Home ದೇಶ ಚುನಾವಣಾ ಬಾಂಡ್‌ಗಳ ಸಿಂಧುತ್ವ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಚುನಾವಣಾ ಬಾಂಡ್‌ಗಳ ಸಿಂಧುತ್ವ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

0

ಆಡಳಿತ ಪಕ್ಷಗಳೇ ಏಕೆ ಹೆಚ್ಚು ದೇಣಿಗೆ ಪಡೆಯುತ್ತಿವೆ ಎಂದು ಪ್ರಶ್ನಿಸಿದ ಕೋರ್ಟ್

ಹೊಸ ದೆಹಲಿ: ರಾಜಕೀಯ ಪಕ್ಷಗಳಿಗೆ ಹಣ ನೀಡಲು ತಂದಿರುವ ಚುನಾವಣಾ ಬಾಂಡ್‌ಗಳ ಸಿಂಧುತ್ವದ ಕುರಿತು ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಾದಗಳು ಮುಕ್ತಾಯಗೊಂಡಿವೆ. ಮೂರು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಸಿಪಿಎಂ, ಎಡಿಆರ್, ಕಾಂಗ್ರೆಸ್ ಮುಖಂಡರಾದ ಜಯಾ ಠಾಕೂರ್ ಮತ್ತು ಇನ್ನೊಬ್ಬ ಅರ್ಜಿದಾರರು ಜನವರಿ 2 2018ರಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿಆರ್ ಗವಾರ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ನೇತೃತ್ವದ ಸಿಜೆಐ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ವಿಚಾರಣೆ ನಡೆಸಿದರು.

ಅಕ್ಟೋಬರ್ 10ರಂದು, ಸುಪ್ರೀಂ ಕೋರ್ಟ್ 2024ರ ಸಾರ್ವತ್ರಿಕ ಚುನಾವಣೆಗಳಿಗೆ ಚುನಾವಣಾ ಬಾಂಡ್‌ಗಳ ವಿತರಣೆಯನ್ನು ಪ್ರಾರಂಭಿಸುವ ಮೊದಲು ಸಮಗ್ರ ತನಿಖೆ ನಡೆಸುವಂತೆ ವಕೀಲ ಪ್ರಶಾಂತ್ ಭೂಷಣ್ ಅವರ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡಿತು ಮತ್ತು ಅಕ್ಟೋಬರ್ 31ರಿಂದ ವಿಚಾರಣೆಯನ್ನು ನಡೆಸಿತು. ಚುನಾವಣಾ ಬಾಂಡ್ ಯೋಜನೆಯು ಪಾರದರ್ಶಕತೆಯನ್ನು ಹೊಂದಿಲ್ಲ ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತದೆ ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಕಪಿಲ್ ಸಿಬಲ್ ವಾದಿಸಿದರು.

ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಸಮಾನ ಅವಕಾಶ ನೀಡದೆ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ವಾದಿಸಿದರು. ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹವಾದ ಹೆಚ್ಚಿನ ಹಣ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳಿಗೆ ಹೋಗಿದೆ ಎಂದು ಎಡಿಆರ್‌ನ ವಕೀಲ ಪ್ರಶಾಂತ್ ಭೂಷಣ್ ಅಂಕಿಅಂಶಗಳೊಂದಿಗೆ ವಿವರಿಸಿದರು. ಚುನಾವಣಾ ಬಾಂಡ್‌ಗಳ ವಿರುದ್ಧ ಸಿಪಿಎಂ ಮಾತ್ರ ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ಅವರು ಹೇಳಿದರು.

ಚುನಾವಣಾ ಬಾಂಡ್ ಯೋಜನೆಯ ಉದ್ದೇಶಗಳನ್ನು ಸಾಧಿಸುವಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಯೋಜನೆಯು ಗೌಪ್ಯತೆ ಮತ್ತು ವಿಶ್ವಾಸಾರ್ಹತೆಗೆ ಸೀಮಿತವಾಗಿದೆ ಎಂದು ಹೇಳಲಾಗುತ್ತದೆ. ಅಧಿಕಾರದಲ್ಲಿರುವವರು ಯಾವ ರಾಜಕೀಯ ಪಕ್ಷಕ್ಕೆ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ತನಿಖಾ ಸಂಸ್ಥೆಗಳ ಮೂಲಕ ಪತ್ತೆ ಮಾಡಬಹುದಾಗಿದ್ದು, ವಿರೋಧ ಪಕ್ಷದಲ್ಲಿರುವವರಿಗೆ ಅಂತಹ ಅವಕಾಶವಿಲ್ಲ ಎಂದು ಸಂವಿಧಾನ ಪೀಠ ಅಭಿಪ್ರಾಯಪಟ್ಟಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ಸಮಾನ ಅವಕಾಶಗಳನ್ನು ಒದಗಿಸದಿದ್ದರೆ, ಯೋಜನೆಯ ನಿಷ್ಪಕ್ಷಪಾತತನವನ್ನು ಮತ್ತು ಪಾರದರ್ಶಕತೆಯನ್ನು ಪ್ರಶ್ನಿಸಲಾಗುತ್ತದೆ ಎಂದು ಅದು ಹೇಳಿದೆ.

ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸಂಗ್ರಹಿಸುವ ಯೋಜನೆಯ ಮೂಲಕ ಲಂಚವನ್ನು ಕಾನೂನುಬದ್ಧಗೊಳಿಸಲಾಗಿದೆಯೇ? ಎಂದು ಸಿಜೆಐ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪ್ರಶ್ನಿಸಿದ್ದಾರೆ. ‘ಹೆಚ್ಚಿನ ದೇಣಿಗೆ ಆಡಳಿತ ಪಕ್ಷಕ್ಕೇ ಏಕೆ ಹೋಗುತ್ತಿದೆ? ಇದಕ್ಕೆ ಕಾರಣವೇನು? ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹಿಸಿದ ಸಂಪೂರ್ಣ ಹಣವನ್ನು ಚುನಾವಣಾ ಆಯೋಗದಲ್ಲಿ ಇರಿಸಬಹುದು ಮತ್ತು ಅದರ ಮೂಲಕ ಎಲ್ಲಾ ಪಕ್ಷಗಳಿಗೆ ಸಮಾನವಾಗಿ ವಿತರಿಸಬಹುದು ಎಂದು ಅವರು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ‘ಹಾಗೆ ಮಾಡಿದರೆ ಸ್ವಲ್ಪವೂ ದೇಣಿಗೆ ಬರುವುದಿಲ್ಲ’ ಎಂದು ಅಭಿಪ್ರಾಯಪಟ್ಟರು

ಸೆಪ್ಟೆಂಬರ್ 30ರವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಸ್ವೀಕರಿಸಿರುವ ದೇಣಿಗೆಗಳ ವಿವರವನ್ನು ಎರಡು ವಾರಗಳಲ್ಲಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಏಪ್ರಿಲ್ 12, 2019ರಂದು ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಉಲ್ಲೇಖಿಸಿ, ಈ ಆದೇಶವು ಘೋಷಣೆಯ ದಿನಾಂಕಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದೆ. ಈ ವಿಚಾರದಲ್ಲಿ ಚುನಾವಣಾ ಆಯೋಗಕ್ಕೆ ಅನುಮಾನಗಳಿದ್ದರೆ ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟನೆ ಪಡೆಯಬೇಕು ಎಂದು ಕೋರ್ಟ್‌ ಒತ್ತಿ ಹೇಳಿದೆ. ಬಳಿಕ ತೀರ್ಪನ್ನು ಕಾಯ್ದಿರಿಸಿತು. ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರದ ಪರವಾಗಿ ತಮ್ಮ ವಾದವನ್ನು ಮುಂದುವರಿಸಿದರು.. ‘ನಿರ್ಧಾರವು ತೀರಾ ನಿರಂಕುಶವಾಗಿರದಿರುವವರೆಗೆ ಶಾಸಕಾಂಗಕ್ಕೆ ಪ್ರಯೋಗ ಮಾಡುವ ಹಕ್ಕಿದೆ. ಚುನಾವಣಾ ಬಾಂಡ್ ಯೋಜನೆ ಜಾರಿಗೆ ಬಂದ ನಂತರ ಏನಾಯಿತು ಎಂಬುದು ಇಲ್ಲಿ ಪ್ರಶ್ನೆ. ಆ ಟ್ರೆಂಡ್ ಗಳನ್ನು ಬೆಂಚ್ ಮುಂದೆ ಇಟ್ಟಿದ್ದೇವೆ’ ಎಂದರು.

ಈ ಸಂದರ್ಭದಲ್ಲಿ ವಕೀಲ ಕಾನು ಅಗರ್ವಾಲ್, ಈ ಹಿಂದೆ 20 ಸಾವಿರ ರೂ.ಗಿಂತ ಕಡಿಮೆ ಹಣ ನೀಡಿದವರ ವಿವರ ನೋಂದಣಿ ಮಾಡಬೇಕಿರಲಿಲ್ಲ, ಹೆಚ್ಚಿನ ದೇಣಿಗೆ ಈ ಮೊತ್ತಕ್ಕಿಂತ ಕಡಿಮೆ ಇರುವಂತೆ ಪಾರ್ಟಿಗಳು ನೋಡಿಕೊಳ್ಳುತ್ತಿದ್ದವು. ಮತ್ತು ಈ ಮೂಲಕ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್, ಸದ್ಯ 20 ಸಾವಿರ ರೂ.ಗಿಂತ ಕಡಿಮೆ ಮೊತ್ತದ ದೇಣಿಗೆ ಕೊಂಚ ಕಡಿಮೆಯಾಗಿದ್ದು, ಎಲೆಕ್ಟೋರಲ್ ಬಾಂಡ್ ಗಳು ಹೆಚ್ಚಾಗಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ನ್ಯಾಯಮೂರ್ತಿ ಖನ್ನಾ ಮಧ್ಯಪ್ರವೇಶಿಸಿ ರೂ.20 ಸಾವಿರಕ್ಕಿಂತ ಕಡಿಮೆ ಮೊತ್ತದ ಚುನಾವಣಾ ಬಾಂಡ್‌ಗಳ ಪ್ರಮಾಣವನ್ನು ತೋರಿಸುವಂತೆ ಕೇಳಿದರು. ಚುನಾವಣಾ ಬಾಂಡ್‌ಗಳ ಮೂಲಕ ನಿಧಿ ಸಂಗ್ರಹಿಸಲು ನಿರಾಕರಿಸಿದ ಪಕ್ಷವು ಇನ್ನೂ ಕಡಿಮೆ ಮೊತ್ತದ ಸ್ವಯಂಪ್ರೇರಿತ ದೇಣಿಗೆ ಪಡೆಯುತ್ತಿದೆ ಎಂದು ಸಾಲಿಸಿಟರ್ ಜನರಲ್ ಹೇಳಿದರು. ಎಲೆಕ್ಟೋರಲ್ ಬಾಂಡ್ ಬಳಕೆ ಹೆಚ್ಚಾದರೆ ರೂ.20 ಸಾವಿರಕ್ಕಿಂತ ಕಡಿಮೆ ಮೊತ್ತದ ದೇಣಿಗೆ ಕಡಿಮೆಯಾಗಲಿದೆ ಎಂದರು. ಎಲೆಕ್ಟೋರಲ್ ಬಾಂಡ್ ಮೂಲಕ ಹಣ ಸಂಗ್ರಹಿಸಲು ಮುಂದಾಗದ ಪಕ್ಷಗಳಲ್ಲಿ ಮಾತ್ರವೇ 20 ಸಾವಿರ ರೂ.ಗಿಂತ ಕಡಿಮೆ ಮೊತ್ತದೆ ದೇಣಿಗೆ ಬರುವುದು ತಗ್ಗುವುದಿಲ್ಲ ಎಂದರು. ಅದಕ್ಕಾಗಿಯೇ ಪಕ್ಷವು ಹಳೆಯ ವಿಧಾನಕ್ಕೆ ಒತ್ತಾಯಿಸುತ್ತಿದೆ ಎಂದು ಅವರು ಆರೋಪಿಸಿದರು.

ಇದಕ್ಕೂ ಮುನ್ನ ಈ ಅರ್ಜಿಗಳ ಕುರಿತು ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಚುನಾವಣಾ ಬಾಂಡ್‌ಗಳ ಹಣದ ಮೂಲಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವ ಹಕ್ಕು ದೇಶದ ನಾಗರಿಕರಿಗೆ ಇಲ್ಲ ಎಂದು ಅದು ಹೇಳುತ್ತದೆ. ಚುನಾವಣಾ ಫಂಡಿಂಗ್, ಪಾರ್ಟಿ ಫಂಡಿಂಗ್, ಪ್ರಚಾರ ನಿಧಿ ಎಲ್ಲವೂ ಕೆಲಿಡೋಸ್ಕೋಪ್ ಇದ್ದಂತೆ ಮತ್ತು ಇದು ಆಸಕ್ತಿದಾಯಕ ಪ್ರಯೋಗವಾಗಿದೆ ಎಂದು ಅವರು ನ್ಯಾಯಾಲದೆದುರು ತಿಳಿಸಿದರು.

You cannot copy content of this page

Exit mobile version