Home ದೇಶ ಮಾಲೇಗಾಂವ್ ಸ್ಫೋಟ ಪ್ರಕರಣ: ಅಸಾದುದ್ದೀನ್ ಓವೈಸಿ ಅಸಮಾಧಾನ

ಮಾಲೇಗಾಂವ್ ಸ್ಫೋಟ ಪ್ರಕರಣ: ಅಸಾದುದ್ದೀನ್ ಓವೈಸಿ ಅಸಮಾಧಾನ

0

ಹೈದರಾಬಾದ್: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಖುಲಾಸೆಗೊಂಡಿರುವ ಕುರಿತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ಇದು “ಉದ್ದೇಶಪೂರ್ವಕ ಕಳಪೆ ತನಿಖೆ ಮತ್ತು ವಿಚಾರಣೆಯ ಫಲಿತಾಂಶ” ಎಂದು ಅವರು ಆರೋಪಿಸಿದ್ದಾರೆ.

‘ಕಳಪೆ ತನಿಖೆ ಕಾರಣ’

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಓವೈಸಿ, “ಮಲೇಗಾಂವ್ ಸ್ಫೋಟ ಪ್ರಕರಣದ ತೀರ್ಪು ನಿರಾಶಾದಾಯಕವಾಗಿದೆ. ಸ್ಫೋಟದಲ್ಲಿ ಆರು ನಮಾಜಿಗಳು ಸಾವನ್ನಪ್ಪಿದ್ದು, ಸುಮಾರು 100 ಜನರು ಗಾಯಗೊಂಡಿದ್ದರು. ಅವರ ಧರ್ಮದ ಕಾರಣಕ್ಕಾಗಿ ಅವರನ್ನು ಗುರಿಯಾಗಿಸಲಾಗಿತ್ತು. ಉದ್ದೇಶಪೂರ್ವಕ ಕಳಪೆ ತನಿಖೆ ಮತ್ತು ವಿಚಾರಣೆಯು ಆರೋಪಿಗಳ ಖುಲಾಸೆಗೆ ಕಾರಣವಾಗಿದೆ” ಎಂದು ಬರೆದಿದ್ದಾರೆ.

ಮೋದಿ ಮತ್ತು ಫಡ್ನವೀಸ್ ಸರ್ಕಾರಗಳಿಗೆ ಪ್ರಶ್ನೆ

ತೀರ್ಪಿನ ವಿರುದ್ಧ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮೇಲ್ಮನವಿ ಸಲ್ಲಿಸಲಿವೆಯೇ ಎಂದು ಓವೈಸಿ ಪ್ರಶ್ನಿಸಿದ್ದಾರೆ. “ಸ್ಫೋಟ ಸಂಭವಿಸಿ ಹದಿನೇಳು ವರ್ಷಗಳ ನಂತರ, ಸಾಕ್ಷ್ಯಗಳ ಕೊರತೆಯ ಕಾರಣದಿಂದ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಮುಂಬೈ ರೈಲು ಸ್ಫೋಟದ ಖುಲಾಸೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಧಾವಂತ ತೋರಿದ್ದ ಮೋದಿ ಮತ್ತು ಫಡ್ನವೀಸ್ ಸರ್ಕಾರಗಳು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತವೆಯೇ? ಮಹಾರಾಷ್ಟ್ರದ ‘ಜಾತ್ಯತೀತ’ ರಾಜಕೀಯ ಪಕ್ಷಗಳು ಈ ಬಗ್ಗೆ ಉತ್ತರದಾಯಿತ್ವವನ್ನು ಕೇಳುತ್ತವೆಯೇ? ಆ ಆರು ಜನರನ್ನು ಕೊಂದವರು ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜ್ಞಾ ಠಾಕೂರ್ ಮತ್ತು ರೋಹಿಣಿ ಸಾಲಿಯಾನ್ ಪ್ರಸ್ತಾಪ

ಮಾಜಿ ವಿಶೇಷ ಸರ್ಕಾರಿ ಅಭಿಯೋಜಕಿ ರೋಹಿಣಿ ಸಾಲಿಯಾನ್ ಅವರ ಆರೋಪವನ್ನು ಓವೈಸಿ ನೆನಪಿಸಿಕೊಂಡಿದ್ದಾರೆ. “2016ರಲ್ಲಿ ಪ್ರಕರಣದ ಅಭಿಯೋಜಕಿ ರೋಹಿಣಿ ಸಾಲಿಯಾನ್ ಅವರು, ಎನ್‌ಐಎ ತಮ್ಮನ್ನು ಆರೋಪಿಗಳ ಬಗ್ಗೆ ‘ಮೃದುವಾಗಿ ವರ್ತಿಸುವಂತೆ’ ಕೇಳಿಕೊಂಡಿತ್ತು ಎಂದು ಬಹಿರಂಗಪಡಿಸಿದ್ದನ್ನು ನೆನಪಿಸಿಕೊಳ್ಳಿ. ಅದೇ ರೀತಿ, 2017ರಲ್ಲಿ ಎನ್‌ಐಎ ಸಾಧ್ವಿ ಪ್ರಜ್ಞಾರನ್ನು ಖುಲಾಸೆಗೊಳಿಸಲು ಪ್ರಯತ್ನಿಸಿತ್ತು. ಅದೇ ವ್ಯಕ್ತಿ 2019ರಲ್ಲಿ ಬಿಜೆಪಿಯ ಸಂಸದರಾದರು” ಎಂದು ಅವರು ಹೇಳಿದ್ದಾರೆ.

ಹೇಮಂತ್ ಕರ್ಕರೆ ಮತ್ತು ‘ಕೇಸರಿ ಭಯೋತ್ಪಾದನೆ’

ಮುಂಬೈ 26/11 ದಾಳಿಯಲ್ಲಿ ಹುತಾತ್ಮರಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಓವೈಸಿ ಸ್ಮರಿಸಿದ್ದಾರೆ. “ಕರ್ಕರೆ ಅವರು ಮಲೇಗಾಂವ್‌ನಲ್ಲಿನ ಪಿತೂರಿಯನ್ನು ಬಯಲು ಮಾಡಿದ್ದರು ಮತ್ತು ದುರದೃಷ್ಟವಶಾತ್ 26/11 ದಾಳಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟರು. ಅದೇ ಬಿಜೆಪಿ ಸಂಸದೆ ಕರ್ಕರೆಗೆ ಶಾಪ ನೀಡಿದ್ದಾಗಿ ಮತ್ತು ಅವರ ಸಾವಿಗೆ ಅದೇ ಕಾರಣ ಎಂದು ಹೇಳಿದ್ದನ್ನು ಬಹಿರಂಗಪಡಿಸಿದ್ದನ್ನು ನೆನಪಿಸಿಕೊಳ್ಳಿ” ಎಂದು ಓವೈಸಿ ಹೇಳಿದ್ದಾರೆ.

‘ಇದು ಮೋದಿ ಸರ್ಕಾರದ ‘ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ’

ಪ್ರಸ್ತುತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, “ತಪ್ಪಾದ ತನಿಖೆಗಾಗಿ ಎನ್‌ಐಎ/ಎಟಿಎಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ? ಉತ್ತರ ನಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಇದು ‘ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ’ ಎಂದು ಹೇಳಿಕೊಳ್ಳುವ ಮೋದಿ ಸರ್ಕಾರ. ಭಯೋತ್ಪಾದನೆ ಆರೋಪ ಹೊಂದಿದ್ದವರನ್ನು ಸಂಸತ್ ಸದಸ್ಯರನ್ನಾಗಿ ಮಾಡಿದ್ದನ್ನು ಜಗತ್ತು ಎಂದಿಗೂ ಮರೆಯುವುದಿಲ್ಲ” ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

You cannot copy content of this page

Exit mobile version