‘ರಾಷ್ಟ್ರಪತಿ ಆಳ್ವಿಕೆ ಹೇರಲಿ’: ಚುನಾವಣಾ ಸೋಲಿನ ನಡುವೆಯೂ ರಾಜೀನಾಮೆ ನೀಡಲು ಒಪ್ಪದ ಮಮತಾ ಬ್ಯಾನರ್ಜಿ

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಹೊರತಾಗಿಯೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮತ್ತೊಮ್ಮೆ ನಿರಾಕರಿಸಿದ್ದಾರೆ. ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರ ಭುಗಿಲೆದ್ದಿರುವ ನಡುವೆಯೇ, ಮಮತಾ ಅವರ ಈ ನಿರ್ಧಾರ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ.

ತಮ್ಮ ಪಕ್ಷವಾದ ತೃಣಮೂಲ ಕಾಂಗ್ರೆಸ್ (TMC) ಈ ನಡೆಯನ್ನು “ಸಾಂಕೇತಿಕ ಪ್ರತಿಭಟನೆ” ಎಂದು ಬಣ್ಣಿಸಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಿ ಅಥವಾ ನನ್ನನ್ನು ವಜಾಗೊಳಿಸಲಿ ಎಂದು ಬಿಜೆಪಿಗೆ ಸವಾಲು ಹಾಕಿರುವ ಮಮತಾ, ತಾವಾಗಿಯೇ ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು? ಬುಧವಾರ ಕಾಳಿಘಾಟ್‌ನಲ್ಲಿ ನಡೆದ ಪಕ್ಷದ ನೂತನ ಶಾಸಕರು ಮತ್ತು ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, “ಅವರಿಗೆ ಬೇಕಿದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರಲಿ, ಅಥವಾ ನನ್ನನ್ನು ವಜಾಗೊಳಿಸಲಿ. ಅಂದು ಇತಿಹಾಸದಲ್ಲಿ ಕಪ್ಪು ದಿನವಾಗಿ ದಾಖಲಾಗಲಿ,” ಎಂದು ಕಿಡಿಕಾರಿದ್ದಾರೆ.

ಅಲ್ಲದೆ, “ನಾನು ಸೋತಿಲ್ಲ, ಆದ್ದರಿಂದ ನಾನು ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಚುನಾವಣಾ ಆಯೋಗದ ಮೂಲಕ ನಮ್ಮನ್ನು ಅಧಿಕೃತವಾಗಿ ಸೋಲಿಸಿರಬಹುದು, ಆದರೆ ನೈತಿಕವಾಗಿ ನಾವೇ ಗೆದ್ದಿದ್ದೇವೆ,” ಎಂದು ಅವರು ಪ್ರತಿಪಾದಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರನ್ನು “ಚುನಾವಣೆಯ ವಿಲನ್” ಎಂದು ಕರೆದ ಅವರು, ಇವಿಎಂ ಯಂತ್ರಗಳ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದಾರೆ.

ಟಿಎಂಸಿ ವಾದ: ಟಿಎಂಸಿ ನಾಯಕ ಕುನಾಲ್ ಘೋಷ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, “ಮಮತಾ ದೀದಿ ರಾಜೀನಾಮೆ ನೀಡದಿರುವುದು ಒಂದು ಪ್ರತಿಭಟನಾ ಭಾಷೆ. ಸುಮಾರು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚುನಾವಣಾ ಆಯೋಗವು ಫಲಿತಾಂಶವನ್ನು ತಿರುಚಿದೆ ಎಂಬ ಆರೋಪಕ್ಕೆ ಇದು ನಮ್ಮ ಸಾಂಕೇತಿಕ ಪ್ರತಿಭಟನೆ,” ಎಂದು ಹೇಳಿದ್ದಾರೆ. ಮತ ಎಣಿಕೆ ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಪಕ್ಷದ ನಾಯಕರು ಸೂಚನೆ ನೀಡಿದ್ದಾರೆ.

ಸಂವಿಧಾನ ಏನು ಹೇಳುತ್ತದೆ? ಭಾರತದ ಸಂವಿಧಾನದ ಪ್ರಕಾರ, ಚುನಾವಣೆಯಲ್ಲಿ ಬಹುಮತ ಕಳೆದುಕೊಂಡ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜ್ಯಪಾಲರಿಗೆ ರಾಜೀನಾಮೆ ನೀಡಬೇಕು ಎಂಬುದು ಸಂಪ್ರದಾಯ. ಆದರೆ, ಒಂದು ವೇಳೆ ಮುಖ್ಯಮಂತ್ರಿ ರಾಜೀನಾಮೆ ನೀಡಲು ನಿರಾಕರಿಸಿದರೆ, ಸಂವಿಧಾನದ 164(1) ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ಹಸ್ತಕ್ಷೇಪ ಮಾಡುವ ಅಧಿಕಾರವಿದೆ.

ಬಹುಮತ ಕಳೆದುಕೊಂಡ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬಹುದು ಅಥವಾ ಬಹುಮತ ಸಾಬೀತುಪಡಿಸಲು ಸೂಚಿಸಬಹುದು. ಹಾಗೆಯೇ, ಅತಿ ದೊಡ್ಡ ಪಕ್ಷ ಅಥವಾ ಮೈತ್ರಿಕೂಟದ ನಾಯಕನನ್ನು ಸರ್ಕಾರ ರಚಿಸಲು ಆಹ್ವಾನಿಸುವ ಅಧಿಕಾರವೂ ರಾಜ್ಯಪಾಲರಿಗಿರುತ್ತದೆ.

Related Articles

ಇತ್ತೀಚಿನ ಸುದ್ದಿಗಳು