Home ಜನ-ಗಣ-ಮನ ಕೃಷಿ ನೋಟ ಮಹಿಳೆಯರಿಗೆ ಭೂಮಿ ಹಕ್ಕು ಸಿಗಬೇಕು : ಶಶಿರಾಜ್ ಹರತಲೆ

ಮಹಿಳೆಯರಿಗೆ ಭೂಮಿ ಹಕ್ಕು ಸಿಗಬೇಕು : ಶಶಿರಾಜ್ ಹರತಲೆ

0

ಚಿಂತಾಮಣಿ : ಕೃಷಿ ಕ್ಷೇತ್ರದಲ್ಲಿ ಪುರುಷರಿಗಿಂತ ಹೆಚ್ಚಾಗಿ ದುಡಿಯುವ ಮಹಿಳೆ ಕೂಡ ರೈತಳು. ಅವಳಿಗೂ ಭೂಮಿಯ ಮೇಲೆ ಹಕ್ಕಿದೆ. ಹೀಗಾಗಿ, ಮಹಿಳೆಯರಿಗೆ ಭೂಮಿಯಲ್ಲಿ ಒಡೆತನ ಸಿಗಬೇಕು. ಹಕ್ಕು ಪತ್ರಗಳನ್ನು ಒದಗಿಸಬೇಕು. ಎಂದು ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ಶಶಿರಾಜ್ ಹರತಲೆ ಆಗ್ರಹಿಸಿದ್ದಾರೆ.

ಭಾನುವಾರ ಮಿಂಡಿಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲರಾಳ್ಳಹಳ್ಳಿ ಕ್ರಾಸ್ ನ ವೆಂಕಟೇಶಪ್ಪ ಅವರ ಜಮೀನಿನ ಬಳಿ ಚಿಂತನಾ ಫೌಂಡೇಶನ್, ಜನಪರ ಫೌಂಡೇಶನ್  ಹಾಗೂ ಬಳ್ಳಿ ಬಳಗ ಕೃಷಿಕರ ವೇದಿಕೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಮಹಿಳಾ ರೈತ ದಿನಾಚರಣೆ ಹಾಗೂ ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಸಿರಿಧಾನ್ಯ ಆಹಾರ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ರೈತರೆಂಬ ಮಾನ್ಯತೆಯೇ ಸಿಗುತ್ತಿಲ್ಲ. ಇಂದಿಗೂ ಮಹಿಳೆಯರಿಗೆ ಭೂಮಿಯ ಹಕ್ಕು ಇಲ್ಲ. ರೈತರು ಎಂದು ಹೇಳಿಕೊಳ್ಳಲು ಅವರಿಗೆ ಯಾವುದೇ ಗುರುತಿಲ್ಲ. ಹೀಗಾಗಿ, ಮಹಿಳೆಯರಿಗೆ ಭೂಮಿಯ ಹಕ್ಕು ಸಿಗುವಂತಾಗಬೇಕು. ಪುರುಷರಂತೆ ಮಹಿಳೆಯರಿಗೂ ಸಮಾನವಾದ ಸ್ಥಾನಮಾನ ನೀಡುವಂತಾಗಬೇಕು.

ಕೃಷಿಯಲ್ಲಿ ಪ್ರಧಾನವಾಗಿ ತೊಡಗಿಸಿಕೊಳ್ಳುವವರು ಮಹಿಳೆಯರು. ಕೃಷಿ ಪೂರಕ ಚಟುವಟಿಕೆಗಳು ಆರಂಭವಾದಾಗಿನಿಂದ ಆರಂಭಗೊಂಡು ಕೃಷಿ ಚಟುವಟಿಕೆಗಳು ಮುಗಿಯುವ ತನಕ ಬಿಡುವಿಲ್ಲದೆ ಕೆಲಸ ಮಾಡುತ್ತಾರೆ. ಮನೆಯಲ್ಲಿ ಅಡುಗೆ ಮಾಡುವುದು, ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಹಸು, ಕುರಿ, ಮೇಕೆಗಳ ಕೊಟ್ಟಿಗೆ ಸ್ವಚ್ಚ ಮಾಡಿ ತಿಪ್ಪೆ ಗೆ ಹಾಕುವುದು. ಬೇಸಾಯದಲ್ಲಿ ಋತುಮಾನಕ್ಕೆ ಅನುಗುಣವಾಗಿ ಮುಂದಾಲೋಚನೆ ಮಾಡುವುದು, ಬೀಜ ಬಿತ್ತುವುದು, ಕಳೆ ತೆಗೆಯುವುದು,  ಬೆಳೆ ಕಟಾವು ಮಾಡುವುದು, ಕಣ ಮಾಡುವುದು ಸೇರಿದಂತೆ ಮುಂದಿನ ಹಂಗಾಮಿಗೆ ಬೇಕಾದ ಬೀಜಗಳನ್ನು ಮುಂಗಡವಾಗಿ ತಯಾರಿಸಿಡುವುದು ಹೀಗೆ ಅನೇಕ ಕೃಷಿ ಕಾರ್ಯಗಳಲ್ಲಿ ಮಹಿಳೆಯರ ಪಾತ್ರವು ಅಪಾರ ಎಂದು ಅವರು ನೆನಪಿಸಿಕೊಂಡರು.

ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಶ್ರಮವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದು ಕಡೆ ಮಹಿಳೆಯರಿಗೆ ಭೂಮಿಯಲ್ಲಿ ಹಕ್ಕಿಲ್ಲ, ಇನ್ನೊಂದು ಕಡೆ ನಿರ್ಧಾರಗಳನ್ನು ಕೈಗೊಳ್ಳಲು ಬಿಡುವುದಿಲ್ಲ. ಆದರೆ ಪುರುಷರೇ ನಿರ್ಧಾರ ಕೈಗೊಳ್ಳುತ್ತಾರೆ. ಇದು ಇಂದಿನ ದುಸ್ಥಿತಿ ಎಂದು ಅವರು ನುಡಿದರು.

ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮನುಷ್ಯರ ಆಹಾರ ಪದ್ಧತಿಯು ಬಹಳಷ್ಟು ಬದಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಆಹಾರಗಳನ್ನು ಖರೀದಿಸಿ ತಂದು ಮನೆಯಲ್ಲಿ ಪ್ರಿಜ್ ನಲ್ಲಿಟ್ಟುಕೊಂಡು ಸೇವಿಸಲಾಗುತ್ತಿದೆ. ಹೊರಗಡೆಯಿಂದ ಬರುವಾಗಲೇ ಕೆಮಿಕಲ್ ಮಿಶ್ರಣಗೊಂಡು ಆಹಾರ ಪದಾರ್ಥಗಳು ನಮ್ಮ ಮನೆಗೆ ಸೇರುತ್ತಿವೆ. ಇದನ್ನು ಸೇವಿಸಿದ ಜನರು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ.  ಹೊಲದಲ್ಲಿ ಬೆಳೆದ ತಾಜ ಆಹಾರಗಳನ್ನು ಮಾರಾಟ ಮಾಡಿ ಮತ್ತೆ ಅದೆ ಉತ್ಪನ್ನಗಳು ಪಾಲೀಶ್ ಆಗಿ ಕೆಮಿಕಲ್ ಮಿಶ್ರಣವಾಗಿ ಬರುತ್ತವೆ ಅದನ್ನೆ ಶ್ರೇಷ್ಟ ಎಂದು ಬಳಸುವ ಜೀವನ ಶೈಲಿಗೆ ಜನ ಬದಲಾಗುತ್ತಿರುವುದು ವಿಷಾದಕರ ಸಂಗತಿ. ಹಾಗಾಗಿ ನಮ್ಮ ನೆಲ ಮೂಲ ಆಹಾರಗಳನ್ನು ಮರು ಬಳಸುವಂತಾಗಬೇಕು ಎಂದು ಹೇಳಿದರು.

ಸಿರಿಧಾನ್ಯ ಬೆಳೆದ ರೈತ ವೆಂಕಟೇಶಪ್ಪ ಮಾತನಾಡಿ, ಹಲವಾರು ವರ್ಷಗಳಿಂದಲೂ ನಾವು ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಹಿಂದಿನ ಕಾಲದ ಆಹಾರ ಪದ್ಧತಿಗಳಾದ ಸಾಮೆ, ನವಣೆ, ಹಾರಕ, ಸಜ್ಜೆ, ಜೋಳ ಹೀಗೆ ವಿವಿಧ ಬೆಳೆಗಳನ್ನು ಬೆಳೆದು, ಆಹಾರವಾಗಿ ಬಳಸುತ್ತಿದ್ದೆವು. ಆದರೆ, ಬಿತ್ತನೆಗೆ ಸಿರಿಧಾನ್ಯ ಬೀಜ ಇಲ್ಲದೆ ಈ ಬೆಳೆಗಳ ಬೆಳೆಯುವುದನ್ನು ಬಿಟ್ಟಿದ್ದೆವು.  ಜನಪರ ಪೌಂಡೇಷನ್ ಬೀಜ ಒದಗಿಸಿದ್ದರಿಂದ ಈ ಬಾರಿ ನಾಲ್ಕು ಎಕರೆ ಭೂಮಿಯಲ್ಲಿ ಸಾಮೆಯನ್ನು ಬೆಳೆದಿದ್ದೇವೆ. ಉತ್ತಮ ಫಸಲು ಬಂದಿದೆ. ಬಹಳ ಸಂತೋಷವಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಅದರ ಜೊತೆಗೆ ನಾವು ಬೆಳೆದದ್ದನ್ನು ನಾವೇ ಆಹಾರವಾಗಿ ಬಳಸಿಕೊಳ್ಳುತ್ತೇವೆ ಎಂದು ನುಡಿದರು.

ಮಹಿಳಾ ಒಕ್ಕೂಟದ ಸದಸ್ಯರಾದ ಭೂಲಕ್ಷ್ಮಮ್ಮ ಮಾತನಾಡಿ, ಮಹಿಳೆಯರು ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂದು ಹಿಂದಕ್ಕೆ ಹೆಜ್ಜೆಯನ್ನಿಡಬಾರದು. ಎಲ್ಲ ಕ್ಷೇತ್ರದಲ್ಲಿಯೂ ನಾವು ಬಹಳಷ್ಟು ಮುಂದುವರಿದಿದ್ದೇವೆ. ಮುಖ್ಯವಾಗಿ ಇಂದಿನ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಸೇವೆಯು ಅನನ್ಯವಾದುದಾಗಿದೆ. ನಾನು ನಾಲ್ಕು ಗೋಡೆಯಿಂದ ಆಚೆ ಬಂದು ಸಮಾಜವನ್ನು ಅರ್ಥಮಾಡಿಕೊಂಡು ನಮ್ಮ ಗ್ರಾಮ ಪಂಚಾಯಿತಿ, ಸರ್ಕಾರದ ಇತರೆ ಯೋಜನೆಗಳಲ್ಲಿ ಮಹಿಳೆಯರಿಗಿರುವ ಹಕ್ಕು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವೆ. ಹೀಗೆ ಎಲ್ಲಾ ಮಹಿಳೆಯರು ಸ್ವಯಂ ನಿರ್ಧಾರ ಕೈಗೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನೆಲಮೂಲ ಜ್ಞಾನವನ್ನು ಜನರ ನಡುವಿನ ಅರಿವನ್ನು ಎಲ್ಲೆಡೆ ಬಿತ್ತುವ ಯುವ ತಲೆಮಾರಿಗೆ ಒದಗಿಸುವ ನಿಟ್ಟಿನಲ್ಲಿ ಜನಪರ ಫೌಂಡೇಶನ್, ಬಳ್ಳಿ ಬಳಗದ ಸಹಭಾಗಿತ್ವದಲ್ಲಿ ನೆಲದ ಮಾತು ಎಂಬ ಯೂಟ್ಯೂಬ್ ವೆಬ್ ಅನ್ನು ಚಾಲನೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಯುವ ಕೃಷಿಕರಾದ ಸುರೇಶ್ ಮತ್ತು ಶಿವಕುಮಾರ್, ಮಹಿಳಾ ಕೃಷಿಕರಾದ ಸಾವಿತ್ರಮ್ಮ(ದನಮಿಟ್ಟೇನಹಳ್ಳಿ),ಕದಿರಮ್ಮ(ಚೌಡದೇನಹಳ್ಳಿ), ರೈತರಾದ ವೆಂಕಟೇಶಪ್ಪ (ನಲ್ಲರಾಳ್ಳಹಳ್ಳಿ ಕ್ರಾಸ್), ನರಸಿಂಹಪ್ಪ(ದನಮಿಟ್ಟೇನಹಳ್ಳಿ) ಇವರುಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯ ಚಂದ್ರಪ್ಪ, ಗ್ರಾ.ಪಂ. ಕಾಯಕಮಿತ್ರ ಶಾರದ, ಬೇರು ಬೆವರು ಕಲಾ ಬಳಗದ ಚಿ.ಮು.ಹರೀಶ್, ಚಲಪತಿ, ಬಳ್ಳಿ ಬಳಗದ ಸದಸ್ಯರಾದ ನಾಗರಾಜು, ನಾಗೇಶ್, ಅಂಬರೀಶ್, ಬಾಬುರೆಡ್ಡಿ, ಚೌಡಪ್ಪ, ನೇತ್ರಾವತಿ, ಗಡದಾಸನಹಳ್ಳಿ ಜ್ಯೋತಿ, ಯುವಯಾನ ಬಳಗದ ನಯನ್, ಗೌತಮ್, ನಳಿನಿ ಸೇರಿದಂತೆ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಹಳ್ಳಿಯ ಜನರು ಉಪಸ್ಥಿತರಿದ್ದರು.

You cannot copy content of this page

Exit mobile version