ಮಹಾರಾಷ್ಟ್ರದ ಉಲ್ಹಾಸ್‌ನಗರದ ವಿಠ್ಠಲ್ ವಾಡಿ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ತೀವ್ರ ಹಲ್ಲೆ ನಡೆಸಿ, ಅರೆನಗ್ನಗೊಳಿಸಿ, ತಲೆಕೂದಲು ಕತ್ತರಿಸಿ ಹಾಗೂ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಆರೋಪದ ಮೇಲೆ ಉಲ್ಹಾಸ್‌ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ದೌರ್ಜನ್ಯದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಉಲ್ಹಾಸ್‌ನಗರದ ಸಹಾಯಕ ಪೊಲೀಸ್ ಕಮಿಷನರ್ (ACP) ಶೈಲೇಶ್ ಕಾಳೆ ಅವರು ಶನಿವಾರ ಈ ಕುರಿತು ಮಾಹಿತಿ ನೀಡಿದ್ದು, ಒಂದೇ ಸಮುದಾಯದ ಎರಡು ಕುಟುಂಬಗಳ ನಡುವೆ ದೇವಸ್ಥಾನ ಪ್ರವೇಶಿಸುವ ವಿಷಯದಲ್ಲಿ ಉಂಟಾದ ಗಲಾಟೆ ಈ ಘಟನೆಗೆ ಕಾರಣ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಏಳು ಜನರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಉಲ್ಹಾಸ್‌ನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೇವಸ್ಥಾನ ಪ್ರವೇಶದ ಕುರಿತು ಉಭಯ ಕುಟುಂಬಗಳ ನಡುವೆ ಪರಸ್ಪರ ವಿರೋಧವಿದ್ದು, ಗಲಾಟೆಯಲ್ಲಿ ತೊಡಗಿದ್ದ ಎರಡೂ ಕುಟುಂಬಗಳ ಸದಸ್ಯರ ವಿರುದ್ಧವೂ ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.
