ಬಿಜೆಪಿ ನಮ್ಮ ನಾಯಕರನ್ನು ಸೆಳೆಯುವಂತೆ, ನೀವೂ ಇಂಗ್ಲಿಷ್ ಶಾಲೆಯ ಮಕ್ಕಳನ್ನು ಸೆಳೆಯಿರಿ: ಮರಾಠಿ ಶಾಲೆಗಳ ಶಿಕ್ಷಕರಿಗೆ ಸಚಿವ ಗುಲಾಬ್ ರಾವ್ ಪಾಟೀಲ್ ಕರೆ

ಮುಂಬೈ: ಮಹಾರಾಷ್ಟ್ರದಲ್ಲಿ ಮರಾಠಿ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವ ಕುರಿತು ಮಾತನಾಡುತ್ತಾ, ಆಡಳಿತಾರೂಢ ಮಹಾಯುತಿ ಸರ್ಕಾರದ ಮಿತ್ರಪಕ್ಷ ಬಿಜೆಪಿಯ ಆಪರೇಷನ್ ಕಮಲ ರಾಜಕೀಯವನ್ನು ನೇರವಾಗಿ ಅಣಕಿಸಿರುವ ಸಚಿವ ಗುಲಾಬ್ರಾವ್ ಪಾಟೀಲ್ ವಿವಾದಕ್ಕೆ ಗುರಿಯಾಗಿದ್ದಾರೆ. “ಬಿಜೆಪಿ ಹೇಗೆ ನಮ್ಮ ನಾಯಕರನ್ನು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಸೆಳೆದುಕೊಂಡು ತನ್ನ ಬಣಕ್ಕೆ ಸೇರಿಸಿಕೊಳ್ಳುತ್ತದೆಯೋ, ಹಾಗೆಯೇ ಮರಾಠಿ ಶಾಲಾ ಶಿಕ್ಷಕರೂ ಇಂಗ್ಲಿಷ್ ಮಾಧ್ಯಮ ಶಾಲೆಗಳಿಂದ ಮಕ್ಕಳನ್ನು ಸೆಳೆದು ತಮ್ಮ ಶಾಲೆಗಳಿಗೆ ದಾಖಲಿಸಿಕೊಳ್ಳಬೇಕು” ಎಂದು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಹಿರಿಯ ಸಚಿವರು ಕರೆ ನೀಡಿದ್ದಾರೆ.

ಜಲಗಾಂವ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಗುಲಾಬ್ರಾವ್, ಸರ್ಕಾರಿ ಮರಾಠಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಉಳಿಸಿಕೊಳ್ಳುವುದೇ ಶಿಕ್ಷಕರಿಗೆ ಇಂದು ದೊಡ್ಡ ಸವಾಲಾಗಿದೆ ಎಂದರು. “ಬಿಜೆಪಿಯವರು ಯಾರನ್ನು ಬೇಕಾದರೂ ತಮ್ಮ ತೆಕ್ಕೆಗೆ ಎಳೆದುಕೊಳ್ಳುತ್ತಾರೆ. ಅದೇ ತಂತ್ರವನ್ನು ಮರಾಠಿ ಶಿಕ್ಷಕರೂ ಅನುಸರಿಸಬೇಕು; ಇಂಗ್ಲಿಷ್ ಶಾಲೆಗಳ ಮಕ್ಕಳನ್ನು ಮರಾಠಿ ಶಾಲೆಗಳತ್ತ ಆಕರ್ಷಿಸಬೇಕು. ಕಾಲ ಬದಲಾಗಿದೆ, ಪೋಷಕರೆಲ್ಲರೂ ತಮ್ಮ ಮಕ್ಕಳು ಇಂಗ್ಲಿಷ್ ಕಲಿಯಬೇಕೆಂದು ಬಯಸುತ್ತಿದ್ದಾರೆ. ಇಂದು ‘ನಾವು ಇಬ್ಬರು ನಮಗೆ ಇಬ್ಬರು, ಅವರನ್ನು ಇಂಗ್ಲಿಷ್ ಶಾಲೆಗೆ ಕಳುಹಿಸಿ’ ಎಂಬ ಸಂಸ್ಕೃತಿ ಮನೆಮಾಡಿದೆ” ಎಂದು ಅವರು ವಿಶ್ಲೇಷಿಸಿದರು. ಇದೇ ವೇಳೆ ಶಿಕ್ಷಕರು ಶಾಲೆಗಳೊಳಗೆ ಜೀನ್ಸ್-ಟೀಶರ್ಟ್ ಧರಿಸದೆ ಕಡ್ಡಾಯ ಡ್ರೆಸ್ ಕೋಡ್ ಪಾಲಿಸಬೇಕೆಂದು ಸೂಚಿಸಿದರು.

ಮಿತ್ರಪಕ್ಷದ ಸಚಿವರ ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ಬಿಜೆಪಿ ಯಾರನ್ನೂ ಬಲವಂತವಾಗಿ ಸೆಳೆಯುವುದಿಲ್ಲ; ನಮ್ಮ ಕೆಲಸ, ನಾಯಕತ್ವ ಮತ್ತು ಸಿದ್ಧಾಂತವನ್ನು ನೋಡಿ ನಾಯಕರು ಸ್ವಯಂಪ್ರೇರಿತರಾಗಿ ಬರುತ್ತಾರೆ. ಶಿಕ್ಷಕರ ವೇದಿಕೆಯಲ್ಲಿ ಇಂತಹ ರಾಜಕೀಯ ಹೇಳಿಕೆ ನೀಡುವುದು ತೀರಾ ಅಸಮಂಜಸ” ಎಂದು ಬಿಜೆಪಿ ವಕ್ತಾರ ರಾಮ್ ಕುಲಕರ್ಣಿ ತಿರುಗೇಟು ನೀಡಿದ್ದಾರೆ. ಇತ್ತ ವಿರೋಧ ಪಕ್ಷಗಳೂ ಸಚಿವರ ವಿರುದ್ಧ ಕಿಡಿಕಾರಿದ್ದು, “ಅಧಿಕಾರ ಬದಲಾದ ತಕ್ಷಣ ಮೊದಲು ಪಕ್ಷಾಂತರ ಮಾಡುವವರೇ ಗುಲಾಬ್ರಾವ್ ಪಾಟೀಲ್, ಅವರ ಮಾತಿಗೆ ಬೆಲೆ ಇಲ್ಲ” ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಲೇವಡಿ ಮಾಡಿದ್ದಾರೆ. ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ತಮ್ಮ ಸಚಿವರು ಮತ್ತು ಶಾಸಕರ ಅಸಂಬದ್ಧ ಹೇಳಿಕೆಗಳಿಗೆ ಲಗಾಮು ಹಾಕಲಿ ಎಂದು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು