ನಿಮ್ಮ ಅಂತ್ಯ ನೋಡುವ ತನಕ ನಾನು ಸಾಯಲ್ಲ, ಮತ್ತೆ ಶೂನ್ಯದಿಂದ ಪಕ್ಷ ಕಟ್ಟುತ್ತೇನೆ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಆಂತರಿಕ ಬಂಡಾಯ ಮತ್ತು ನಾಯಕರ ವಲಸೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ರಾಜಕೀಯ ವಿರೋಧಿಗಳ ವಿರುದ್ಧ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ವಿರುದ್ಧ ದೊಡ್ಡ ಮಟ್ಟದ ರಾಜಕೀಯ ಸಂಚು ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, “ವಿರೋಧಿಗಳು ನನಗೆ ಹೃದಯಾಘಾತವಾಗಲಿ ಎಂದು ಬಯಸಿದ್ದರು. ಆದರೆ ನಿಮ್ಮ ರಾಜಕೀಯ ಅಂತ್ಯವನ್ನು ನೋಡುವವರೆಗೂ ನಾನು ಸಾಯುವುದಿಲ್ಲ, ಬದುಕಿರುತ್ತೇನೆ” ಎಂದು ಗುಡುಗಿದ್ದಾರೆ.

ಫೇಸ್‌ಬುಕ್ ಲೈವ್ ಮೂಲಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಇತ್ತೀಚೆಗೆ ಪಕ್ಷ ತೊರೆದ ನಾಯಕರನ್ನು “ದ್ರೋಹಿಗಳು” ಎಂದು ಕಟುವಾಗಿ ಟೀಕಿಸಿದರು. ಅಂತಹ ನಾಯಕರ ಪರವಾಗಿ ರಾಜ್ಯದ ಜನರ ಕ್ಷಮೆ ಯಾಚಿಸಿದ ಅವರು, “ದ್ರೋಹಿಗಳ ವರ್ತನೆಗಾಗಿ ನಾನು ಜನರ ಬಳಿ ಕ್ಷಮೆ ಕೇಳುತ್ತೇನೆ. ನನ್ನ ರಾಜಕೀಯ ಉಳಿವಿಗಾಗಿ ನಾನು ಅಥವಾ ನನ್ನ ಕುಟುಂಬದವರು ಎಂದಿಗೂ ಆತ್ಮಸಾಕ್ಷಿಯನ್ನು ಅಡವಿಟ್ಟಿಲ್ಲ. ಒಂದು ವೇಳೆ ನಾವು ಕೇಂದ್ರದೊಂದಿಗೆ ರಾಜಿ ಮಾಡಿಕೊಂಡಿದ್ದರೆ ಇಷ್ಟೊಂದು ಕಿರುಕುಳ ಮತ್ತು ತನಿಖೆಗಳನ್ನು ಎದುರಿಸಬೇಕಾಗುತ್ತಿರಲಿಲ್ಲ” ಎಂದರು.

ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಪೊಲೀಸರನ್ನು ದುರ್ಬಲಗೊಳಿಸಿ ಬಿಜೆಪಿ ಟಿಎಂಸಿಯನ್ನು ಒಡೆಯಲು ಯತ್ನಿಸುತ್ತಿದೆ ಎಂದು ಮಮತಾ ಗಂಭೀರ ಆರೋಪ ಮಾಡಿದರು. “ಬಿಜೆಪಿಯು ತನಿಖಾ ಸಂಸ್ಥೆಗಳ ಬೆದರಿಕೆ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸಿ ಸ್ಥಳೀಯ ಪುರಸಭೆಗಳನ್ನು ಅಸ್ಥಿರಗೊಳಿಸುತ್ತಿದೆ. ವಿವಿಧ ಹಗರಣಗಳ ತನಿಖೆ ಎದುರಿಸುತ್ತಿರುವ ನಮ್ಮ ಪಕ್ಷದ ನಾಯಕರು ಕೇವಲ ತಮ್ಮ ಸ್ವಾರ್ಥ ಮತ್ತು ರಾಜಕೀಯ ಅನುಕೂಲಕ್ಕಾಗಿ ಬಿಜೆಪಿಯ ‘ವಾಷಿಂಗ್ ಮಷೀನ್’ ಸೇರುತ್ತಿದ್ದಾರೆ. ಭಯದಿಂದಾಗಿ ನಮ್ಮ ಹಲವು ಶಾಸಕರು ಮತ್ತು ಸಂಸದರು ಇಂತಹ ‘ಸೆಟ್ಟಿಂಗ್ ಕಂಪನಿ’ಗಳ ಮೊರೆ ಹೋಗಿದ್ದಾರೆ” ಎಂದು ಅವರು ಕಿಡಿಕಾರಿದರು.

ಪಕ್ಷದ ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯ ನಡುವೆಯೂ ತಮ್ಮ ಹೋರಾಟದ ಹಾದಿಯನ್ನು ಮುಂದುವರಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. “ಯಾರೂ ನನ್ನನ್ನು ಕಟ್ಟಿಹಾಕಲು ಸಾಧ್ಯವಿಲ್ಲ. 2004ರ ಕಠಿಣ ಸನ್ನಿವೇಶದ ನಂತರವೂ ನಾನು ಪಕ್ಷವನ್ನು ತಳಮಟ್ಟದಿಂದ ಮರುಸಂಘಟಿಸಿದ್ದೆ. ಈಗಿನ ಪರಿಸ್ಥಿತಿಯಲ್ಲಿ ಅಗತ್ಯ ಬಿದ್ದರೆ 2026ರ ನಂತರವೂ ಶೂನ್ಯದಿಂದ ಮತ್ತೆ ಪಕ್ಷವನ್ನು ಕಟ್ಟಿ ಬೆಳೆಸಲು ಸಿದ್ಧಳಾಗಿದ್ದೇನೆ” ಎಂದು ವಿರೋಧಿಗಳಿಗೆ ಸವಾಲು ಹಾಕಿದರು.

ತಮ್ಮ ಸುದೀರ್ಘ ರಾಜಕೀಯ ಜನಾಂದೋಲನಗಳನ್ನು ಸ್ಮರಿಸಿದ ಮಮತಾ ಬ್ಯಾನರ್ಜಿ, ಸಿಂಗೂರ್ ಭೂಸ್ವಾಧೀನ ವಿರೋಧಿ ಉಪವಾಸ ಸತ್ಯಾಗ್ರಹ, ಕಮ್ದುನಿ ಘಟನೆ ಹಾಗೂ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ದುರಂತದ ಸಂದರ್ಭದಲ್ಲಿ ತಾವು ಸಂತ್ರಸ್ತರ ಪರವಾಗಿ ನಿಂತಿದ್ದನ್ನು ನೆನಪಿಸಿಕೊಂಡರು. ಇದೇ ವೇಳೆ, ಲಡಾಖ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅವರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿರುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು