Wednesday, December 18, 2024

ಸತ್ಯ | ನ್ಯಾಯ |ಧರ್ಮ

ಮಣಿಪುರ ಹಿಂಸಾಚಾರ: ಒಟ್ಟು 3,023 ಪ್ರಕರಣಗಳಲ್ಲಿ ಕೇವಲ 6% ಪ್ರಕರಣಗಳಲ್ಲಿ ಮಾತ್ರ ಚಾರ್ಜ್‌ಶೀಟ್‌ ಸಲ್ಲಿಸಿದ ಎಸ್‌ಐಟಿಗಳು

ಬೆಂಗಳೂರು: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ 42 ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ರಚಿಸಿತ್ತು. 42 ಎಸ್‌ಐಟಿಗಳು ದಾಖಲಾಗಿರುವ ಒಟ್ಟು 3,023 ಪ್ರಕರಣಗಳಲ್ಲಿ ಕೇವಲ 6 ಪ್ರತಿಶತದಷ್ಟು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿವೆ.

ಅತ್ಯಾಚಾರ, ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು, ಬೆಂಕಿ ಹಚ್ಚುವಿಕೆ, ಲೂಟಿ, ಕೊಲೆಯಂತಹ ಘೋರ ಅಪರಾಧಗಳಿಗೆ ಸಂಬಂಧಿಸಿದ ಚಾರ್ಜ್‌ಶೀಟ್‌ಗಳನ್ನು ಕೇವಲ 192 ಪ್ರಕರಣಗಳಲ್ಲಿ ಮಾತ್ರ ದಾಖಲಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ .

ದೇಶಾದ್ಯಂತ ಪೊಲೀಸ್ ಅಧಿಕಾರಿಗಳನ್ನು ಸೇರಿಸಿ ಆಗಸ್ಟ್ 2023 ರಲ್ಲಿ ರಚಿಸಲಾದ ಎಸ್‌ಐಟಿಗಳು ನವೆಂಬರ್ 20 ರವರೆಗೆ 384 ಜನರನ್ನು ಬಂಧಿಸಿ, 742 ಶಂಕಿತರನ್ನು ಗುರುತಿಸಿ, 11,901 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದವು.

ಇದುವರೆಗೆ 574 ಆರೋಪಿಗಳ ವಿರುದ್ಧ ಆರೋಪ ಮಾಡಲಾಗಿದೆ. ಎಸ್‌ಐಟಿಗಳು 13,464 ಮದ್ದುಗುಂಡುಗಳ ಜೊತೆಗೆ ರಾಜ್ಯದ ಪೊಲೀಸ್ ಶಸ್ತ್ರಾಸ್ತ್ರಗಳಿಂದ ಲೂಟಿ ಮಾಡಿದ್ದ 501 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಿ, SITಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗಿದೆ – ಕೊಲೆ ಮತ್ತು ಘೋರ ಅಪರಾಧದ ಪ್ರಕರಣಗಳಿಗೆ ಒಂದು ಗುಂಪು; ಮಹಿಳೆಯರ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಮತ್ತೊಂದು ಗುಂಪು; ಮತ್ತು ಬೆಂಕಿ ಹಚ್ಚುವಿಕೆ, ಲೂಟಿ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ನಾಲ್ಕು ಗುಂಪುಗಳು.

42 ಎಸ್‌ಐಟಿಗಳು 126 ಕೊಲೆ ಪ್ರಕರಣಗಳು, ಒಂಬತ್ತು ಮಹಿಳೆಯರ ಮೇಲಿನ ಲೈಂಗಿಕ ಅಪರಾಧ ಪ್ರಕರಣಗಳು ಮತ್ತು 2,888 ಲೂಟಿ, ಬೆಂಕಿ ಹಚ್ಚುವಿಕೆ ಮತ್ತು ಇತರ ಆಸ್ತಿ ಅಪರಾಧಗಳ ಬಗ್ಗೆ ತನಿಖೆ ನಡೆಸುತ್ತಿವೆ.

ಮೇ 2023 ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವು ಪ್ರಾರಂಭವಾಯಿತು. ಈಗಲೂ ಈ ಹಿಂಸಾಚಾರ ಮುಂದುವರಿದಿದೆ. ನೂರಾರು ಜನರ ಹತ್ಯೆಯಾಗಿದೆ, ಹತ್ತಾರು ಸಾವಿರ ಜನರು ಮನೆಮಠ ಕಳೆದುಕೊಂಡಿದ್ದಾರೆ, ಜನರು ಜನಾಂಗೀಯವಾಗಿ ವಿಭಜಿಸಲ್ಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page