟ್ರಾಕ್ಟರ್‌ನ ಇಗ್ನಿಷನ್ ಕೀ ತಿರುಗಿಸಿದ್ದರಿಂದ ಟ್ರಾಕ್ಟರ್ ಸ್ಟಾರ್ಟ್ ಆಗಿ ಮುಂದೆ ಸಾಗಿತು ಎಂದು ಹೇಳಿದರು. ವಿಗ್ರಹಗಳಿಂದ ತುಂಬಿದ್ದ ಟ್ರಾಲಿಯು ಸೇತುವೆಯಿಂದ ನದಿಗೆ ಜಾರಿ ಬಿದ್ದಿದೆ. ಟ್ರಾಕ್ಟರ್‌ನಲ್ಲಿದ್ದವರೆಲ್ಲರೂ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಮೋಹನ್ ಯಾದವ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಸಂಬಂಧಿಕರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಪ್ರಸ್ತುತ ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ಮುಂದುವರಿದಿವೆ ಎಂದು ಅವರು ತಿಳಿಸಿದರು.