ಬೆಂಗಳೂರು: ಇತ್ತೀಚೆಗಷ್ಟೇ ಸಿಟಿ ಮಾಲ್‌ನಲ್ಲಿ ಕನಿಷ್ಠ ನಾಲ್ವರು ಮಹಿಳೆಯರೊಡನೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿ ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಶರಣಾದ ಬಳಿಕ ಆತನ ಗುರುತು ಪತ್ತೆಯಾಗಿದೆ.
ಆಪಾದಿತ ಅಪರಾಧಿ 63 ವರ್ಷ ವಯಸ್ಸಿನ ನಿವೃತ್ತ ಶಿಕ್ಷಕ, ಅಶ್ವಥ್ ನಾರಾಯಣ್ ಆಗಿದ್ದು, ಆತ ಮೂರನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ನ್ಯಾಯಾಲಯಕ್ಕೆ ಶರಣಾದ ನಂತರ ಜಾಮೀನು ದೊರೆತಿದೆ ಎಂದು ಡೆಕ್ಕನ್ ಹೆರಾಲ್ಡ್ ತಿಳಿಸಿದೆ.
ಬಸವೇಶ್ವರನಗರದ ನಿವಾಸಿ ನಾರಾಯಣ್ ಅಗ್ರಹಾರ ದಾಸರಹಳ್ಳಿಯ ಶಾಲೆಯಲ್ಲಿ ಪಾಠ ಮಾಡುತ್ತಿದ್ದ.
ಅಕ್ಟೋಬರ್ 29 ರಂದು ರಾಜಾಜಿನಗರದ ಲುಲು ಮಾಲ್‌ನಲ್ಲಿ ಮಹಿಳೆಯೊಬ್ಬಳನ್ನು ತಬ್ಬಿಕೊಳ್ಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ನಾರಾಯಣ್ ಸೆರೆಯಾಗಿದ್ದು, ವಿಡಿಯೋ ಚಿತ್ರೀಕರಣ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪ್ರತ್ಯಕ್ಷದರ್ಶಿ, ಶಂಕಿತ ವ್ಯಕ್ತಿ ಸಂಜೆ 6ರಿಂದ 6.30 ರ ನಡುವೆ ಮಾಲ್‌ನಲ್ಲಿನ ಗೇಮಿಂಗ್ ವಲಯದಲ್ಲಿ ನಾಲ್ಕೈದು ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರತ್ಯಕ್ಷದರ್ಶಿ ಯಶವಂತ ಜಯಪ್ರಕಾಶ್ “ಮೊದಲಿಗೆ ನಾನು ಏನೋ ತಪ್ಪಾಗಿ ನಡೆದಿರಬಹುದು ಎಂದು ಸುಮ್ಮನಾಗಿದ್ದೆ. ಆದರೆ ಆ ವ್ಯಕ್ತಿ ಮಹಿಳೆಯರು ಇರುವ ಜಾಗಗಳಿಗೆ ಹೋಗಿ ಮತ್ತೆ ಮತ್ತೆ ಅದನ್ನೇ ಮಾಡುತ್ತಿದ್ದ. ಆಗ ಇದು ಉದ್ದೇಶಪೂರ್ವಕವಿರಬಹುದು ಎನ್ನುವ ಅನುಮಾನ ಮೂಡಿತು” ಎನ್ನುತ್ತಾರೆ.
ವೀಡಿಯೊವನ್ನು ಪುರಾವೆಯಾಗಿ ರೆಕಾರ್ಡ್ ಮಾಡುವ ಮೊದಲು, ಜಯಪ್ರಕಾಶ್ ಆರೋಪಿಯನ್ನು ಕೆಲವು ನಿಮಿಷಗಳ ಕಾಲ ಹಿಂಬಾಲಿಸಿ ವಿಷಯವನ್ನು ದೃಢಪಡಿಸಿಕೊಂಡರು. ಜಯಪ್ರಕಾಶ್ ಕೂಡಲೇ ಮಾಲ್ ಸೆಕ್ಯುರಿಟಿಯವರನ್ನು ಸಂಪರ್ಕಿಸಿ ಘಟನೆಯನ್ನು ತಿಳಿಸಿದರು.
“ನಾನು ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದು ಹುಡುಕಲು ಪ್ರಾರಂಭಿಸಿದಾಗ, ಅವನು ಅಲ್ಲಿ ಇರಲಿಲ್ಲ” ಎಂದು ಜಯಪ್ರಕಾಶ್ ಹೇಳಿದರು. “ನಾವು ಆತನಿಗಾಗಿ ಇತರ ಮಹಡಿಗಳಲ್ಲಿಯೂ ಹುಡುಕಿದೆವು, ಆದರೆ ಅವನನ್ನು ಕಂಡುಹಿಡಿಯಲಾಗಲಿಲ್ಲ. ನಾನು ಕೆಲವು ನಿಮಿಷಗಳ ಕಾಲ ಸುತ್ತಾಡಿದ್ದರಿಂದ, ಅವನು ನನ್ನನ್ನು ಗಮನಿಸಿರಬಹುದು ಎನ್ನಿಸುತ್ತದೆ. ನಂತರ ನಾನು ಮಾಲ್ ನಿರ್ವಹಣಾ ತಂಡವನ್ನು ಸಂಪರ್ಕಿಸಿದೆ, ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಮತ್ತು ವೀಡಿಯೊವನ್ನು ಹಂಚಿಕೊಂಡೆ.”
ಮಾಲ್ ಮ್ಯಾನೇಜ್‌ಮೆಂಟ್ ಪ್ರತಿನಿಧಿಯೊಬ್ಬರು ಅಕ್ಟೋಬರ್ 30ರಂದು ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಅವರು ಐಪಿಸಿ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು), 354 ಎ (ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳಕ್ಕೆ ಶಿಕ್ಷೆ) ಮತ್ತು 509 (ಪದ, ಸನ್ನೆ ಅಥವಾ ಮಹಿಳೆಯನ್ನು ಅವಮಾನಿಸುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.