ಬೆಂಗಳೂರು: ನಗರದ ಪ್ರಮುಖ ರಸ್ತೆಯೊಂದರಲ್ಲಿ ಬೀದಿ ದೀಪಗಳ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್‌ನ ಕಾರ್ಯಪಾಲಕ ಎಂಜಿನಿಯರ್ (ಎಲೆಕ್ಟ್ರಿಕಲ್) ಎಚ್.ವಿ. ರಮೇಶ್ ಅವರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಮಾನತುಗೊಳಿಸಿದೆ.
ಆಗಸ್ಟ್ 28ರಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿದ ಪರಿಶೀಲನೆಯ ವೇಳೆ, ಹಡ್ಸನ್ ಸರ್ಕಲ್‌ನಿಂದ ಚಾಲುಕ್ಯ ಸರ್ಕಲ್‌ವರೆಗೆ ಇರುವ 222 ಬೀದಿ ದೀಪಗಳ ಪೈಕಿ 140 ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಕುರಿತು ಸಚಿವರು ಈ ಹಿಂದೆ ಎರಡು ಸಭೆಗಳನ್ನು ನಡೆಸಿ, ದೋಷಗಳನ್ನು ತ್ವರಿತವಾಗಿ ಸರಿಪಡಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆಗಸ್ಟ್ 4ರಂದು ನಡೆದ ಸಭೆಯಲ್ಲೂ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಮತ್ತೊಮ್ಮೆ ಸೂಚಿಸಲಾಗಿತ್ತು.
ಆಗಸ್ಟ್ 31ರಂದು ರಮೇಶ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಅದೇ ದಿನ ಅವರು ತಮ್ಮ ವಿವರಣೆಯನ್ನು ಸಲ್ಲಿಸಿದ್ದರು. ಆದರೆ, ಅವರ ಉತ್ತರದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.
