ಮಣಿಪುರ: ಏಪ್ರಿಲ್ ತಿಂಗಳ ಐದು ಹತ್ಯೆಗಳ ಪ್ರಕರಣದಲ್ಲಿ ಬಂಧನ ವಿಳಂಬ, ರಾಜ್ಯದಾದ್ಯಂತ ಭುಗಿಲೆದ್ದ ಪ್ರತಿಭಟನೆ

ಇಂಫಾಲ್: ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಶಾಂತಿಯ ವಾತಾವರಣ ಮರೀಚಿಕೆಯಾಗಿದೆ. ಏಪ್ರಿಲ್ 7ರಿಂದ ಈವರೆಗೆ ನಡೆದಿರುವ ಐದು ಪ್ರತ್ಯೇಕ ಹತ್ಯೆಗಳ ಪ್ರಕರಣಗಳಲ್ಲಿ ಯಾರನ್ನೂ ಬಂಧಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೃತರಲ್ಲಿ ಇಬ್ಬರು ಮಕ್ಕಳು ಮತ್ತು ಒಬ್ಬ ಬಿಎಸ್‌ಎಫ್ ಯೋಧ ಸೇರಿದ್ದಾರೆ. ಈ ಘಟನೆಗಳನ್ನು ವಿರೋಧಿಸಿ ಸ್ಥಳೀಯ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಮತ್ತು ರಸ್ತೆ ತಡೆಗಳಿಂದಾಗಿ ತನಿಖಾ ತಂಡಗಳ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ ಎಂದು ವರದಿಯಾಗಿದೆ.

ಭಾನುವಾರ ಸಂಜೆ ಮಣಿಪುರದ ಕಣಿವೆ ಜಿಲ್ಲೆಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿದ್ದು, ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು. ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಕಾಕ್ಚಿಂಗ್ ಜಿಲ್ಲೆಗಳಲ್ಲಿ ರಾತ್ರಿ ವೇಳೆ ರ್ಯಾಲಿಗಳನ್ನು ನಡೆಸಲಾಯಿತು. ಉರಿಪೋಕ್, ಖಬಾಮ್ ಲಂಖೈ ಮತ್ತು ಕೋಯರೆಂಗೈ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಆಲ್ ಮಣಿಪುರ ಯುನೈಟೆಡ್ ಕ್ಲಬ್ಸ್ ಆರ್ಗನೈಸೇಶನ್ (AMUCO) ಮತ್ತು COCOMI ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗಳು, ಬೆಟ್ಟದ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಕುಕಿ ಉಗ್ರರ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳಬೇಕು ಮತ್ತು ಏಪ್ರಿಲ್ 7ರಂದು ಬಿಷ್ಣುಪುರದ ಟ್ರೋಂಗ್‌ಲಾಬಿಯಲ್ಲಿ ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಬಾಂಬ್ ದಾಳಿಯ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿವೆ. ಬಿಷ್ಣುಪುರ–ಚುರಾಚಂದ್‌ಪುರ ಹೆದ್ದಾರಿಯು ಸುಮಾರು 12 ದಿನಗಳಿಂದ ಬಂದ್ ಆಗಿರುವುದರಿಂದ ಎನ್‌ಐಎ (NIA) ತನಿಖೆಗೆ ಹಿನ್ನಡೆಯಾಗಿದೆ. ಘಟನಾ ಸ್ಥಳದ ಸಮೀಪದ ಸಿಸಿಟಿವಿ ದೃಶ್ಯಾವಳಿಗಳೂ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.

ಏಪ್ರಿಲ್ 18ರಂದು ಉಕ್ರುಲ್‌ನಲ್ಲಿ ನಿವೃತ್ತ ಸೈನಿಕ ಸೇರಿದಂತೆ ಇಬ್ಬರು ತಂಗಖುಲ್ ನಾಗಾ ವ್ಯಕ್ತಿಗಳನ್ನು ಉಗ್ರರು ಹತ್ಯೆಗೈದಿದ್ದರು. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ, ಉಕ್ರುಲ್ ಜಿಲ್ಲೆಯಲ್ಲಿ 21 ಬಂಕರ್‌ಗಳನ್ನು ನಾಶಪಡಿಸಿ, ತೆಂಗ್ನೌಪಾಲ್ ಜಿಲ್ಲೆಯಲ್ಲಿ 13 ಐಇಡಿಗಳನ್ನು (IED) ವಶಪಡಿಸಿಕೊಂಡಿವೆ.

ಪಶ್ಚಿಮ ಬಂಗಾಳದ ಚುನಾವಣೆಗಳ ನಂತರ ರಾಜ್ಯಕ್ಕೆ ಹೆಚ್ಚಿನ ಭದ್ರತಾ ಪಡೆಗಳು ಆಗಮಿಸಲಿವೆ ಎಂದು ಮಣಿಪುರ ಗೃಹ ಸಚಿವ ಗೋವಿಂದಾಸ್ ಕೊಂತೌಜಮ್ ಭಾನುವಾರ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 184 ಕಂಪನಿಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ನಿಯೋಜನೆಯಲ್ಲಿವೆ. “ಚುನಾವಣಾ ಕಾರ್ಯಗಳಿಗಾಗಿ ಹಿಂಪಡೆಯಲಾಗಿದ್ದ ಪಡೆಗಳು ಏಪ್ರಿಲ್ 23 ಮತ್ತು 29ರ ನಂತರ ರಾಜ್ಯಕ್ಕೆ ಮರಳಲಿವೆ. ಜೊತೆಗೆ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪರಿಣತಿ ಹೊಂದಿರುವ ಹೆಚ್ಚುವರಿ ಪಡೆಗಳನ್ನೂ ಕಳುಹಿಸಲಾಗುವುದು,” ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು