Home ರಾಜಕೀಯ ಮಣಿಪುರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: 3 ದಿನಗಳ ಕಾಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ

ಮಣಿಪುರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: 3 ದಿನಗಳ ಕಾಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ

0

ಇಂಫಾಲ: ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ಗುರುವಾರದಿಂದ ಶನಿವಾರದವರೆಗೆ (ಆಗಸ್ಟ್ 20 ರಿಂದ 22) ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, “ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಪಾಲರ ಆದೇಶದ ಮೇರೆಗೆ ಮಾಧ್ಯಮಿಕ ಶಿಕ್ಷಣ ಮಂಡಳಿ, ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿ, ಸಿಬಿಎಸ್‌ಇ (CBSE) ಅಥವಾ ಇತರ ಯಾವುದೇ ಮಂಡಳಿಗಳಿಗೆ ಸಂಯೋಜಿತವಾಗಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಆಗಸ್ಟ್ 20 ರಿಂದ 22 ರವರೆಗೆ ಮುಚ್ಚಲಾಗುತ್ತದೆ.”

ಈ ಆದೇಶವನ್ನು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ತಲುಪಿಸಲು ಎಲ್ಲಾ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಪಟ್ಟ ನಿರ್ದೇಶಕರಿಗೆ ಸೂಚಿಸಲಾಗಿದೆ.

ಮಣಿಪುರದಲ್ಲಿ 48 ಗಂಟೆಗಳ ಬಂದ್:

ಮತ್ತೊಂದೆಡೆ, ರಾಜ್ಯದಲ್ಲಿ ಜನಗಣತಿ ಪ್ರಕ್ರಿಯೆ ಆರಂಭಿಸುವ ಮುನ್ನ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ‘ಕ್ಯಾಂಪೇನ್ ಫಾರ್ ಜಸ್ಟ್ ಆ್ಯಂಡ್ ಫೇರ್ ಡಿಲಿಮಿಟೇಶನ್’ (JAFD) ಕರೆ ನೀಡಿದ್ದ 48 ಗಂಟೆಗಳ ಮುಷ್ಕರದ ಎರಡನೇ ದಿನವಾದ ಬುಧವಾರ ಕಣಿವೆ ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನಾಕಾರರು ಹಲವೆಡೆ ರ್ಯಾಲಿ ನಡೆಸಿ ರಾಜಕೀಯ ನಾಯಕರ ಪ್ರತಿಕೃತಿಗಳನ್ನು ದಹಿಸಿದ್ದಾರೆ.

ಗುರುವಾರದಿಂದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಹಿಷ್ಕರಿಸುವುದಾಗಿ ಜೆಎಎಫ್‌ಡಿ ಘೋಷಿಸಿದೆ. ಪೂರ್ವ ಇಂಫಾಲ ಜಿಲ್ಲೆಯ ಖುರೈ ಲಾಮ್ಲಾಂಗ್‌ನಲ್ಲಿ ಮುಖ್ಯಮಂತ್ರಿ ವೈ. ಖೇಮ್‌ಚಂದ್ ಸಿಂಗ್ ಮತ್ತು ಗೃಹ ಸಚಿವ ಗೋವಿಂದದಾಸ್ ಕೊಂಥೌಜಮ್ ಅವರ ಪ್ರತಿಕೃತಿಗಳನ್ನು ದಹಿಸಲಾಯಿತು. ಪಶ್ಚಿಮ ಇಂಫಾಲ, ಪೂರ್ವ ಇಂಫಾಲ, ಬಿಷ್ಣುಪುರ ಮತ್ತು ಥೌಬಲ್ ಜಿಲ್ಲೆಗಳಲ್ಲಿ ರಸ್ತೆಗಳನ್ನು ತಡೆದು ವಾಹನ ಸಂಚಾರವನ್ನು ನಿರ್ಬಂಧಿಸಲಾಯಿತು. ಬಂದ್‌ನಿಂದಾಗಿ ಥೌಬಲ್ ಜಿಲ್ಲೆಯಲ್ಲಿ ಜನಗಣತಿ ಸಿಬ್ಬಂದಿಗಾಗಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನೂ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You cannot copy content of this page

Exit mobile version