ದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧಿಕಾರಕ್ಕೆ ಬರದೇ ಇದ್ದಿದ್ದರೆ, ಇಂದು ಭಾರತವು ಇನ್ನಷ್ಟು ಸಮೃದ್ಧ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಬಲಿಷ್ಠ ದೇಶವಾಗಿರುತ್ತಿತ್ತು ಎಂದು ಅಮೆರಿಕದ ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರು ನಡೆಸಿದ ನೂತನ ಅಧ್ಯಯನ ವರದಿ ತಿಳಿಸಿದೆ.
ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದ ಕೆವಿನ್ ಗ್ರೀಯರ್ ಮತ್ತು ರಾಬಿನ್ ಗ್ರೀಯರ್ ಅವರು ‘ಪ್ರಾಮಿಸಸ್, ಪ್ರಾಮಿಸಸ್: ಗ್ರೋತ್ ಇನ್ ಇಂಡಿಯಾ ಅಂಡರ್ ಮೋದಿ ಅಂಡ್ ದಿ ಬಿಜೆಪಿ’ (ಭರವಸೆಗಳು, ಭರವಸೆಗಳು: ಮೋದಿ ಮತ್ತು ಬಿಜೆಪಿ ಆಡಳಿತದಲ್ಲಿ ಭಾರತದ ಬೆಳವಣಿಗೆ) ಎಂಬ ಶೀರ್ಷಿಕೆಯಡಿಯಲ್ಲಿ ಈ ಅಧ್ಯಯನ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರ ಒಂದು ದಶಕದ ಆಡಳಿತದಲ್ಲಿ ನೀಡಲಾದ ಭರವಸೆಗಳು ಮತ್ತು ವಾಸ್ತವ ಫಲಿತಾಂಶಗಳನ್ನು ಹೋಲಿಕೆ ಮಾಡಿರುವ ಈ ವರದಿಯು, ಮೋದಿ ಅವರ ಆಡಳಿತವನ್ನು “ವಿಫಲ ಭರವಸೆಗಳ ಕಥೆ” ಎಂದು ಬಣ್ಣಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ತಲಾವಾರು ಜಿಡಿಪಿ ಸೇರಿದಂತೆ ಹತ್ತು ಪ್ರಮುಖ ಆಡಳಿತಾತ್ಮಕ ಸೂಚ್ಯಂಕಗಳಲ್ಲಿ ಭಾರತದ ಸಾಧನೆ ಗಣನೀಯವಾಗಿ ಕುಸಿದಿದೆ ಎಂದು ವರದಿ ಹೇಳಿದೆ.
2014ರ ಹಿಂದಿನ ಆಡಳಿತಾತ್ಮಕ ನೀತಿಗಳೇ ಮುಂದುವರಿದಿದ್ದರೆ ಭಾರತದ ಸ್ಥಿತಿ ಹೇಗಿರುತ್ತಿತ್ತು ಎಂಬ ಆಧಾರದ ಮೇಲೆ ಸಿದ್ಧಪಡಿಸಲಾದ ಈ ವರದಿಯ ಪ್ರಕಾರ, ಭಾರತವು ತನ್ನ ಹಿಂದಿನ ಹಾದಿಯಲ್ಲೇ ಸಾಗಿದ್ದರೆ 2023ರ ವೇಳೆಗೆ ದೇಶದ ತಲಾವಾರು ಆದಾಯವು ಇಂದಿನ ವಾಸ್ತವ ಮಟ್ಟಕ್ಕಿಂತ 1,000 ಅಮೆರಿಕನ್ ಡಾಲರ್‌ಗಳಷ್ಟು ಹೆಚ್ಚಿರುತ್ತಿತ್ತು. ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಇತರ ಏಳು ಪ್ರಮುಖ ಸೂಚ್ಯಂಕಗಳ ಶ್ರೇಯಾಂಕದಲ್ಲಿಯೂ ಭಾರತವು ಅತ್ಯಂತ ಉತ್ತಮ ಸ್ಥಾನದಲ್ಲಿರುತ್ತಿತ್ತು ಎಂದು ಉಲ್ಲೇಖಿಸಲಾಗಿದೆ.
ರಾಜಕೀಯ ಭ್ರಷ್ಟಾಚಾರ ನಿಯಂತ್ರಣ, ಪ್ರಜಾಪ್ರಭುತ್ವ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಂಘಟನಾ ಸ್ವಾತಂತ್ರ್ಯ, ಕಾನೂನಿನ ಮುಂದೆ ಸಮಾನತೆ, ಎಲ್ಲರಿಗೂ ಸಮಾನ ರಕ್ಷಣೆ, ಕಾರ್ಯಾಂಗದ ಮೇಲೆ ನ್ಯಾಯಾಂಗದ ನಿಯಂತ್ರಣ ಹಾಗೂ ಶಾಸಕಾಂಗದ ಮಿತಿಗಳು ಸೇರಿದಂತೆ ಹತ್ತು ಪ್ರಮುಖ ಮಾನದಂಡಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಈ ಎಲ್ಲಾ ಸೂಚ್ಯಂಕಗಳು ತೀವ್ರ ಹಿನ್ನಡೆ ಕಂಡಿದ್ದು, ಮುಖ್ಯವಾಗಿ ಉದಾರವಾದಿ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಕಾನೂನಿನ ಸಮಾನತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಮಟ್ಟ ತೀವ್ರವಾಗಿ ಕುಸಿದಿದೆ ಎಂದು ವರದಿ ಎಚ್ಚರಿಸಿದೆ.
