ದೆಹಲಿ: ತಮ್ಮ ಉತ್ತರಾಖಂಡ ಭೇಟಿಯ ನಂತರ ನಡೆದ ‘ಶುದ್ಧೀಕರಣ’ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಹಲವು ನಾಯಕರು ಬಹಿರಂಗವಾಗಿ ಬೆಂಬಲಕ್ಕೆ ನಿಲ್ಲದಿರುವುದು ಹಾಗೂ ಆ ಘಟನೆಯನ್ನು ಖಂಡಿಸದೇ ಇರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ತಮ್ಮ ವೈಯಕ್ತಿಕ ನೋವನ್ನು ಹಂಚಿಕೊಂಡ ಖರ್ಗೆ, ತಾವು ದಲಿತ ಎಂಬ ಕಾರಣಕ್ಕೆ ಎಂದಿಗೂ ಯಾರ ರಕ್ಷಣೆಯನ್ನೂ ಕೇಳಿಲ್ಲ; ಆದರೆ ಹಲ್ದ್ವಾನಿಯಲ್ಲಿ ನಡೆದ ಘಟನೆಯಿಂದ ತಮಗೆ ತೀವ್ರ ಅವಮಾನವಾಗಿದೆ ಎಂದು ಹೇಳಿದರು. ಮಾಧ್ಯಮಗಳಲ್ಲಿ ಸದಾ ಕಾಣಿಸಿಕೊಳ್ಳುವ ಪಕ್ಷದ ಹಲವು ಪ್ರಮುಖ ಮುಖಂಡರು ಈ ವಿಚಾರದಲ್ಲಿ ತುಟಿ ಬಿಚ್ಚದಿರುವುದು ತಮಗೆ ನೋವು ತಂದಿದೆ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಅಸಮಾಧಾನ ಹೊರಹಾಕಿದರು.
ಕೆಲವು ದಿನಗಳ ಹಿಂದೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಖರ್ಗೆ ಭಾಗವಹಿಸಿದ್ದ ಸಮಾವೇಶ ಮುಗಿದ ಬೆನ್ನಲ್ಲೇ ಅಲ್ಲಿ ‘ಶುದ್ಧೀಕರಣ ಹವನ’ ನಡೆಸಲಾಗಿತ್ತು. ಈ ಘಟನೆಯ ಹಿಂದೆ ಬಿಜೆಪಿ ನಂಟಿದೆ ಹಾಗೂ ಇದು ಜಾತಿವಾದಿ ಮನಸ್ಥಿತಿಯ ಪ್ರತೀಕ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿತ್ತು. ಈ ವಿಚಾರವನ್ನು ಖರ್ಗೆ ಅವರು ಈ ಹಿಂದೆ ರಾಜ್ಯಸಭೆಯಲ್ಲೂ ಪ್ರಸ್ತಾಪಿಸಿದ್ದರು.
ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹಲ್ದ್ವಾನಿ ಘಟನೆಯು ಸ್ವೀಕಾರಾರ್ಹವಲ್ಲದ್ದು ಮತ್ತು ಖಂಡನೀಯವಾಗಿದ್ದು, ಇದು ಬಿಜೆಪಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಪಕ್ಷವು ಈ ಮೊದಲೇ ಖಂಡಿಸಿದೆ ಎಂದು ತಿಳಿಸಿದರು.
ಇದೇ ಸಭೆಯಲ್ಲಿ ಎನ್‌ಎಸ್‌ಯುಐ ಉಸ್ತುವಾರಿ ಕನ್ಹಯ್ಯಾ ಕುಮಾರ್ ಅವರು ವಿದ್ಯಾರ್ಥಿ ಸಂಘಟನೆಗಳು ಹಾಗೂ ಯುವ ಆಂದೋಲನಗಳ ರಾಜಕೀಯ ಸ್ಥಳವನ್ನು ಇತರ ಪಕ್ಷಗಳಿಗೆ ಬಿಟ್ಟುಕೊಡಬಾರದು ಎಂದು ಪ್ರತಿಪಾದಿಸಿದರು. ಮತ್ತೊಂದೆಡೆ, ರಾಹುಲ್ ಗಾಂಧಿ ಅವರು ವಿದ್ಯಾರ್ಥಿ ಮತ್ತು ಯುವ ಪ್ರತಿಭಟನೆಗಳ ಮಹತ್ವವನ್ನು ಒತ್ತಿಹೇಳುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಈಗ ಭಾರತದ ಗತಕಾಲವಾಗಿದೆ ಎಂದು ಅಭಿಪ್ರಾಯಪಟ್ಟರು.
