ಅಹಮದಾಬಾದ್: ಬಿಜೆಪಿ ಆಡಳಿತದ ಗುಜರಾತ್‌ನಲ್ಲಿ ಸಾರ್ವಜನಿಕವಾಗಿ ಪುಸ್ತಕ ಓದುವುದಕ್ಕೂ ಸಂಘ ಪರಿವಾರದ ಸಂಘಟನೆಗಳು ಅಡ್ಡಿಪಡಿಸಿ ದಾಳಿ ನಡೆಸಿರುವ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ‘ಸ್ಟೂಡೆಂಟ್ ಅಂಡ್ ಯೂತ್ ಕಲೆಕ್ಟಿವ್ ಅಹಮದಾಬಾದ್’ (SYCA) ಹಾಗೂ ‘ಗುಜರಾತ್ ರೀಡ್ಸ್ ಎನಿವೇ’ (GRA) ಸಂಘಟನೆಗಳ ಆಶ್ರಯದಲ್ಲಿ ಸೇರಿದ ಯುವಜನರು ಮತ್ತು ಪುಸ್ತಕ ಪ್ರೇಮಿಗಳ ಗುಂಪು, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಝೈ ಅವರ ‘ಐ ಆಮ್ ಮಲಾಲಾ’, ಆ್ಯನ್ ಫ್ರಾಂಕ್ ಅವರ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ಹಾಗೂ ಭಗತ್ ಸಿಂಗ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರಸಿದ್ಧ ಪುಸ್ತಕಗಳನ್ನು ಓದುವ ಸಮೂಹ ಅಧ್ಯಯನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಗುರುವಾರ ಸಂಜೆ ಅಹಮದಾಬಾದ್‌ನ ವಸ್ತ್ರಾಪುರ ಉದ್ಯಾನವನದಲ್ಲಿ ಶಾಂತಿಯುತವಾಗಿ ಪುಸ್ತಕ ಓದುತ್ತಿದ್ದವರ ಮೇಲೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (VHP) ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿದ್ದಾರೆ. ಮಲಾಲಾ ಅವರ ಪುಸ್ತಕವನ್ನು ಏಕೆ ಓದುತ್ತಿದ್ದೀರಿ ಎಂದು ವಾಗ್ವಾದಕ್ಕಿಳಿದ ಆ ಗುಂಪು, ಬೇಸ್‌ಬಾಲ್ ಬ್ಯಾಟ್‌ಗಳು, ಕಬ್ಬಿಣದ ರಾಡ್‌ಗಳು, ಲಾಠಿಗಳು ಮತ್ತು ಕೇಸರಿ ಧ್ವಜಗಳೊಂದಿಗೆ ಹಿಂಸಾಚಾರ ನಡೆಸಿದೆ. ಈ ಭೀಕರ ದಾಳಿಯಲ್ಲಿ ಮೂವರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ.
ದಾಳಿಕೋರರು “ಜೈ ಶ್ರೀರಾಮ್” ಘೋಷಣೆಗಳನ್ನು ಕೂಗುತ್ತಾ, ಪ್ರಚೋದನಕಾರಿ ಧಾರ್ಮಿಕ ಮಾತುಗಳನ್ನಾಡಿದ್ದಲ್ಲದೆ, ಪುಸ್ತಕ ಓದುತ್ತಿದ್ದವರನ್ನು “ಕಾಶ್ಮೀರ ವಿರೋಧಿಗಳು” ಎಂದು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಸಂತ್ರಸ್ತರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸಂಘ ಪರಿವಾರ ಸಂಘಟನೆಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅಹಮದಾಬಾದ್‌ನ ಖಾಸಗಿ ಶಾಲೆಯೊಂದು ತನ್ನ ಪಠ್ಯಕ್ರಮದ ಕಡ್ಡಾಯ ಓದುವ ಪಟ್ಟಿಯಿಂದ ಮಲಾಲಾ ಮತ್ತು ಆ್ಯನ್ ಫ್ರಾಂಕ್ ಅವರ ಕೃತಿಗಳನ್ನು ಕೈಬಿಟ್ಟಿತ್ತು. ಇದೀಗ ಉದ್ಯಾನವನದಲ್ಲಿ ನಡೆದ ದಾಳಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
