ಬೆಂಗಳೂರು: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನೀಲಂಗಾ ತಾಲೂಕಿನ ಕಾಸರ್ ಬಾಲ್ಕುಂದ ಗ್ರಾಮದಲ್ಲಿ ಹಳೆಯ ಕನ್ನಡ ಲಿಪಿ ಮತ್ತು ಕನ್ನಡ ಭಾಷೆಯಲ್ಲಿರುವ 24 ಸಾಲುಗಳ ಶಾಸನ ಪತ್ತೆಯಾಗಿದೆ.
ಶಾಸನವನ್ನು ಪತ್ತೆ ಹಚ್ಚಿದ ಮಹಾರಾಷ್ಟ್ರದ ವಿದ್ಯುತ್ ಉಪ ಕೇಂದ್ರದ ನಿರ್ವಾಹಕರಾದ ಕೃಷ್ಣ ತ್ರಯಂಬಕ್ ಗುಡಾಡೆ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಇದು ಹತ್ತನೇ ಶಾಸನವಾಗಿದ್ದು, ಇದನ್ನು ಅಪ್ರಕಟಿತ ಎಂದು ಕರೆದಿದ್ದಾರೆ.
9ನೇ ಶತಮಾನದ ಜನಪ್ರಿಯ ಕನ್ನಡ ಕೃತಿ ಕವಿರಾಜಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತಾರದ ಕುರಿತು ಉಲ್ಲೇಖ ಇರುವುದನ್ನು ಕಾಣುತ್ತೇವೆ. ಅದರಲ್ಲಿ ಕನ್ನಡ ನಾಡು ಕಾವೇರಿ ಮತ್ತು ಗೋದಾವರಿ ನದಿಗಳ ನಡುವೆ ಹರಡಿಕೊಂಡಿದೆ ಎನ್ನುವ ವಿವರ ಇದೆ. ಇದಕ್ಕೆ ಪೂರಕವಾಗಿ ಈಗ, ಹೊಸದಾಗಿ ಪತ್ತೆಯಾದ 12ನೇ ಶತಮಾನದ ಕನ್ನಡ ಶಾಸನವು ಗೋದಾವರಿ ಜಲಾನಯನ ಪ್ರದೇಶದಿಂದ ಚಾಲುಕ್ಯ ರಾಜನು ಆಳುತ್ತಿರುವುದನ್ನು ವಿವರಿಸುವ ಬರಹಗಳಿವೆ ಎಂದು ಟೈಮ್ಸ್ ಆಪ್ ಇಂಡಿಯಾ ವರದಿ ಮಾಡಿದೆ.
ಗುಡಾಡೆ ಅವರು ಕೆಲ ವರ್ಷಗಳ ಹಿಂದೆ ‘ಶಾಸನ ಬೇಟೆಗಾರ’ ನಾಗಿದ್ದರು. ಅವರು ತಮ್ಮ ಅಪಾರ ಸಮಯವನ್ನು ಹಳ್ಳಿಗಳು, ಹಳೆಯ ದೇವಾಲಯಗಳಿಗೆ ಭೇಟಿ ನೀಡಿ ಶಾಸನಗಳನ್ನು ಪತ್ತೆಹಚ್ಚುವಲ್ಲಿಯೇ ಕಳೆದಿದ್ದಾರೆ. ಗುಡಾಡೆ ಅವರು ಒಮ್ಮೆ ವೀರಗಲ್ಲು ಪತ್ತೆಹಚ್ಚಿದ್ದರು. ಈ ಒಂದು ಘಟನೆ ಅವರಿಗೆ ಇನ್ನಷ್ಟು ಶಾಸನಗಳ ಹುಡುಕಾಟದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿತು.
ಕಲ್ಯಾಣಿ ಚಾಲುಕ್ಯ ಚಕ್ರವರ್ತಿ 2ನೇ ಜಗದೇಕಮಲ್ಲನ ಆಳ್ವಿಕೆಯ ಮೂರನೇ ವರ್ಷದ ವೈಶಾಕ ಪೌರ್ಣಮಿಯ ಗುರುವಾರ ರೌದ್ರ ಸಂವತ್ಸರದ ದಿನಾಂಕವನ್ನು ಈಗ ಪತ್ತೆಯಾಗಿರುವ ಶಾಸನದಲ್ಲಿ ಕಾಣಸಿಗುತ್ತದೆ ಎಂದು ವರದಿಯಾಗಿದೆ.
ಶಿಲಾಶಾಸನವನ್ನು ಅರ್ಥೈಸಿದ ರವಿಕುಮಾರ್ ನವಲಗುಂದ ಮಾತನಾಡಿ, ‘ಬೆಡ್ತಿಕೆರೆ ಬಲ್ಲಕುಂಡೆಯಲ್ಲಿ ಮಲ್ಲಾರ ಬಿಳಯ್ಯ ಎಂಬುವವರು ಸೋಮನಾಥ, ನಂದಿಕೇಶ್ವರ, ಕೇಶವ, ಸಪ್ತ ಮಾತೃಕೆಯರಿಗೆ ದೇವಾಲಯವನ್ನು ಪ್ರತಿಷ್ಠಾಪಿಸಿದನೆಂದು ಶಾಸನ ಹೇಳುತ್ತದೆ.
ಈಗ ದೇವಾಲಯವನ್ನು ಆಧುನಿಕ ಶೈಲಿಯಲ್ಲಿ ನವೀಕರಿಸಲಾಗಿದೆ ಮತ್ತು ಇದನ್ನು ತೀರ್ಥ ಮಹಾದೇವ ಮಂದಿರ ಎಂದು ಕರೆಯಲಾಗುತ್ತದೆ. ಒಳಗಿರುವ ಏಕೈಕ ದೇವರು ಮಹಾದೇವ. ದೇವಾಲಯದ ಹೊರಗೆ ಒಂದು ಕಾಲದ ಕೇಶವ ದೇವರ ಭಗ್ನಗೊಂಡಿರುವ ಚಿತ್ರ, ವೀರಗಲ್ಲು ಮತ್ತು ಇತರ ಕೆಲವು ಚಿತ್ರಗಳನ್ನು ಕಾಣಬಹುದು. ಸಪ್ತ ಮಾತೃಕೆಗಳು ಈಗ ಕಾಣಸಿಗುವುದಿಲ್ಲ ಎಂದು ಹೇಳಿದ್ದಾರೆ.
ದೇವಾಲಯದ ಹೊರಗೆ ಶಾಸನವನ್ನು ಸಹ ಇರಿಸಲಾಗಿದೆ. ಶಾಸನವು ವಿಷ್ಣುವಿನ ಮತ್ತು ಶಿವನ ಶ್ಲೋಕದಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ರಾಜನನ್ನು ‘ಪೃಥ್ವಿವಲ್ಲಭ’ ಮತ್ತು ‘ಮಹಾರಾಜಾದಿರಾಜ’ ಎಂಬ ಬಿರುದುಗಳೊಂದಿಗೆ ಉಲ್ಲೇಖಿಸಲಾಗಿದೆ.
ಇದು ಜಗದೇಕಮಲ್ಲನ ರಾಜಧಾನಿ ಪ್ರಸ್ತುತ ಬೀದರ್ ಜಿಲ್ಲೆಯ ಕಲ್ಯಾಣದಲ್ಲಿತ್ತು ಎಂದು ತಿಳಿಸುತ್ತದೆ. ಆದರೆ ಸಾಮ್ರಾಜ್ಯವು ಉತ್ತರಕ್ಕೆ ಹೆಚ್ಚು ವಿಸ್ತರಿಸಿತ್ತು ಎನ್ನುವುದು ಸಹ ತಿಳಿದುಬರುತ್ತದೆ. ಸಾಂಪ್ರದಾಯಿಕವಾಗಿ, ನರ್ಮದಾ ನದಿಯು ಕರ್ನಾಟಕದಿಂದ ಸಾಮ್ರಾಜ್ಯಗಳ ಉತ್ತರದ ಗಡಿಯಾಗಿತ್ತು ಎಂದು ನವಲಗುಂದ ಅವರು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ.
ಇದನ್ನೂ ನೋಡಿ: ಅಣ್ಣಾವ್ರ ನೆನಪಿನ ಶಕ್ತಿ ಎಷ್ಟಿತ್ತು ಎಂಬುದಕ್ಕೆ ಈ ವೀಡಿಯೋ ಸಾಕ್ಷಿ
ಪೀಪಲ್ ಟಿವಿ ಯೂಟ್ಯೂಬ್ ಚಾನಲ್ ಅನ್ನು SUBSCRIBE ಮಾಡಿ ಬೆಲ್ ಐಕಾನ್ ಒತ್ತಿ