ಬಿಜೆಪಿ ಮತಗಳ್ಳತನದ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ: ಚುನಾವಣಾ ಆಯೋಗದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗುಡುಗು

ದೆಹಲಿ: ಮತದಾರರ ಪಟ್ಟಿಯಲ್ಲಿ ವ್ಯಾಪಕ ಅಕ್ರಮಗಳನ್ನು ಎಸಗುವ ಮೂಲಕ ಭಾರತೀಯ ಪ್ರಜಾಪ್ರಭುತ್ವವನ್ನು ಟೊಳ್ಳು ಮಾಡಲು ಬಿಜೆಪಿ ನಡೆಸುತ್ತಿರುವ ಷಡ್ಯಂತ್ರವು ಈಗ ಜಗಜ್ಜಾಹೀರಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಬೇಕಾದ ಚುನಾವಣಾ ಆಯೋಗವು “ಬಿಜೆಪಿಯ ಕುರ್ಚಿ ಉಳಿಸುವ ಆಯೋಗ”ವಾಗಿ ಮಾರ್ಪಟ್ಟಿದೆ ಎಂದು ಅವರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಸ್ತೃತ ಪೋಸ್ಟ್ ಹಂಚಿಕೊಂಡಿರುವ ಖರ್ಗೆ, ಬಿಜೆಪಿಗೆ ಅನುಕೂಲವಾಗುವ ಕಡೆ ಹೊಸ ಮತದಾರರನ್ನು ಸೇರಿಸಲಾಗುತ್ತದೆ ಮತ್ತು ಎಲ್ಲಿ ಅನನುಕೂಲವಾಗುತ್ತದೆಯೋ ಅಲ್ಲಿ ಹೆಸರುಗಳನ್ನು ತೆಗೆದುಹಾಕಿ ‘ಮತ ಕಳ್ಳತನ’ ಮಾಡಲಾಗುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ನಡುವೆ ದಿಢೀರನೆ 39 ಲಕ್ಷ ಮತದಾರರ ಸಂಖ್ಯೆ ಹೆಚ್ಚಾಗಿತ್ತು, ಆದರೆ ಈಗಿನ ವಿಶೇಷ ಪರಿಷ್ಕರಣೆಯಲ್ಲಿ (SIR) ಬರೋಬ್ಬರಿ 2.07 ಕೋಟಿ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಅಡಿಯಲ್ಲಿ ಕೈಬಿಡಲಾಗಿದ್ದ ಹೆಸರುಗಳ ಪೈಕಿ ಶೇಕಡಾ 91 ರಷ್ಟು ಹೆಸರುಗಳನ್ನು ಮೇಲ್ಮನವಿ ಸಲ್ಲಿಸಿದ ನಂತರ ಮರಳಿ ಸೇರಿಸಬೇಕಾಯಿತು ಎಂದು ನೆನಪಿಸಿದ ಖರ್ಗೆ, ಚುನಾವಣೆ ವೇಳೆ ಈ ಹೆಸರುಗಳನ್ನು ತೆಗೆದುಹಾಕಿದ್ದು ಕೇವಲ ಬಿಜೆಪಿಯನ್ನು ಗೆಲ್ಲಿಸಲಿಕ್ಕಾಗಿಯೇ ಎಂದು ಪ್ರಶ್ನಿಸಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರನ್ನು ಹೆಚ್ಚಿಸಲಾಯಿತು, ಈಗ 47.56 ಲಕ್ಷ ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ಮಾಯವಾಗಿದ್ದು, ಇನ್ನೂ 33 ಲಕ್ಷ ಮತದಾರರಿಗೆ ನೋಟಿಸ್ ಕಳುಹಿಸಲು ಸಿದ್ಧತೆ ನಡೆದಿದೆ ಎಂದು ಅವರು ದೂರಿದ್ದಾರೆ.

ಕರ್ನಾಟಕ ಹಾಗೂ ತೆಲಂಗಾಣದಲ್ಲೂ ಕಾಂಗ್ರೆಸ್ ಕಾರ್ಯಕರ್ತರು ದಿನನಿತ್ಯ ಇಂತಹದ್ದೇ ಚುನಾವಣಾ ತಂತ್ರಗಾರಿಕೆ ಹಾಗೂ ವಂಚನೆಗಳನ್ನು ಎದುರಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ಮತಗಳ ಕಳ್ಳತನದ ವಿರುದ್ಧ ಇಡೀ ದೇಶವೀಗ ಒಗ್ಗೂಡುತ್ತಿದ್ದು, ಬಿಜೆಪಿಯ ಕುತಂತ್ರವನ್ನು ಜನತೆ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ, ಪ್ರಜಾಪ್ರಭುತ್ವವನ್ನು ಒತ್ತೆಯಿಟ್ಟು ನಡೆಸುತ್ತಿರುವ ಈ ದ್ರೋಹಕ್ಕೆ ತಕ್ಕ ಶಿಕ್ಷೆ ಸಿಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು