Friday, June 14, 2024

ಸತ್ಯ | ನ್ಯಾಯ |ಧರ್ಮ

2023 ರಲ್ಲಿ ಬಂದ ಮಹತ್ವದ ಕೋರ್ಟ್‌ ತೀರ್ಪುಗಳು

2023 ಮೆಲ್ಲಗೆ ಸರಿದು ಹೋಯ್ತು.  ದೇಶದ ಮಹತ್ವದ ಘಟನೆಗಳು, ದುರಂತಗಳು, ಒಳಿತು-ಕೆಡುಕುಗಳಿಗೆ  2023 ಸಾಕ್ಷಿಯಾಗಿದೆ. ದೇಶದ ಚರಿತ್ರೆಯ ಪುಟಗಳಲ್ಲಿ ಕಪ್ಪುಚುಕ್ಕೆಯಾಗಿಯೇ ಉಳಿಯುವ ಮಣಿಪುರ ಜನಾಂಗೀಯ ಹಿಂಸಾಚಾರದಂತವು ನಡೆದು ಹೋದವು.

2023ರಲ್ಲಿ ಕೆಲವು ಮಹತ್ವದ ತೀರ್ಪುಗಳು ಬಂದಿವೆ. ನೋಟ್‌ ಬ್ಯಾನ್‌ನಿಂದ ಹಿಡಿದು ಸಂವಿಧಾನದ ಆರ್ಟಿಕಲ್‌ 370 ರದ್ದು ಮಾಡುವ ವರೆಗೆ ಅನೇಕ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿವೆ. ದೇಶದ ಅನೇಕ ಮಹತ್ವದ ಸಮಸ್ಯೆಗಳನ್ನು ನಿವಾರಿಸಿವೆ.

ನೋಟು ಅಮಾನ್ಯೀಕರಣದಿಂದ ಸಂವಿಧಾನದ 370ನೇ ವಿಧಿಯ ರದ್ದತಿಯವರೆಗೆ ನ್ಯಾಯಾಲಯಗಳು 2023ರಲ್ಲಿ ಹಲವು ಮಹತ್ವದ ತೀರ್ಪುಗಳನ್ನು ನೀಡಿವೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ನೀಡಿರುವ ಇಂತಹ ಕೆಲವು ತೀರ್ಪುಗಳು ಇಲ್ಲಿವೆ

ನೋಟ್‌ ಬ್ಯಾನ್

ನವೆಂಬರ್‌ 2016 ರಂದು ಮೋದಿ ಸರ್ಕಾರ 500 ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿತು. ಜನವರಿ 2, 4:1 ಬಹುಮತದಿಂದ ಈ ನಿರ್ಧಾರವನದನು ಎತ್ತಿ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ 2023ಕ್ಕೆ ಹೆಜ್ಜೆ ಇಟ್ಟಿತು.

ಈ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ, ವಿ.ರಾಮಸುಬ್ರಮಣಿಯನ್, ಮತ್ತು ಬಿ.ವಿ.ನಾಗರತ್ನ ಇದ್ದರು. ಇವರಲ್ಲಿ ನಾಗರತ್ನ ಅವರನ್ನು ಹೊರತು ಪಡಿಸಿ ಉಳಿದ ನಾಲ್ವರು ನೋಟ್‌ ಬ್ಯಾನ್‌ ಪರ ಬಹುಮತದ ತೀರ್ಪನ್ನು ಬರೆದರು.  

ಆರ್‌ಬಿಐ ಕಾಯಿದೆಯ ಸೆಕ್ಷನ್ 26 (2) ರ ಅಡಿಯಲ್ಲಿ ನೋಟ್‌ ಬ್ಯಾನ್‌ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ನ್ಯಾಯಾಲಯ ಹೇಳಿದೆ.  ಇದರ ಅಡಿಯಲ್ಲಿ ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸಿನ ನಂತರ “ಯಾವುದೇ ಮುಖಬೆಲೆಯ ಯಾವುದೇ ಬ್ಯಾಂಕ್ ನೋಟುಗಳ ಕಾನೂನುಬದ್ಧ ಟೆಂಡರ್ ಅನ್ನು ನಿಲ್ಲಿಸಲು“  ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ  ಎಂದು ಬಹುಮತದ ತೀರ್ಪು ಹೇಳಿದೆ. ಉದ್ದೇಶಕ್ಕೆ ಸಾಧಿಸಲು ಜಾರಿ ಮಾಡಿದ ಕ್ರಮಗಳನ್ನು ಪೂರೈಸಲು ಅದು ಪ್ರಯತ್ನಿಸಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ನಕಲಿ ಕರೆನ್ಸಿ ನೋಟುಗಳು, ಕಪ್ಪುಹಣ, ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವು ಹೋಗುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ  ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಜಮ್ಮು-ಕಾಶ್ಮೀರ ಆರ್ಟಿಕಲ್‌ 370 ರದ್ದು  

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು  ರದ್ದು ಮಾಡಲು ಸುಪ್ರೀಂ ಕೋರ್ಟ್ ಡಿಸೆಂಬರ್ 11 ರಂದು ಸರ್ವಾನುಮತದ ತೀರ್ಪನ್ನು ನೀಡಿತ್ತು.

ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರವನ್ನು ಭಾರತೀಯ ಸಂವಿಧಾನದಿಂದ ವಿನಾಯಿತಿ ನೀಡುತ್ತದೆ. ಅದು ತನ್ನದೇ ಆದ ಸಂವಿಧಾನವನ್ನು ರೂಪಿಸಲು ಅವಕಾಶ ನೀಡುತ್ತದೆ. ಕೇಂದ್ರ ಕಾನೂನುಗಳು ರಾಜ್ಯಕ್ಕೆ ಅನ್ವಯಿಸುವ ಬಗ್ಗೆಯೂ ಮಾತನಾಡುತ್ತದೆ.

Indian security personnel stand guard along a deserted street during restrictions in Jammu, August 5, 2019. REUTERS/Mukesh Gupta – RC1BA0225360

ಸಂಸತ್ತಿನಲ್ಲಿ ಜಮ್ಮು ಕಾಶ್ಮೀರಕ್ಕೆ  ರಕ್ಷಣೆ, ಬಾಹ್ಯ ವ್ಯವಹಾರಗಳು (external affairs) ಮತ್ತು ಸಂವಹನ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಹೊರತುಪಡಿಸಿ ಉಳಿದ ಕಾನೂನುಗಳನ್ನು ರಚಿಸಲು  ರಾಜ್ಯ ಸರ್ಕಾರದ ಒಪ್ಪಿಗೆಯ ಅಗತ್ಯವಿತ್ತು.

ಭಾರತದ ಸಂವಿಧಾನದ ವಿವಿಧ ನಿಬಂಧನೆಗಳನ್ನು ಜಮ್ಮು ಕಾಶ್ಮೀರಕ್ಕೆ  ಅನ್ವಯಿಸಲು 370 ನೇ ವಿಧಿಯು ರಾಷ್ಟ್ರಪತಿಗೆ ಅಧಿಕಾರ ನೀಡಿತು. ಅದಕ್ಕೂ ಮೊದಲು ರಾಷ್ಟ್ರಪತಿಗಳು  ಜಮ್ಮು ಕಾಶ್ಮೀರ ಸರ್ಕಾರದ  ಅನುಮತಿಯನ್ನು ತೆಗೆದುಕೊಳ್ಳಬೇಕು.

ಐವರು ನ್ಯಾಯಾಧೀಶರ ಸಂವಿಧಾನ ಪೀಠವು ತನ್ನ ತೀರ್ಪಿನಲ್ಲಿ, ರಾಷ್ಟ್ರಪತಿಗಳು ಭಾರತೀಯ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಏಕಪಕ್ಷೀಯವಾಗಿ ಅನ್ವಯಿಸಬಹುದು ಮತ್ತು 370 ನೇ ವಿಧಿ ತಾತ್ಕಾಲಿಕವಾಗಿತ್ತು, ಈಗ ಅದು ರದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು.

ಆದರೂ  ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, (Jammu and Kashmir Reorganisation Act) 2019 ರ ಮೂಲಕ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ್ದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿಲ್ಲ. ಯಾಕೆಂದರೆ, ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೀಡಿದ ಹೇಳಿಕೆಯ ಪ್ರಕಾರ ಕೇಂದ್ರಾಡಳಿತ ಪ್ರದೇಶದ ಘೋಷನೆ ತಾತ್ಕಾಲಿಕ. ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನ ಮತ್ತೆ ನೀಡಲಾಗುವುದು ಎಂದು ಮೆಹ್ತಾ ಹೇಳಿದ್ದಾರೆ.

ಸಮಲಿಂಗೀಯ ವಿವಾಹಕ ಅಮಾನ್ಯ (ಸೇಮ್‌ ಸೆಕ್ಸ್‌ ಮ್ಯಾರೆಜ್)

ಅಕ್ಟೋಬರ್ 17 ರಂದು ಭಾರತದಲ್ಲಿ ಸಮಲಿಂಗೀಯ ವಿವಾಹವನ್ನು ಕಾನೂನುಬದ್ಧಗೊಳಿಸುವ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ,  ಕ್ವೀಯರ್ ಜೋಡಿಗಳ ನಡುವಿನ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನ್ಯಾಯಾಲಯವು ವಿಶೇಷ ವಿವಾಹ ಕಾಯಿದೆಯನ್ನು (Special  Marriage Act) ತಿರುಚಲು ಸಾಧ್ಯವಿಲ್ಲ ಎಂದು ಘೋಷಿಸಿತು. ಸಮಲಿಂಗೀ ವಿವಾಹಕ್ಕೆ ಕಾನೂನುಗಳನ್ನು ರೂಪಿಸುವ ಜವಬ್ದಾರಿಯನ್ನು ಸುಪ್ರೀಂ ಕೋರ್ಟ್‌ ಸಂಸತ್ತಿಗೆ ಬಿಟ್ಟಿದೆ.

ಪೀಠದಲ್ಲಿ ಡಿ.ವೈ. ಚಂದ್ರಚೂಡ್ ಮತ್ತು ಎಸ್.ಕೆ. ಕೌಲ್  ಗೇ, ಲೆಸ್ಬಿಯನ್‌ ಸೇರಿದಂತೆ ಹೆಟರೋ ಸೆಕ್ಸುವಲ್‌ (ಅಂದ್ರೆ, ಭಿನ್ನಲಿಂಗೀಯ) ಅಲ್ಲದ ಜೋಡಿಗಳ ʼಯೂನಿಯನ್-ದಾಂಪತ್ಯ) ರಚಿಸುವ ಹಕ್ಕನ್ನು ಎತ್ತಿಹಿಡಿದಿದ್ದಾರೆ.  ಆದರೂ, ಈ ಪೀಠ ಸರ್ವಾನುಮತದಿಂದ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳು ಸದ್ಯ ಇರುವ ಕಾನೂನುಗಳ ಅಡಿಯಲ್ಲಿ ಮದುವೆಯನ್ನು ಕಾನೂನುಬದ್ದಗೊಳಿಸುವುದನ್ನು ಪ್ರತಿಪಾದಿಸಿದ್ದಾರೆ.

ಅಧಿಕಾರಿಗಳ ಮೇಲೆ ದೆಹಲಿ ಸರ್ಕಾರಕ್ಕೆ ಅಧಿಕಾರವಿದೆ

ಮೇ 11 ರಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ತನ್ನ ಕಾರ್ಯಾಂಗ ಮತ್ತು ಶಾಸಕಾಂಗ ಅಧಿಕಾರವನ್ನು ವಿವಿಧ ಸೇವೆಗಳ ಅಧಿಕಾರಿಗಳ ಮೇಲೆ ಚಲಾಯಿಸಲು ಅನುಮತಿ ನೀಡಿತು. ಇದರಲ್ಲಿ ದೆಹಲಿ ಸರ್ಕಾರದಿಂದ ಅಲ್ಲದ, ಅಂದರೆ ಕೇಂದ್ರ ಸರ್ಕಾರದಿಂದ ನೇಮಕವಾದ ಅಧಿಕಾರಿಗಳೂ ಸೇರಿದ್ದಾರೆ.

ಇಲ್ಲಿ, ದೆಹಲಿ ಸರ್ಕಾರಕ್ಕೆ ಅಧಿಕಾರಿಗಳ ವರ್ಗವಣೆ, ಪೋಸ್ಟಿಂಗ್‌ ಮಾಡುವ ಅಧಿಕಾರವೂ ಸೇರಿದೆ. ಸೇವಾ ನಿಯಮಗಳನ್ನು ರೂಪಿಸುವುದು,  ಶಾಸಕಾಂಗ ಸಭೆಯಲ್ಲಿ ಕಾನೂನನ್ನು ಅಂಗೀಕರಿಸುವುದು ಸೇರಿದಂತೆ ಆಡಳಿತದ ಉದ್ದೇಶಗಳಿಗಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳಲು ದೆಹಲಿ ಸರ್ಕಾರಕ್ಕೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಇದಾಗಿ ಕೆಲವೇ ದಿನಗಳಲ್ಲಿ ಮೋದಿ ಸರ್ಕಾರವು ರಾಷ್ಟ್ರದ  ರಾಜಧಾನಿಯಲ್ಲಿ ನಾಗರಿಕ ಸೇವೆಗಳ ಅಧಿಕಾರಿಗಳ  ವರ್ಗಾವಣೆ ಮತ್ತು ಪೋಸ್ಟಿಂಗ್ ಅನ್ನು ನಿರ್ವಹಿಸಲು ಸುಪ್ರೀಂ ಕೋರ್ಟ್‌  ಆದೇಶವನ್ನು ನಿರಾಕರಿಸಿ  ಹೊಸ ಶಾಸನಬದ್ಧ ಪ್ರಾಧಿಕಾರವನ್ನು ರಚಿಸುವ ಸುಗ್ರೀವಾಜ್ಞೆಯನ್ನು ಹೊರಡಿಸಿತು.

ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ (NCCSA) ದೆಹಲಿಯ ಮುಖ್ಯಮಂತ್ರಿಯ ಅಡಿಯಲ್ಲಿ ಬರುತ್ತದೆ. ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇದರ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.

ದೆಹಲಿ ಸರ್ಕಾರವು ಕೇಂದ್ರ ಹೊರಡಿಸಿದ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. ಈ ಅರ್ಜಿಯನ್ನು ಜುಲೈ 20 ರಂದು ಮತ್ತೊಂದು ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಲಾಯಿತು ನೀಡಲಾಗಿದೆ. ಅಂದಿನಿಂದ ಸುಗ್ರೀವಾಜ್ಞೆಯನ್ನು ಕಾಯಿದೆಯಾಗಿ ಔಪಚಾರಿಕವಾಗಿ ಜಾರಿಗೊಳಿಸಲಾಗಿದೆ.

ಮಹಾರಾಷ್ಟ್ರ ಬಿಕ್ಕಟ್ಟು

ಶಿವಸೇನೆಯಲ್ಲಿ ಮಹಾರಾ಼ಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಹಿಂದಿನ ಮುಖ್ಯಮಂತ್ರಿ  ಉದ್ಧವ್ ಠಾಕ್ರೆ ಅವರ ಗುಂಪುಗಳ ನಡುವೆ ಭಿನ್ನಾಭಿಪ್ರಾಯಗಳು ಎದ್ದು , ಕಳೆದ ವರ್ಷ ಮಹಾರಾಷ್ಟ್ರದ ರಾಜಕೀಯ ಪತನವಾದ ಮೇಲೆ ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನಿಕ ಪೀಠವು ಮೇ ತಿಂಗಳಲ್ಲಿ ತೀರ್ಪೊಂದನ್ನು ನೀಡಿದೆ.

ಶಿಂಧೆ ತಮ್ಮ ಬಣದ ಪ್ರಾಬಲ್ಯವನ್ನು ಪ್ರತಿಪಾದಿಸಲು ಪಕ್ಷದಿಂದ ದೂರ ಸರಿದು , ಜುಲೈ 2022 ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಸಿಎಂ ಆದರು.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಜೂನ್ 2022 ರಲ್ಲಿ, ಶಿವಸೇನೆಯಲ್ಲಿ ಬಂಡಾಯ ಎದ್ದಾಗ ವಿಧಾನ ಪರಿಷತ್ತಿನ ಸದಸ್ಯರ ಚುನಾವಣೆಯ ಸಂದರ್ಭದಲ್ಲಿ ಮತ ಚಲಾಯಿಸುವಾಗ ಪಕ್ಷದ ವಿಪ್ ವಿರುದ್ಧ ನಡೆದುಕೊಂಡದಕ್ಕಾಗಿ ಉಪಸಭಾಪತಿ ಶಿಂಧೆ ಬಣಕ್ಕೆ ಅನರ್ಹತೆಯ ನೋಟೀಸ್ ನೀಡಿದರು. ಶಿಂಧೆ ಮತ್ತು ಇತರ 15 ಶಾಸಕರ ವಿರುದ್ಧ ಅನರ್ಹತೆ ನೋಟಿಸ್ ಜಾರಿ ಮಾಡಲಾಗಿದ್ದು, ಜೂನ್ 27 ರಂದು ಸಂಜೆ 5.30 ರೊಳಗೆ ಉಪಸಭಾಪತಿಯ ಮುಂದೆ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಾಗಿತ್ತು.

ಈ ನೋಟೀಸನ್ನು ಶಿಂಧೆ ಬಣ ಪ್ರಶ್ನಿಸಿ, ಉಪಸಭಾಪತಿ ಅವರು ಅನರ್ಹತೆ ಅರ್ಜಿಗಳನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಜೂನ್ 2022 ರಲ್ಲಿ, ನ್ಯಾಯಾಲಯವು ಈ ಬಣಕ್ಕೆ ಮಧ್ಯಂತರ ಪರಿಹಾರವನ್ನು (interim relief) ನೀಡಿ, ಅನರ್ಹತೆಯ ನೋಟೀಸ್‌ಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವ ಸಮಯಾವಧಿಯನ್ನು ಜುಲೈ 12 ರವರೆಗೆ ವಿಸ್ತರಿಸಿತು.

ಎರಡು ದಿನಗಳ ನಂತರ, ವಿಧಾನಸಭೆಯಲ್ಲಿ ವಿಶ್ವಾಸಮತ ಕರೆಯಲು ಆಗಿನ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಸುಪ್ರೀಂ ಕೋರ್ಟ್‌ ತಿಳಿಸಿತು.

ಠಾಕ್ರೆ ಬಣವು ತಮ್ಮ ಬಣದ ನಾಮನಿರ್ದೇಶಿತರ ಬದಲಿಗೆ ಲೋಕಸಭೆಯಲ್ಲಿ ಶಿಂಧೆ ಬಣದ ಹೊಸ ನಾಯಕ ಮತ್ತು ಮುಖ್ಯ ಸಚೇತಕರನ್ನು ಗುರುತಿಸುವ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಠಾಕ್ರೆ ಬಣವು ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಿತು.

ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠವು ಮೇ 2023 ರಲ್ಲಿ ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಅವಿಭಜಿತ ಶಿವಸೇನೆಯಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಮಹಜರು ಪರೀಕ್ಷೆಯನ್ನು ಎದುರಿಸಲು ಹೇಳವುದು “ಸಮರ್ಥನೀಯ” ಇಲ್ಲ ಎಂದು ತೀರ್ಪು ನೀಡಿತು. ಆಂತರಿಕ ಪಕ್ಷದ ವಿವಾದಗಳನ್ನು ಪರಿಹರಿಸಲು ಫ್ಲೋರ್‌ ಟೆಸ್ಟ್‌ ಅನ್ನು ಮಾಧ್ಯಮವಾಗಿ ಬಳಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಪ್ರತಿಪಾದಿಸಿತು ಮತ್ತು.  ಏಕನಾಥ್ ಶಿಂಧೆ ಬಣದಿಂದ ವಿಪ್ ಅನ್ನು ನೇಮಿಸುವ ಸ್ಪೀಕರ್ ಅವರ ನಿರ್ಧಾರವು “ಕಾನೂನಿಗೆ ವಿರುದ್ಧವಾಗಿದೆ” ಎಂದು ಹೇಳಿದೆ.

ಆದರೂ, ಠಾಕ್ರೆ ಅವರು ಮಹತ್ತರ ಪರೀಕ್ಷೆಯನ್ನು ಎದುರಿಸದ ಕಾರಣ ಮತ್ತು 29 ಜೂನ್ 2022 ರಂದು ರಾಜೀನಾಮೆ ಸಲ್ಲಿಸಿದ ಕಾರಣ ಪೀಠವು ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮತ್ತೆ ಮಾಡಲಿಲ್ಲ. ಶಿಂಧೆ ಬಣವನ್ನು ಸೇರಿದ ಶಾಸಕರ ಅನರ್ಹತೆ ಕುರಿತು ತೀರ್ಮಾನಿಸುವಂತೆ ವಿಧಾನಸಭಾ ಸ್ಪೀಕರ್‌ಗೆ ನ್ಯಾಯಾಲಯ ಸೂಚಿಸಿದೆ.

ರಾಜ್ಯಪಾಲರ ಅಧಿಕಾರಗಳು

2023 ರಲ್ಲಿ ರಾಜ್ಯ ಸರ್ಕಾರಗಳ ಜೊತೆಗೆ ಕೇಂದ್ರದಿಂದ ನೇಮಿಸಲ್ಪಟ್ಟ ಅನೇಕ ರಾಜ್ಯಪಾಲರು ಗುಡ್ಡಾಟಕ್ಕೆ ಇಳಿದಿದ್ದರು. ರಾಜ್ಯ ಶಾಸಕಾಂಗವು ಅಂಗೀಕರಿಸಿದ ನಿರ್ಣಾಯಕ ಮಸೂದೆಗಳಿಗೆ ರಾಜ್ಯಪಾಲರು ತಮ್ಮ ಒಪ್ಪಿಗೆಯನ್ನು ನೀಡದಿರುವುದು ಅನೇಕ ವಿವಾದಗಳಿಗೆ ಕಾರಣವಾಗಿದೆ.

ರಾಜ್ಯಪಾಲರು ಮಸೂದೆಗೆ ಒಪ್ಪಿಗೆಯನ್ನು ನೀಡದೇ ಇದ್ದರೆ, ಅವರು ಅದನ್ನು ಮರುಪರಿಶೀಲನೆಗಾಗಿ ಶಾಸಕಾಂಗಕ್ಕೆ ಹಿಂದಿರುಗಿಸಬೇಕು ಎಂದು ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಹೇಳಿತು. ಪಂಜಾಬ್ ಸರ್ಕಾರ ಮತ್ತು ರಾಜ್ಯಪಾಲರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ತೀರ್ಪು ನೀಡಿದೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಸಂವಿಧಾನದ ಪ್ರಕಾರ, ರಾಜ್ಯ ಶಾಸಕಾಂಗವು ಮಸೂದೆಯನ್ನು ಅಂಗೀಕರಿಸಿದಾಗ, ಅದನ್ನು ರಾಜ್ಯಪಾಲರಿಗೆ ಕಳುಹಿಸಬೇಕು. ನಂತರ ರಾಜ್ಯಪಾಲರಿಗೆ ನಾಲ್ಕು ಆಯ್ಕೆಗಳಿವೆ: ಅವರು ಮಸೂದೆಗೆ ತಮ್ಮ ಒಪ್ಪಿಗೆಯನ್ನು ನೀಡಬಹುದು, ಆ ನಂತರ ಅದು ಕಾನೂನಾಗಿ ಬದಲಾಗುತ್ತದೆ, ಅಥವಾ ಅವರು ತಮ್ಮ ಒಪ್ಪಿಗೆಯನ್ನು ತಡೆಹಿಡಿಯಬಹುದು ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ಮಸೂದೆಯನ್ನು ಕಾಯ್ದಿರಿಸಬಹುದು ಅಥವಾ ಅವರು ಮರುಪರಿಶೀಲನೆಗಾಗಿ ಮಸೂದೆಯನ್ನು ರಾಜ್ಯ ಶಾಸಕಾಂಗಕ್ಕೆ ಮತ್ತೆ ಕೊಡಬಹುದು.

ಗವರ್ನರ್‌ ವಿರುದ್ಧ ತಮಿಳುನಾಡು ಸರ್ಕಾರದಿಂದ ರೆಸಲ್ಯೂಷನ್

ಒಂದು ಮಸೂದೆಯು ತಮ್ಮ ಅಧಿಕಾರಕ್ಕೆ ಅಥವಾ ಸುಪ್ರೀಂ ಕೋರ್ಟಿನ ಸ್ಥಾನಮಾನಕ್ಕೆ ಸ್ಥಾನಕ್ಕೆ ಅಪಾಯವನ್ನುಂಟುಮಾಡಿದಾಗ, ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಬೇಕು ಎಂದು ಸಂವಿಧಾನವು ಸ್ಪಷ್ಟವಾಗಿ ಹೇಳಿದೆ.

ಆದರೆ, ವಿಧೇಯಕವನ್ನು ಶಾಸಕಾಂಗಕ್ಕೆ ಹಿಂತಿರುಗಿಸಿ, ನಂತರ ಮತ್ತೆ ರಾಜ್ಯಪಾಲರಿಗೆ ಸಲ್ಲಿಸಿದರೆ ರಾಜ್ಯಪಾಲರು ಒಪ್ಪಿಗೆ ನೀಡುವುದು ಕಡ್ಡಾಯ.

ಮಸೂದೆಯನ್ನು ಪರಿಗಣಿಸುವಾಗ ರಾಜ್ಯಪಾಲರು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದರ ಕುರಿತು ಯಾವುದೇ ಟೈಮ್‌ಲೈನ್ ಇಲ್ಲದಿದ್ದರೂ, ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನದ 200 ನೇ ವಿಧಿಯ ನಿಬಂಧನೆಯಲ್ಲಿರುವಂತೆ “ಸಾಧ್ಯವಾದಷ್ಟು ಬೇಗ”ರಾಜ್ಯಪಾಲರು ಮಸೂದೆ ಶಾಸಕಾಂಗದಿಂದ ಬಂದ ತಕ್ಷಣ ತಮ್ಮ ಒಪ್ಪಿಗೆಯನ್ನು ನೀಡುವುದು ಕಡ್ಡಾಯ ಎಂದು ಪ್ರತಿಪಾದಿಸಿದೆ.

ಮುಖ್ಯ ಚುನಾವಣಾ ಆಯುಕ್ತರ ನೇಮಕ

2023ರ ಮಾರ್ಚ್‌ನಲ್ಲಿ, ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನಿಕ ಪೀಠವು ಭಾರತದ ಚುನಾವಣಾ ಆಯೋಗದ (EC) ಸದಸ್ಯರನ್ನು ನೇಮಿಸುವ ಪ್ರಕ್ರಿಯೆಯನ್ನು ಬದಲಾಯಿಸಿದೆ. ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು ಚುನಾವಣಾ ಆಯೋಗದ ಸದಸ್ಯರ ನೇಮಕಾತಿಗಳ ಕುರಿತು ರಾಷ್ಟ್ರಪತಿಗಳಿಗೆ ಸಲಹೆ ನೀಡಲಿದೆ ಎಂದು ನ್ಯಾಯಾಲಯ ಹೇಳಿದೆ. ಇ.ಸಿಯ ಸದಸ್ಯರನ್ನು ಕೇಂದ್ರ ನೇಮಕ ಮಾಡುವ ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ 2015ರ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಹೂಡಲಾಗಿತ್ತು. ಈ ಹಿನ್ನಲೆಯಲ್ಲಿ ತೀರ್ಪು ನೀಡಲಾಗಿದೆ.‌

ಆದಾಗ್ಯೂ, ತೀರ್ಪನ್ನು ರದ್ದುಗೊಳಿಸುವ ಸಲುವಾಗಿ, ಕೇಂದ್ರ ಸರ್ಕಾರವು 2023 ರ ಆಗಸ್ಟ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ 2023 ಅನ್ನು ಪರಿಚಯಿಸಿತು. ಈ ಮಸೂದೆಯು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಸದಸ್ಯರನ್ನು ಪ್ರಧಾನ ಮಂತ್ರಿ, ಕೇಂದ್ರ ಕ್ಯಾಬಿನೆಟ್ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಒಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ . ಹಿಂದೆ ಸಮಿತಿಯಲ್ಲಿ ಇದ್ದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡಲಾಗಿದೆ. ಇದು ಡಿಸೆಂಬರ್‌ನಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು.

ಮರಣ ಇಚ್ಚೆಗೊಂದು ವಿಲ್

ಲಿವಿಂಗ್ ವಿಲ್  ಪರಿಕಲ್ಪನೆಯನ್ನು ಭಾರತದಲ್ಲಿ ಮಾರ್ಚ್ 2018 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಿಂದ ಪರಿಚಯಿಸಲಾಯಿತು. ಲಿವಿಂಗ್ ವಿಲ್ ಎನ್ನುವುದು ಸಾವಿನ ಕ್ಷಣಗಳನ್ನು ಎಣಿಸುತ್ತಿರುವ, ಆರೋಗ್ಯ ಸರಿಯಾಗುವ ಯಾವುದೇ ಲಕ್ಷಣಗಳು ಇಲ್ಲದೇ ಇದ್ದಾಗ ಆ ವ್ಯಕ್ತಿಯ ಇಚ್ಚೆಯಂತೆ ವೈದ್ಯಕೀಯ ಚಿಕಿತ್ಸೆಯನ್ನು ನಿಲ್ಲಿಸಲು ಆ ವ್ಯಕ್ತಿ ಮುಂಚಿತವಾಗಿ ಹೇಳುವ ದಾಖಲೆ. ಈ ದಾಖಲೆಯ ಮೂಲಕ ತಾನು ಮಾತನಾಡಲು ಸಾಧ್ಯವಾಗದೇ ಇದ್ದಾಗ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಚಿಕಿತ್ಸೆಯನ್ನು ನಿಲ್ಲಿಸಲು ಆತ  ತನ್ನ ಇಚ್ಚೆಯನ್ನು ಮೊದಲೇ ಹೇಳುತ್ತಾನೆ.  ಖಚಿತಪಡಿಸುತ್ತದೆ.

2018 ರ ತೀರ್ಪು ಘನತೆಯಿಂದ ಸಾಯುವ ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸಿದೆ ಮತ್ತು ಭವಿಷ್ಯದಲ್ಲಿ ಮಾರಣಾಂತಿಕವಾಗಿ ಅನಾರೋಗ್ಯ ಪೀಡಿತ ರೋಗಿಗಳಿಗೆ ವೈದ್ಯಕೀಯ ನಿರ್ದೇಶನದ ಮೂಲಕ ಈ  ಹಕ್ಕನ್ನು ಜಾರಿಗೊಳಿಸಲು ಮಾರ್ಗಸೂಚಿಗಳನ್ನು ಹಾಕಿದೆ.

2023ರ ಜನವರಿ 24 ರಂದು, ಸುಪ್ರೀಂ ಕೋರ್ಟ್ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಮಾರ್ಪಡಿಸುವ ಮೂಲಕ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಮುಂಗಡ ನಿರ್ದೇಶನವನ್ನು ಅನುಷ್ಠಾನಗೊಳಿಸುವಲ್ಲಿ ಹಿಂದೆ ಇದ್ದ ಮ್ಯಾಜಿಸ್ಟ್ರೇಟ್‌ನ ಪಾತ್ರವನ್ನು ಅದು ತೆಗೆದುಹಾಕಿದೆ. ಜೀವ ಉಳಿಸುತ್ತಿರುವ ವೈದ್ಯಕೀಯ ವ್ಯವಸ್ಥೆಯನ್ನು ಹಿಂಪಡೆಯಲು ಇರುವ ವೈದ್ಯಕೀಯ ಮಂಡಳಿಗಳ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಮಂಡಳಿಗಳಿಗೆ ಸಮಯ ಮಿತಿಗಳನ್ನು ನಿಗದಿಪಡಿಸಿದೆ.

ಕಾಶಿ ವಿಶ್ವನಾಥ ದೇವಸ್ಥಾನ-ಗ್ಯಾನವಾಪಿ ಮಸೀದಿ ತೀರ್ಪು

ಡಿಸೆಂಬರ್ 19 ರಂದು, ಅಲಹಾಬಾದ್ ಹೈಕೋರ್ಟ್ ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಜ್ಞಾನವಾಪಿ ಮಸೀದಿ ಸಮಿತಿಯ ಐದು ಅರ್ಜಿಗಳನ್ನು ವಜಾಗೊಳಿಸಿತು.  1991 ರಲ್ಲಿ ವಾರಣಾಸಿ ಮಸೀದಿಯ ಮೇಲೆ ಹೂಡಲಾದ ಮೊಕದ್ದಮೆಯನ್ನು ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆಯ (Places of Worship (Special Provisions) Act) 1991 ನಿಬಂಧನೆಗಳ ಅಡಿಯಲ್ಲಿ ನಿರ್ಬಂಧಿಸಲಾಗಿಲ್ಲ ಎಂದು ಪ್ರತಿಪಾದಿಸಿದೆ. 

ಈ ಪ್ರಕರಣದ ಮೂಲ ಮೊಕದ್ದಮೆಯನ್ನು 1991 ರಲ್ಲಿ ಭಕ್ತರು ‘ಸ್ವಯಂಭು ಭಗವಾನ್ ವಿಶ್ವೇಶ್ವರ’ ದೇವರ ಹೆಸರಿನಲ್ಲಿ ಸಲ್ಲಿಸಿದರು.  ಅವರು “ತಮ್ಮ ದೇವಾಲಯವನ್ನು ನವೀಕರಿಸಲು ಮತ್ತು ಪುನರ್ನಿರ್ಮಿಸಲು” ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಏಕೆಂದರೆ ದೇವಾಲಯದ ಸ್ಥಳದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ  ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿದ್ದಾನೆ ಎಂಬುದು ಅವರ ವಾದವಾಗಿತ್ತು.

ಈ ಮೊಕದ್ದಮೆ ಬಾಕಿ ಇರುವಾಗ, ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ, ಅಂಜುಮನ್ ಇಂತೇಜಾಮಿಯಾ ಮಸೀದಿ, 1998 ರಲ್ಲಿ ಅಲಹಾಬಾದ್ ಹೈಕೋರ್ಟ್‌ನಿಂದ ವಿಚಾರಣೆಗೆ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಯಿತು. ಅಂತಹ ದಾವೆಯನ್ನು ಪೂಜಾ ಸ್ಥಳಗಳ ಕಾಯಿದೆಯ ನಿಬಂಧನೆಗಳಿಂದ ನಿರ್ಬಂಧಿಸಲಾಗಿದೆ ಎಂದು ಸಮಿತಿಯು ಆರೋಪಿಸಿತ್ತು. ಈ ಕಾಯಿದೆ 1947 ರ ಆಗಸ್ಟ್ 15 ರಂದು ಇದ್ದಂತ ಪೂಜಾ ಸ್ಥಳಗಳನ್ನು ಅದೇ  ಸ್ವರೂಪದಲ್ಲಿ ಉಳಿಸುತ್ತದೆ.

ಈ ತಡೆಯಾಜ್ಞೆ ಮುಂದಿನ ಎರಡು ದಶಕಗಳವರೆಗೆ ಮುಂದುವರಿಯಿತು. ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದ ಒಂದು ತಿಂಗಳ ನಂತರ, ಡಿಸೆಂಬರ್ 2019 ರಲ್ಲಿ  ಇನ್ನೊಂದು ಅರ್ಜಿ ಸಲ್ಲಿಸಿ ವಿವಾದಿತ ಸ್ಥಳದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಸರ್ವೇ ನಡೆಸಬೇಕು ಎಂದು ಒತ್ತಾಯಿಸಲಾಯಿತು.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

1998 ರ ಹೈಕೋರ್ಟ್ ತಡೆಯಾಜ್ಞೆಯ ಹೊರತಾಗಿಯೂ, ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಅಶುತೋಷ್ ತಿವಾರಿ ಅವರು ಏಪ್ರಿಲ್ 2021 ರಲ್ಲಿ ಜ್ಞಾನವಾಪಿ ಸಂಕೀರ್ಣದಲದಲ್ಲಿ ಎಎಸ್‌ಐಗೆ ಸಮೀಕ್ಷೆ ನಡೆಸಲು ಅನುಮತಿ ನೀಡಿದರು.

ಅಲಹಾಬಾದ್ ಹೈಕೋರ್ಟ್ ಮತ್ತೆ ಸಿವಿಲ್ ನ್ಯಾಯಾಧೀಶರ ಆದೇಶವನ್ನು ಟೀಕಿಸಿತು. 2021 ರ ಸೆಪ್ಟೆಂಬರ್ 9 ರಂದು ಈ ಅನುಮತಿಯನ್ನು ತಡೆಹಿಡಿಯಿತು. ಅಲಹಾಬಾದ್ ಹೈಕೋರ್ಟ್ ಈಗ ಈ ಮೊಕದ್ದಮೆಯನ್ನು 1991 ರ ಕಾನೂನಿನಿಂದ ತಡೆಯುವುದಿಲ್ಲ ಎಂದು ತೀರ್ಪು ನೀಡಿದೆ ಮತ್ತು ಪ್ರಕರಣವನ್ನು ವಾರಣಾಸಿ ಸಿವಿಲ್ ಜಡ್ಜ್‌ ಕೋರ್ಟ್‌ ವಿಚಾರಣೆ ನಡೆಸುತ್ತದೆ. ಆರು ತಿಂಗಳೊಳಗೆ “ವಿಚಾರವನ್ನು ತ್ವರಿತವಾಗಿ ಮುಂದುವರಿಸಿ, ಪ್ರಕ್ರಿಯೆಗಳನ್ನು ಮುಗಿಸಲು”  ನಿರ್ದೇಶನ ನೀಡಿದೆ.

ಬರಿಗೈಯಲ್ಲಿ ಚರಂಡಿ ಸ್ವಚ್ಛಗೊಳಿಸುವುದು ನಿಲ್ಲಲಿ (ಮ್ಯಾನುಯಲ್ ಸ್ಕ್ಯಾವೆಂಜಿಂಗ್)

2023ರ ಅಕ್ಟೋಬರ್‌ನಲ್ಲಿ, ಕೇಂದ್ರ ಮತ್ತು ರಾಜ್ಯಗಳು “ಕೈಯಿಂದ ಕಸ ಎತ್ತುವುದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದನ್ನು ಖಚಿತಪಡಿಸಿಕೊಂಡು ಕರ್ತವ್ಯಕ್ಕೆ ಬದ್ಧವಾಗು”ವಂತೆ  ಸುಪ್ರೀಂ ಕೋರ್ಟ್ ತಿಳಿಸಿದೆ.

“ನಾವು ಎಲ್ಲರೂ ಈ ಸಮುದಾಯಕ್ಕೆ ಋಣಿಯಾಗಿದ್ದೇವೆ. ಅವರು ಯಾರಿಗೂ ಕಾಣದಂತೆ, ಅವರ ದನಿ ಯಾರಿಗೂ ಕೇಳದಂತೆ, ಮೌನವಾಗಿ, ಬಂಧನದಲ್ಲಿ, ವ್ಯವಸ್ಥಿತವಾಗಿ ಅಮಾನವೀಯ ಪರಿಸ್ಥಿತಿಗಳಲ್ಲಿ ಸಿಲುಕಿದ್ದಾರೆ,” ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಹಲವಾರು ನಿರ್ದೇಶನಗಳನ್ನು ನೀಡಿದೆ.

ಒಳಚರಂಡಿ ಶುಚಿಗೊಳಿಸುವಾಗ ಸಾಯುವವರಿಗೆ ನೀಡುವ ಪರಿಹಾರವನ್ನು 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲು, ಅಂಗವೈಕಲ್ಯದಿಂದ ಬಳಲುತ್ತಿರುವ ಒಳಚರಂಡಿ ಸಂತ್ರಸ್ತರಿಗೆ ಕನಿಷ್ಠ ಪರಿಹಾರವನ್ನು 10 ಲಕ್ಷ ರುಪಾಯಿಗೆ ಹೆಚ್ಚಿಸಲು ಆದೇಶ ನೀಡಿದೆ.  ಕೈಯಿಂದ ಒಳಚರಂಡಿ ಸ್ವಚ್ಚಗೊಳಿಸುವುದನ್ನು ಹಂತಹಂತವಾಗಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು