Home ರಾಜಕೀಯ ಕೊಲೆ, ಅಪಹರಣದ ಆರೋಪ | ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ರಾಜೀನಾಮೆ

ಕೊಲೆ, ಅಪಹರಣದ ಆರೋಪ | ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ರಾಜೀನಾಮೆ

0

ಇಂಟರ್ನೆಟ್ ಡೆಸ್ಕ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದ ಸರಪಂಚ್ ಒಬ್ಬರ ಭೀಕರ ಹತ್ಯೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗುತ್ತಿದೆ. ಇದೀಗ ಘಟನೆಯ ಹೊಣೆ ಹೊತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಧನಂಜಯ್ ಮುಂಡೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸರ್ಪಂಚ್ ಸಂತೋಷ್ ದೇಶಮುಖ್ ಅವರ ಕೊಲೆ ಪ್ರಕರಣದಲ್ಲಿ ಧನಂಜಯ್ ಮುಂಡೆ ಅವರ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಮಾತನಾಡಿದ ಫಡ್ನವೀಸ್, ಮುಂಡೆ ಅವರ ರಾಜೀನಾಮೆಯನ್ನು ಅಂಗೀಕರಿಸಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಕಳುಹಿಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದರು.

ಎನ್‌ಸಿಪಿಯ ಅಜಿತ್ ಪವಾರ್ ಬಣದ ಪ್ರಮುಖ ನಾಯಕ ಧನಂಜಯ್ ಮುಂಡೆ ಅವರು ತಮ್ಮ ತವರು ಜಿಲ್ಲೆಯಾದ ಬೀಡ್‌ನಲ್ಲಿರುವ ಮಸಾಜೋಗ್ ಗ್ರಾಮದ ಸರ್ಪಂಚ್ ಸಂತೋಷ್ ದೇಶಮುಖ್ ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದ ಘಟನೆ ಕೋಲಾಹಲಕ್ಕೆ ಕಾರಣವಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ಆಪ್ತ ಸಹಾಯಕ ವಾಲ್ಮೀಕ್ ಕರಡ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದವು.

ಮತ್ತೊಂದೆಡೆ, ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಅವರು ಸಚಿವ ಧನಂಜಯ್ ಮುಂಡೆ ಅವರ ಪ್ರಬಲ ಬೆಂಬಲಿಗರಾಗಿರುವ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರಿಗೆ ಸಚಿವರ ವಿರುದ್ಧದ ಪುರಾವೆಗಳನ್ನು ಸಲ್ಲಿಸಿರುವುದಾಗಿ ಹೇಳಿದ ನಂತರ ಸಚಿವರ ರಾಜೀನಾಮೆಗೆ ಬೇಡಿಕೆಗಳು ಮತ್ತೆ ಕೇಳಿಬಂದಿವೆ.

ಎನ್‌ಸಿಪಿ (ಶರದ್ ಪವಾರ್) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಕೂಡ ಧನಂಜಯ್ ಮುಂಡೆ ಅವರ ರಾಜೀನಾಮೆಗೆ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ಧನಂಜಯ್ ಅವರು, ಸಿಎಂ ದೇವೇಂದ್ರ ಫಡ್ನವೀಸ್ ಅಥವಾ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿದರೆ, ತಕ್ಷಣವೇ ರಾಜೀನಾಮೆ ನೀಡುವುದಾಗಿ ಹೇಳಿದ್ದರು.

You cannot copy content of this page

Exit mobile version