ಪೆಟ್ರೋಲ್‌ಗಾಗಿ ‘ಡಿಶ್ಯುಂ ಡಿಶ್ಯುಂ’: ಮಹಾರಾಷ್ಟ್ರದಲ್ಲಿ ಇಂಧನಕ್ಕಾಗಿ ರಸ್ತೆಗಿಳಿದು ಹೊಡೆದಾಡಿಕೊಂಡ ವಾಹನ ಸವಾರರು

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವರು ಹಾಗೂ ಅಧಿಕಾರಿಗಳು ಪ್ರತಿದಿನ ಹೇಳಿಕೆ ನೀಡುತ್ತಿದ್ದರೂ, ವಾಸ್ತವದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ದೇಶದ ಯಾವುದಾದರೊಂದು ರಾಜ್ಯದಲ್ಲಿ ಇಂಧನ ಕೊರತೆಯ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಇದೀಗ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ತೀವ್ರ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಎದುರಾಗಿದ್ದು, ಇಂಧನಕ್ಕಾಗಿ ಗ್ರಾಹಕರು ಬೀದಿಗಿಳಿದು ಹೊಡೆದಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ವಾಶಿಮ್ ಜಿಲ್ಲೆಯ ಅಕೋಲಾ ನಾಕಾ ಪ್ರದೇಶದ ಪೆಟ್ರೋಲ್ ಬಂಕ್ ಒಂದಕ್ಕೆ ಶನಿವಾರ ಇಂಧನ ತುಂಬಿಸಲು ಬಂದ ಆಯಿಲ್ ಟ್ಯಾಂಕರ್ ಅನ್ನು ಸುಮಾರು 400 ಕ್ಕೂ ಹೆಚ್ಚು ವಾಹನ ಸವಾರರು ಮುಗಿಬಿದ್ದು ತಡೆದಿದ್ದಾರೆ. ಟ್ಯಾಂಕರ್‌ನಿಂದ ಇಂಧನವನ್ನು ಬಂಕ್‌ನ ಸ್ಟೋರೇಜ್ ಟ್ಯಾಂಕ್‌ಗೆ ಇಳಿಸುವ ಮುನ್ನವೇ ತಮಗೆ ಪೆಟ್ರೋಲ್ ಹಾಕಬೇಕು ಎಂದು ವಾಹನ ಸವಾರರು ಪಟ್ಟು ಹಿಡಿದರು.

ಆದರೆ ಬಂಕ್‌ನ ಆಟೋಮ್ಯಾಟಿಕ್ ವ್ಯವಸ್ಥೆಯ ನಿಯಮಾವಳಿಗಳ ಪ್ರಕಾರ ಟ್ಯಾಂಕರ್ ಅನ್‌ಲೋಡ್ ಆಗುವ ಸಮಯದಲ್ಲಿ ಇಂಧನ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಬಂಕ್ ಸಿಬ್ಬಂದಿ ಪದೇ ಪದೇ ವಿನಂತಿಸಿದ ನಂತರ ಗ್ರಾಹಕರು ಟ್ಯಾಂಕರ್ ಬಿಡಲು ಒಪ್ಪಿಕೊಂಡರು.

ಆದರೆ, ಆ ನಂತರ ಪೆಟ್ರೋಲ್ ಪಡೆಯಲು ಮುಗಿಬಿದ್ದ ಗ್ರಾಹಕರ ನಡುವೆ ತೀವ್ರ ತಳ್ಳಾಟ ಆರಂಭವಾಗಿ, ಅದು ದೊಡ್ಡ ಮಟ್ಟದ ಗಲಭೆಯಾಗಿ ಮಾರ್ಪಟ್ಟಿತು. ಕೆಲವರು ಬಂಕ್ ಆವರಣದಲ್ಲೇ ದೊಡ್ಡ ದೊಡ್ಡ ಕೋಲುಗಳನ್ನು ತಂದು ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಲು ಮುಂದಾದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಬಂಕ್ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಹರಸಾಹಸ ಪಟ್ಟು ಗಲಾಟೆಯನ್ನು ನಿಯಂತ್ರಣಕ್ಕೆ ತಂದರು.

ಈ ಘಟನೆಯ ಬೆನ್ನಲ್ಲೇ, ತಮಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಿದರೆ ಮಾತ್ರ ಇಂಧನ ಮಾರಾಟ ಮುಂದುವರಿಸುವುದಾಗಿ, ಇಲ್ಲದಿದ್ದರೆ ಬಂಕ್‌ಗಳನ್ನು ಬಂದ್ ಮಾಡುವುದಾಗಿ ಹಲವು ಪೆಟ್ರೋಲ್ ಬಂಕ್ ಮಾಲೀಕರು ಜಿಲ್ಲಾಡಳಿತಕ್ಕೆ ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು