ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಜನಾಂಗೀಯ ಸಂಘರ್ಷ: 2 ದಿನಗಳಲ್ಲಿ 10 ಮಂದಿ ಭೀಕರ ಹತ್ಯೆ, ಕರ್ಫ್ಯೂ ಜಾರಿ!

ಈಶಾನ್ಯ ರಾಜ್ಯ ಮಣಿಪುರದಲ್ಲಿ ಪರಿಸ್ಥಿತಿ ಮತ್ತೊಮ್ಮೆ ನಿಯಂತ್ರಣ ತಪ್ಪಿದ್ದು, ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ ರಕ್ತಸಿಕ್ತ ಜನಾಂಗೀಯ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ಎರಡು ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಗುಂಡಿನ ಚಕಮಕಿ ಹಾಗೂ ಹಿಂಸಾಚಾರದಲ್ಲಿ ಕನಿಷ್ಠ 10 ಜನರು ಸಾವಿಗೀಡಾಗಿದ್ದಾರೆ.

ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಕಂಗ್‌ಪೋಕ್ಪಿ ಮತ್ತು ಕಮ್‌ಜೊಂಗ್ ಜಿಲ್ಲೆಗಳಲ್ಲಿ 24 ಗಂಟೆಗಳ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಉಖ್ರುಲ್ ಸೇರಿದಂತೆ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ವ್ಯಾಪಕವಾಗಿ ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ.

48 ಗಂಟೆಗಳ ಕಠಿಣ ಗಡುವು:

ಕಂಗ್‌ಪೋಕ್ಪಿ ಜಿಲ್ಲೆಯ ಮಕುಯಿ ಅಶಾಂಗ್ ಗ್ರಾಮದಲ್ಲಿ ಶಸ್ತ್ರಸಜ್ಜಿತ ಉಗ್ರರ ದಾಳಿಗೆ ಅಜಿನ್‌ಬೌವ್ ಆರ್ (52) ಎಂಬ ನಾಗಾ ಸಮುದಾಯದ ವ್ಯಕ್ತಿ ಬಲಿಯಾಗಿದ್ದು, ಶನಿವಾರ ಅವರ ರುಂಡವಿಲ್ಲದ ಮುಂಡ ಮಾತ್ರ ಪತ್ತೆಯಾಗಿತ್ತು. ನಂತರ ಶಸ್ತ್ರಸಜ್ಜಿತ ಉಗ್ರರು ಅಜಿನ್‌ಬೌವ್ ಅವರ ಕತ್ತರಿಸಿದ ರುಂಡವನ್ನು ಕೈಯಲ್ಲಿ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ನಾಗಾ ನಾಗರಿಕ ಹಕ್ಕುಗಳ ಸಂಸ್ಥೆ ‘ಜಾಯಿಂಟ್ ಟ್ರೈಬ್ಸ್ ಕೌನ್ಸಿಲ್ ಮಣಿಪುರ’, ಉಗ್ರರು ವ್ಯಕ್ತಿಯ ರುಂಡವನ್ನು ‘ಟ್ರೋಫಿ’ಯಂತೆ ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಕತ್ತರಿಸಿದ ರುಂಡವನ್ನು ಪತ್ತೆಹಚ್ಚಿ ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಲು ಕುಟುಂಬಕ್ಕೆ ಒಪ್ಪಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ 48 ಗಂಟೆಗಳ ಖಡಕ್ ಗಡುವು (ಅಲ್ಟಿಮೇಟಂ) ನೀಡಿದೆ.

ರುಂಡವನ್ನು ಹಸ್ತಾಂತರಿಸುವವರೆಗೂ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಬಿಡುವುದಿಲ್ಲ ಎಂದು ಸಂಘಟನೆ ಸ್ಪಷ್ಟಪಡಿಸಿದೆ. ನಿಗದಿತ ಸಮಯದೊಳಗೆ ರುಂಡ ಸಿಗದಿದ್ದರೆ ನ್ಯಾಯಕ್ಕಾಗಿ ಅತ್ಯಂತ ಕಠಿಣ ಹೆಜ್ಜೆಗಳನ್ನು ಇಡುವುದಾಗಿ ನಾಗಾ ಕೌನ್ಸಿಲ್ ಎಚ್ಚರಿಸಿದೆ.

ಮೂರು ವರ್ಷಗಳು ಕಳೆದರೂ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ವ್ಯಕ್ತವಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು