ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಮೌಲ್ಯ ಮಾಪನ ವಿಭಾಗವು ಇತ್ತೀಚೆಗೆ ನಡೆದ ಸೆಮಿಸ್ಟರ್ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದನ್ನು ಭಾಗಶಃ ನಿಲ್ಲಿಸಿದ್ದು, ಇರುವ ಉತ್ತರ ಪತ್ರಿಕೆಗಳ ಆಧಾರದ ಮೇಲೆ ಕೇವಲ ಆರನೇ ಸೆಮಿಸ್ಟರ್ ಪತ್ರಿಕೆಗಳನ್ನು ಮಾತ್ರ ಮೌಲ್ಯ ಮಾಪನ ಮಾಡಲಾಗುತ್ತಿದೆ.
ಮೌಲ್ಯ ಮಾಪನ ಸೋಮವಾರದಿಂದ ಆರಂಭಗೊಂಡಿದ್ದರೂ ಕೇಂದ್ರಗಳಿಂದ ಸರಿಯಾಗಿ ಉತ್ತರ ಪತ್ರಿಕೆಗಳು ಕಳುಹಿಸಿಲ್ಲ. ಇದರಿಂದ ಮೌಲ್ಯ ಮಾಪನ ವಿಭಾಗದವರು ಕೆಲಸಕ್ಕೆ ಬಂದರೂ ಕೆಲಸವಿಲ್ಲದೆ ಮನೆಗೆ ವಾಪಸ್ ತೆರಳುವಂತಾಗಿದೆ.
ಈ ಕುರಿತು ಮಾತನಾಡಿದ ರಿಜಿಸ್ಟ್ರಾರ್ ಪಿ.ಎಲ್.ಧರ್ಮ ʼಅಂತಿಮ ಪದವಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ಪರಿಗಣಿಸಿ ಪ್ರಸ್ತುತ ಇರುವ ಉತ್ತರ ಪತ್ರಿಕೆಗಳ ಆಧಾರದ ಮೇಲೆ ಕೇವಲ ಆರನೇ ಸೆಮಿಸ್ಟರ್ ಪತ್ರಿಕೆಗಳ ಮೌಲ್ಯ ಮಾಪನ ಮಾತ್ರ ಬೇಗ ಮಾಡುತ್ತಿದ್ದೇವೆ. ಅಕ್ಟೋಬರ್ 10ರಿಂದ 3 ಮತ್ತು 5ನೇ ಸೆಮಿಸ್ಟರ್ ತರಗತಿಗಳು ಆರಂಭವಾಗಲಿದ್ದು, ಮೊದಲು ಮತ್ತು ಎರಡನೇ ಸೆಮಿಸ್ಟರ್ ಪರೀಕ್ಷೆ ಮೌಲ್ಯ ಮಾಪನದ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆʼ ಎಂದು ಮಾಹಿತಿ ನೀಡಿದ್ದಾರೆ.
ಮೌಲ್ಯಮಾಪನ ತಡ ಮಾಡಿರುವ ವಿಚಾರವಾಗಿ ಮಾತನಾಡಿದ ಅಲ್ಲಿನ ಉಪನ್ಯಾಸಕರು ʼಪರೀಕ್ಷೆಯ ಮೌಲ್ಯಮಾಪನವನ್ನು 3 ದಿನದೊಳಗೆ ಮುಗಿಸಿ, ಈ ರೀತಿ ಗೊಂದಲವಾಗುತ್ತಿರುವುದು ತರಗತಿಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರೂ ಮಂಗಳೂರು ವಿಶ್ವವಿದ್ಯಾಲಯಕ್ಕೆ ನಮ್ಮ ಸಲಹೆಯನ್ನು ಪರಿಗಣಿಸಲು ಇಷ್ಟವಿಲ್ಲʼ ಎಂದು ಹೇಳಿದರು. ಈ ವಿಚಾರದ ಕುರಿತು ಮೌಲ್ಯಮಾಪಕರು ಆಕ್ಷೇಪ ವ್ಯಕ್ತ ಪಡಿಸಿದರು.
ಇದನ್ನೂ ನೋಡಿ: ಕೇರಳಾದಲ್ಲಿ ಬುರ್ಖಾ ಧರಿಸಿ ಸಿಕ್ಕಿ ಬಿದ್ದ ಅರ್ಚಕ