ಮಹಾಪುರುಷರ ಗಮನಕ್ಕೆ: ಸಂಘಮಿತ್ರೆ ನಾಗರಘಟ್ಟ ಬರೆದ ಕವಿತೆ

ಮಹಾಪುರುಷರ ಗಮನಕ್ಕೆ

ಈಗಾಗಲೇ ನಿಮಗೆ ಬೇಕಾದಷ್ಟು
ಸ್ವಾತಂತ್ರ್ಯ ‌ಕೈ ಕಟ್ಟಿ ಕೊಟ್ಟಾಗಿದೆ
ಅದಕ್ಕೆ ಸಾಕ್ಷಿಯಾಗಿ ಕೊರಳಲ್ಲಿ
ನೇತಾಡುವ ಬಂಗಾರದ ತಾಳಿಸರ
ನಮ್ಮ ಇಡೀ ಬದುಕಿನ ಗುರುತನ್ನೇ
ಕಾಣುವಂತೆ ನಗುವಂತೆ ಬದಲಿಸಿದೆ.

ಈಗ ಕನ್ನಡಿಯ ಮುಂದೆ ನಿಲ್ಲುವಾಗ
ಎದ್ದುಗಾಣಿಸುವ ನಮ್ಮದೇ ವಕ್ರಚಿತ್ರ
ಹಿಂಜರಿಯುತ್ತದೆ ನಿಮ್ಮ ನೆರಳಿಗೆದರಿ
ಆಗಾಗ ಮೈ ಸವರುವ ನಿಮ್ಮ ಕೈಗಳ
ಪಲ್ಲಟಕ್ಕೆ ಕಾರಣ ಕೇಳುವಷ್ಟಾದರೂ
ನಮಗೆ ಸ್ವತಂತ್ರ ಕೊಟ್ಟುಬಿಡಿ ಸಾಕು.

ಎದೆಕಚ್ಚಿದ ಕಂದಮ್ಮಗಳ ತುಟಿಗಳು
ನೆತ್ತರಾಗದಂತೆ ಕಾಳಜಿವಹಿಸುವಾಗ
ನಮ್ಮ ನಡುವಿನ ಮೀರಿದ ಗಡಿಗಳು 
ನೆನಪಾಗುತ್ತವೆ ಎಚ್ಚರದ ಗಂಟೆಗಳ
ಆರ್ಭಟದಂತೆ ನಡುವೆ ಕೆಣಕುವ 
ಸಹಜ ಸೆಳೆತ್ತಕ್ಕಾದರೂ ಕಿವಿಗೊಡಿ.

ಎಂಜಲಿನ ಮುಸುರೆ ಪಾತ್ರೆಗಳ ತಿಕ್ಕಿ
ಅಂಗಿಯ ಕೊಳೆಯ ಉಜ್ಜಿ ತೊಳೆದ
ನಮ್ಮ ಬಡ ಜೀವಗಳು ಕಾಯುತ್ತಿವೆ 
ಮತ್ತದೇ ಬಿಡುಗಡೆಯ ಬಂಧನಕ್ಕೆ
ಇದು ಪಂಜರಪಕ್ಷಿಯ ಕಿರುಹಾಡು.

~ ಸಂಘಮಿತ್ರೆ ನಾಗರಘಟ್ಟ

Related Articles

ಇತ್ತೀಚಿನ ಸುದ್ದಿಗಳು