ಚೆನ್ನೈ: ಎಡಪಕ್ಷಗಳು ಮತ್ತು ತಮಿಳುನಾಡು ಕಾಕ್ರೋಚ್ ಜನತಾ ಪಾರ್ಟಿ (ಟಿಎನ್‌ಸಿಜೆಪಿ) ಆಯೋಜಿಸುವ ರಾಜಕೀಯ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಭಾಗವಹಿಸದಂತೆ ತಡೆಯಲು ಅಧಿಕಾರಿಗಳಿಗೆ ನೀಡಿದ್ದ ವಿವಾದಾತ್ಮಕ ಆದೇಶವನ್ನು ತಮಿಳುನಾಡು ಸರ್ಕಾರ ಹಿಂಪಡೆದಿದೆ.
ಆಗಸ್ಟ್ 17 ರಂದು ಕಾಲೇಜು ಶಿಕ್ಷಣ ನಿರ್ದೇಶನಾಲಯವು ಈ ಸಂಬಂಧ ಸುತ್ತೋಲೆ ಹೊರಡಿಸಿತ್ತು. ವಿದ್ಯಾರ್ಥಿಗಳು ಇಂತಹ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದನ್ನು ನಿರುತ್ಸಾಹಗೊಳಿಸಲು ಮತ್ತು ತಡೆಯಲು ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಪೊಲೀಸ್ ಮತ್ತು ಜಿಲ್ಲಾಡಳಿತಗಳು “ಸೂಕ್ತ ಮತ್ತು ಸಂಘಟಿತ ಕ್ರಮ” ಕೈಗೊಳ್ಳುವಂತೆ ಅದರಲ್ಲಿ ಸೂಚಿಸಲಾಗಿತ್ತು.ಆದರೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ಮತ್ತು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಈ ನಿರ್ದೇಶನವನ್ನು ವಾಪಸ್ ಪಡೆಯಲಾಗಿದೆ.
‘ಅಸಂವಿಧಾನಿಕ’ ಎಂದಿದ್ದ ಸಂಘಟನೆಗಳು:
ಈ ಸುತ್ತೋಲೆಯಲ್ಲಿ ಎಡಪಕ್ಷಗಳು ಮತ್ತು ಟಿಎನ್‌ಸಿಜೆಪಿ ಆಯೋಜಿಸುವ ಪ್ರತಿಭಟನೆಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿತ್ತು ಹಾಗೂ ಇಂತಹ ರಾಜಕೀಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರ ಭಾಗವಹಿಸುವಿಕೆಯ ಮೇಲೆ ನಿಗಾ ಇಡುವಂತೆ ತಿಳಿಸಲಾಗಿತ್ತು. ಸರ್ಕಾರದ ಈ ನಿರ್ಧಾರವನ್ನು ಟಿಎನ್‌ಸಿಜೆಪಿ ವಕ್ತಾರ ಸೌರವ್ ದಾಸ್ “ಅಸಂವಿಧಾನಿಕ” ಮತ್ತು “ಅತಾರ್ಕಿಕ” ಎಂದು ಕರೆದಿದ್ದರು.
ಮತ್ತೊಂದೆಡೆ ಬಿಜೆಪಿ ನಾಯಕ ವಿನೋಜ್ ಪಿ. ಸೆಲ್ವಂ ಈ ಆದೇಶವನ್ನು ಸಮರ್ಥಿಸಿಕೊಂಡಿದ್ದು, ಎಡಪಕ್ಷಗಳು ಮತ್ತು ಟಿಎನ್‌ಸಿಜೆಪಿಯ ತಮಿಳುನಾಡು ಘಟಕವನ್ನು “ಗೊಂದಲ ಮೂಡಿಸುವ ಶಕ್ತಿಗಳು” ಎಂದು ಕರೆದು, ಆ ನಾಯಕರು ವಿದ್ಯಾರ್ಥಿಗಳನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಆದರೆ ವ್ಯಾಪಕ ವಿರೋಧದ ನಡುವೆ, ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕಿ ಸಿಂಥಿಯಾ ಸೆಲ್ವಿ ಪಿ. ಅವರು ಈ ಹಿಂದಿನ ಪತ್ರವನ್ನು ಅಧಿಕೃತವಾಗಿ ಹಿಂಪಡೆದಿದ್ದು, “ಮೇಲೆ ಉಲ್ಲೇಖಿಸಲಾದ ಕಚೇರಿ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ” ಎಂದು ಹೊಸ ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರದ ಕ್ರಮವನ್ನು ಸ್ವಾಗತಿಸಿದ ವಿದ್ಯಾರ್ಥಿ ಸಂಘಟನೆ:
ಚೆನ್ನೈನ ಕಾಲೇಜು ಶಿಕ್ಷಣ ನಿರ್ದೇಶನಾಲಯದ ಮುಂದೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ), ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದೆ.ವಿದ್ಯಾರ್ಥಿಗಳು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಮತ್ತು ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಅವರ ಪ್ರಜಾಸತ್ತಾತ್ಮಕ ಹಕ್ಕು ಎಂದು ಎಸ್‌ಎಫ್‌ಐ ಹೇಳಿದೆ.
“ವಿದ್ಯಾರ್ಥಿಗಳು ಸರ್ಕಾರದ ಕಣ್ಗಾವಲಿನಲ್ಲಿ ಇರಬೇಕಾದ ವಸ್ತುವಲ್ಲ; ಅವರು ಪ್ರಜಾಪ್ರಭುತ್ವದ ಸಕ್ರಿಯ ನಾಗರಿಕರು” ಎಂದು ಸಂಘಟನೆ ಪ್ರತಿಪಾದಿಸಿದೆ. ಆದಾಗ್ಯೂ, ಮೂಲ ಆದೇಶವನ್ನು ಹೊರಡಿಸಲು ಕಾರಣವೇನು ಮತ್ತು ಅದನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದವರು ಯಾರು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.ವಿದ್ಯಾರ್ಥಿಗಳ ರಾಜಕೀಯ ಪಾಲ್ಗೊಳ್ಳುವಿಕೆಯ ಮೇಲೆ ಕಣ್ಣಿಡಲು ಶಿಕ್ಷಣ ಇಲಾಖೆ, ಪೊಲೀಸ್ ಮತ್ತು ಜಿಲ್ಲಾಡಳಿತವನ್ನು ಏಕೆ ಬಳಸಿಕೊಳ್ಳಲಾಯಿತು ಎಂದೂ ಪ್ರಶ್ನಿಸಿದೆ.
ನೀಟ್ (NEET) ಪ್ರತಿಭಟನೆಗಳ ಹಿನ್ನೆಲೆ:
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ಕುರಿತ ಕಳವಳಗಳ ನಡುವೆ ತಮಿಳುನಾಡಿನಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ವಿವಾದ ಎದ್ದಿತ್ತು.ದೇಶದ ಇತರ ಭಾಗಗಳಲ್ಲೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳು ನಡೆದಿವೆ.
ಕಾನೂನು ಉಲ್ಲಂಘಿಸುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದಾದರೂ, ಶಾಂತಿಯುತ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನೇ ಅಪರಾಧವೆಂದು ಪರಿಗಣಿಸಬಾರದು ಎಂದು ಎಸ್‌ಎಫ್‌ಐ ಒತ್ತಿಹೇಳಿದೆ. “ರಾಜಕೀಯ ಅಭಿಪ್ರಾಯಗಳನ್ನು ಹೊಂದಿದ್ದಕ್ಕಾಗಿ ಅಥವಾ ಶಾಂತಿಯುತ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಬೆದರಿಸಬಾರದು” ಎಂದಿದೆ.
ಆದೇಶ ಹಿಂಪಡೆದಿರುವುದನ್ನು ಎಸ್‌ಎಫ್‌ಐ “ಪ್ರಜಾಪ್ರಭುತ್ವದ ಜಯ” ಎಂದು ಕರೆದಿದ್ದು, ತಮಿಳುನಾಡು ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಮೂಲ ನಿರ್ದೇಶನವನ್ನು ಹೊರಡಿಸಲು ಕಾರಣವೇನೆಂದು ಇನ್ನೂ ಸಾರ್ವಜನಿಕವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.
