Friday, June 21, 2024

ಸತ್ಯ | ನ್ಯಾಯ |ಧರ್ಮ

ಮಳೆಯ ನಡುವೆಯೂ ಕಾಂಗ್ರೆಸ್ ಭಾರೀ ಪ್ರತಿಭಟನೆ: ದೇಶದಾದ್ಯಂತ ಆಕ್ರೋಶದ ಅಲೆ

ನವದೆಹಲಿ: ಸುರಿಯುತ್ತಿರುವ ಮಳೆಯ ನಡುವೆಯೂ ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಇಂದು ಪ್ರತಿಭಟನೆ ನಡೆಸಿದರು.
ಹಣದುಬ್ಬರ, ನಿರುದ್ಯೋಗ, ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ಕಾಂಗ್ರೆಸ್ ಪಕ್ಷ ಒಂದು ದೇಶವ್ಯಾಪಿ ಪ್ರತಿಭಟನೆಗೆ ಕರೆನೀಡಿತ್ತು. ರಾಜಧಾನಿಯಲ್ಲಿ ಮಳೆಯ ನಡುವೆಯೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಹಣದುಬ್ಬರ ಮಿತಿ ಮೀರಿದೆ. ದೇಶದ ಜನರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಬೆಲೆಯೇರಿಕೆ ತಗ್ಗಿಸಲು ಏನನ್ನೂ ಮಾಡುತ್ತಿಲ್ಲ. ಈ ಕಾರಣದಿಂದ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.

ಪ್ರತಿಭಟನೆಗೂ ಮುನ್ನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ದೇಶದಲ್ಲಿ ಪ್ರಜಾಪ್ರಭುತ್ವ ಸಾಯುತ್ತಿದೆ, ಸರ್ವಾಧಿಕಾರ ಬಲಗೊಳ್ಳುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ರಾಹುಲ್ ಗಾಂಧಿ ಇಂದು ಪ್ರತಿಭಟನಾರ್ಥವಾಗಿ ಕಪ್ಪುಬಣ್ಣದ ದಿರಿಸನ್ನು ಧರಿಸಿ ಸಂಸತ್ ಪ್ರವೇಶಿಸಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಸದ್ ಭವನದ ಆವರಣದಲ್ಲಿ ಕಾಂಗ್ರೆಸ್ ಸಂಸದರೊಂದಿಗೆ ಪ್ರತಿಭಟನೆ ನಡೆಸಿದರು.

ಈ ನಡುವೆ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಳಾಸಾಹೇಬ್ ಥೋರಟ್, ಸಂಜಯ್ ನಿರುಪಮ್, ನಾನಾ ಪಟೋಲೆ ಮತ್ತಿತರನ್ನು ಬಂಧಿಸಲಾಯಿತು. ಅಸ್ಸಾಂನಲ್ಲಿ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

Related Articles

ಇತ್ತೀಚಿನ ಸುದ್ದಿಗಳು