Home ದೇಶ ಕೀರ್ತಿ ಆಜಾದ್ ವಿರುದ್ಧದ ಡೀಪ್‌ಫೇಕ್ ಆಡಿಯೋ/ವಿಡಿಯೋ ವಿವಾದ: ಪ್ರಮುಖ ಸುದ್ದಿ ವಾಹಿನಿಗಳಿಗೆ ಲೀಗಲ್ ನೋಟಿಸ್

ಕೀರ್ತಿ ಆಜಾದ್ ವಿರುದ್ಧದ ಡೀಪ್‌ಫೇಕ್ ಆಡಿಯೋ/ವಿಡಿಯೋ ವಿವಾದ: ಪ್ರಮುಖ ಸುದ್ದಿ ವಾಹಿನಿಗಳಿಗೆ ಲೀಗಲ್ ನೋಟಿಸ್

0

ದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಹಾಗೂ ಮಾಜಿ ಸಂಸದ ಕೀರ್ತಿ ಆಜಾದ್ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಲಾಗುತ್ತಿದೆ ಎನ್ನಲಾದ ಕೃತಕ ಬುದ್ಧಿಮತ್ತೆ (AI) ಆಧಾರಿತ ಡೀಪ್‌ಫೇಕ್ ಆಡಿಯೋ ಮತ್ತು ವಿಡಿಯೋಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ಸುದ್ದಿ ವಾಹಿನಿಗಳಿಗೆ ಸುಪ್ರೀಂ ಕೋರ್ಟ್ ವಕೀಲರ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.

ಕೀರ್ತಿ ಆಜಾದ್ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಅವ್ನೀಶ್ ಮೈಥಾನಿ ಅವರು ಎಬಿಪಿ ಆನಂದ, ನ್ಯೂಸ್ 18 ಬಾಂಗ್ಲಾ, ಆರ್ ಬಾಂಗ್ಲಾ, ಜೀ 24 ಘಂಟಾ, ಸಿಎನ್‌ಎನ್ ನ್ಯೂಸ್ ಹಾಗೂ ಟಿವಿ9 ಬಾಂಗ್ಲಾ ವಾಹಿನಿಗಳ ಮುಖ್ಯಸ್ಥರು ಮತ್ತು ಬ್ಯೂರೋ ಮುಖ್ಯಸ್ಥರಿಗೆ ಈ ನೋಟಿಸ್ ರವಾನಿಸಿದ್ದಾರೆ.

2026ರ ಆಗಸ್ಟ್ 19 ರಂದು ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಕೀರ್ತಿ ಆಜಾದ್ ಅವರ ಧ್ವನಿಯನ್ನು ದುರುದ್ದೇಶಪೂರ್ವಕವಾಗಿ ಮಾರ್ಫ್ ಮಾಡಿ ಸುಳ್ಳು ಸಂಭಾಷಣೆಯ ತುಣುಕುಗಳನ್ನು ರಚಿಸಲಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದು ಆಜಾದ್ ಅವರ ಘನತೆ, ನಡತೆ ಹಾಗೂ ಸಾರ್ವಜನಿಕ ಇಮೇಜ್‌ಗೆ ಧಕ್ಕೆ ತರುವ ದುರುದ್ದೇಶದಿಂದ ಕೂಡಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 356ರ ಅಡಿಯಲ್ಲಿ ಮಾನನಷ್ಟ ಅಪರಾಧದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಲಾಗಿದೆ.

ಸುಳ್ಳು ಮತ್ತು ತಿರುಚಿದ ಈ ವಿಡಿಯೋ/ಆಡಿಯೋಗಳನ್ನು ತಮ್ಮ ಎಲ್ಲಾ ಪ್ಲಾಟ್‌ಫಾರ್ಮ್‌ಗಳು, ಸಾಮಾಜಿಕ ಜಾಲತಾಣದ ಖಾತೆಗಳು ಹಾಗೂ ಚಾನೆಲ್‌ಗಳಿಂದ ತಕ್ಷಣವೇ ತೆಗೆದುಹಾಕಬೇಕು (ಟೇಕ್‌ಡೌನ್), ಮತ್ತಷ್ಟು ಹರಡುವುದನ್ನು ನಿಲ್ಲಿಸಬೇಕು ಮತ್ತು ಬೇಷರತ್ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಸುದ್ದಿ ವಾಹಿನಿಗಳಿಗೆ ಸೂಚಿಸಲಾಗಿದೆ.

ನೋಟಿಸ್ ತಲುಪಿದ 48 ಗಂಟೆಗಳ ಒಳಗಾಗಿ ಈ ಕುರಿತು ಲಿಖಿತ ಸ್ಪಷ್ಟನೆ ನೀಡಬೇಕು. ಇಲ್ಲವಾದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

You cannot copy content of this page

Exit mobile version