Home ಅಪಘಾತ ಮಹಾರಾಷ್ಟ್ರದಲ್ಲಿ ಘೋರ ದುರಂತ: ಬಾವಿಗೆ ಉರುಳಿದ ಕಾರು; ಆರು ಮಕ್ಕಳು ಸೇರಿ ಒಂದೇ ಕುಟುಂಬದ 9...

ಮಹಾರಾಷ್ಟ್ರದಲ್ಲಿ ಘೋರ ದುರಂತ: ಬಾವಿಗೆ ಉರುಳಿದ ಕಾರು; ಆರು ಮಕ್ಕಳು ಸೇರಿ ಒಂದೇ ಕುಟುಂಬದ 9 ಜನರ ಸಾವು

0

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಒಂಬತ್ತು ಜನರು ದುರ್ಮರಣ ಹೊಂದಿದ್ದಾರೆ. ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬಾವಿಗೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.

ನಾಸಿಕ್ ಜಿಲ್ಲೆಯ ದಿಂಡೋರಿ ತಾಲ್ಲೂಕಿನ ಇಂದೋರ್ ಗ್ರಾಮದ ನಿವಾಸಿಗಳು ಶಿವಾಜಿ ನಗರದಲ್ಲಿ ನಡೆದ ಶುಭ ಸಮಾರಂಭವೊಂದರಲ್ಲಿ ಪಾಲ್ಗೊಂಡು ಮರಳಿ ತಮ್ಮೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿದ್ದ ಆಳವಾದ ಬಾವಿಗೆ ನುಗ್ಗಿದೆ.

ಮೃತರನ್ನು ಸುನಿಲ್ ದತ್ತಾತ್ರೇಯ ದರ್ಗುಡೆ (34), ಅವರ ಪತ್ನಿ ರೇಷ್ಮಾ ದರ್ಗುಡೆ (30), ಮಗಳು ರಾಖಿ ಅಲಿಯಾಸ್ ಗುಣವತಿ, ಸುನಿಲ್ ಅವರ ಅತ್ತಿಗೆ ಆಶಾ ದರ್ಗುಡೆ (32), ಆಕೆಯ ಮಕ್ಕಳಾದ ಶ್ರೇಯಸ್ ಮತ್ತು ಸೃಷ್ಟಿ ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಸಂಬಂಧಿಕರಾದ ಮಾಧುರಿ, ಶ್ರಾವಣಿ ಮತ್ತು ಸಮೃದ್ಧಿ ಎಂಬುವವರು ಕೂಡ ಮೃತಪಟ್ಟಿದ್ದಾರೆ.

ದುರಂತದ ಸಂಗತಿಯೆಂದರೆ, ಮೃತಪಟ್ಟ ಒಂಬತ್ತು ಜನರಲ್ಲಿ ಆರು ಮಂದಿ ಮಕ್ಕಳು ಸೇರಿದ್ದಾರೆ. ಇವರ ವಯಸ್ಸು 7 ರಿಂದ 14 ವರ್ಷಗಳ ಒಳಗಿದೆ ಎಂದು ತಿಳಿದುಬಂದಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಮತ್ತು ರಕ್ಷಣಾ ತಂಡಗಳು ಕ್ರೇನ್ ಸಹಾಯದಿಂದ ಕಾರನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಎಂಟು ಶವಗಳು ಕಾರಿನ ಒಳಗಡೆಯೇ ಪತ್ತೆಯಾಗಿದ್ದರೆ, ಬಾವಿಯಲ್ಲಿ ಬಿದ್ದಿದ್ದ ಮತ್ತೊಬ್ಬ ಬಾಲಕಿಯ ಶವವನ್ನು ಈಜುಗಾರರು ಹೊರತೆಗೆದಿದ್ದಾರೆ.

ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

You cannot copy content of this page

Exit mobile version