ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ಮುಖಂಡರ ಮೇಲೆ ದೆಹಲಿ ಪೊಲೀಸರು ನಡೆಸಿರುವ ಬಲಪ್ರಯೋಗ ಹಾಗೂ ಬಂಧನವನ್ನು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ಸತ್ಯ ನಮ್ಮ ಕಡೆಗಿದೆ, ಯಾವುದೇ ಕಾರಣಕ್ಕೂ ನಮ್ಮ ಧೈರ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಅವರು ಗುಡುಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, “ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಪ್ರಶ್ನೆಗಳನ್ನು ಕೇಳುವುದು, ಹೊಣೆಗಾರಿಕೆಯನ್ನು ಬಯಸುವುದು ಹಾಗೂ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಯಾವುದೇ ತಪ್ಪಲ್ಲ. ಚುನಾಯಿತ ಜನಪ್ರತಿನಿಧಿಗಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುತ್ತಿದ್ದರು. ಆದರೆ ದೆಹಲಿ ಪೊಲೀಸರು ಸಂಸದರನ್ನು ಎಳೆದೊಯ್ದು, ಅನುಚಿತವಾಗಿ ನಡೆದುಕೊಂಡ ರೀತಿ ಅತ್ಯಂತ ಹೇಯ ಹಾಗೂ ಖಂಡನೀಯ” ಎಂದು ಕಿಡಿಕಾರಿದ್ದಾರೆ.
ಮುಖ್ಯವಾಗಿ ಪ್ರಿಯಾಂಕಾ ಗಾಂಧಿ ಮತ್ತು ಮಹಿಳಾ ನಾಯಕಿಯರನ್ನು ಪೊಲೀಸರು ನಡೆಸಿಕೊಂಡ ರೀತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಅವರು, “ರಾಜಕೀಯ ಭಿನ್ನಾಭಿಪ್ರಾಯಗಳಿಗಾಗಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ಬಲಪ್ರಯೋಗ ಮಾಡುವುದು ಸರಿಯಲ್ಲ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕಿನ ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಪಾರದರ್ಶಕ ಉತ್ತರ ನೀಡಬೇಕೇ ಹೊರತು, ಪೊಲೀಸರ ಮೂಲಕ ಹಲ್ಲೆ ಮತ್ತು ದೌರ್ಜನ್ಯ ನಡೆಸುವುದಲ್ಲ” ಎಂದು ಆಕ್ಷೇಪಿಸಿದರು.
ವಿರೋಧದ ಧ್ವನಿಯನ್ನು ಹತ್ತಿಕ್ಕುವುದರಿಂದ ಪ್ರಜಾಪ್ರಭುತ್ವ ಎಂದಿಗೂ ಬಲಿಷ್ಠವಾಗುವುದಿಲ್ಲ; ಬದಲಿಗೆ ಜನಸಾಮಾನ್ಯರ ಧ್ವನಿಯನ್ನು ಆಲಿಸಿ ಅವರಿಗೆ ಉತ್ತರಿಸುವ ಧೈರ್ಯ ಆಡಳಿತಗಾರರಿಗೆ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. “ಸತ್ಯ ನಮ್ಮ ಪರವಾಗಿದೆ. ಎಷ್ಟೇ ಬಲಪ್ರಯೋಗ, ದಬ್ಬಾಳಿಕೆ ಅಥವಾ ಬೆದರಿಕೆ ಹಾಕಿದರೂ ನಮ್ಮ ಸಂಕಲ್ಪವನ್ನು ಮುರಿಯಲು ಸಾಧ್ಯವಿಲ್ಲ. ದೇಶದ ಜನರ ಮತದ ಪಾವಿತ್ರ್ಯತೆ ಮತ್ತು ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸವನ್ನು ಕಾಪಾಡಲು ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಹೇಳಿದ್ದಾರೆ.
