Home ದೇಶ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿದ ವಿಡಿಯೋ ವೈರಲ್:‌ ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿದ ವಿಡಿಯೋ ವೈರಲ್:‌ ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

0

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಗಳು ಬರತೊಡಗಿವೆ, ಮೇ 4ರಂದು ಗುಂಪು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಅವರಲ್ಲಿ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ ಎಂದು ಆರೋಪಿಸಿಲಾಗಿದೆ.

ಇಂಫಾಲ್: ಮಣಿಪುರದ ಕುಕಿ-ಜೊಮಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ವೀಡಿಯೊ ಬುಧವಾರ ವೈರಲ್ ಆಗಿದ್ದು, ಶಾಂತಿ ಕಾಪಾಡಲು ಕೇಂದ್ರ ಪಡೆಗಳು ಮತ್ತು ಸೇನೆಯನ್ನು ನಿಯೋಜಿಸಲಾಗಿದೆ.

ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಾಪಕವಾಗಿ ಖಂಡನೆಗಳು ಹರಿದು ಬರುತ್ತಿವೆ. ಮಣಿಪುರದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್) ಈ ಘಟನೆ ಮೇ 4ರಂದು ನಡೆದಿದೆ ಎಂದು ಆರೋಪಿಸಿದೆ. ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ನಂತರ ಭತ್ತದ ಗದ್ದೆಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಐಟಿಎಲ್ಎಫ್ ಆರೋಪಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಐಟಿಎಲ್ಎಫ್ ಒತ್ತಾಯಿಸಿದೆ.

ಈ ವೀಡಿಯೊಗೆ ರಾಜಕೀಯ ವಲಯದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯವರು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡುವಂತೆ ಒತ್ತಾಯಿಸಲಾಯಿತು.

ಈ ಘಟನೆ ಮೇ 4ರಂದು ತೌಬಾಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಮಣಿಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಮೇ 18ರಂದು ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಶೂನ್ಯ ಎಫ್ ಐಆರ್ ದಾಖಲಿಸಲಾಗಿದೆ. ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಆರೋಪದ ಮೇಲೆ ಅಪರಿಚಿತ ಆರೋಪಿಗಳ ವಿರುದ್ಧ ಎರಡು ತಿಂಗಳ ಹಿಂದೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಬುಧವಾರ ಸಂಜೆ ಪತ್ರಿಕಾ ಪ್ರಕಟಣೆಯಲ್ಲಿ ಮಣಿಪುರ ಪೊಲೀಸ್ ವರಿಷ್ಠಾಧಿಕಾರಿ ಕೆ. ಮೇಘಚಂದ್ರ ಸಿಂಗ್, ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸಲು ರಾಜ್ಯ ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ವೀಡಿಯೊದಲ್ಲಿ, ಇಬ್ಬರು ಮಹಿಳೆಯರನ್ನು (ಪೊಲೀಸ್ ದಾಖಲೆಗಳ ಪ್ರಕಾರ ಕ್ರಮವಾಗಿ 40 ಮತ್ತು 20 ವರ್ಷ ವಯಸ್ಸಿನವರು) ಪುರುಷರ ಗುಂಪು ರಸ್ತೆಯಲ್ಲಿ ಮತ್ತು ಗದ್ದೆಯ ಕಡೆಗೆ ನಗ್ನವಾಗಿ ಕರೆದೊಯ್ಯುವುದನ್ನು ಕಾಣಬಹುದು. ಇದರಲ್ಲಿ, ಕೆಲವರು ಮಹಿಳೆಯರನ್ನು ಹೊಲದ ಕಡೆಗೆ ಎಳೆದುಕೊಂಡು ಹೋಗಿ ಬಲವಂತವಾಗಿ ಕಿರುಕುಳ ನೀಡುವುದನ್ನು ಕಾಣಬಹುದು. ಎಫ್ಐಆರ್ ಪ್ರಕಾರ, ಇಬ್ಬರು ಮಹಿಳೆಯರು ಕುಕಿ-ಜೊಮಿ ಪ್ರಾಬಲ್ಯದ ಪರ್ವತ ಜಿಲ್ಲೆಯಾದ ಕಂಗ್‌ಪೊಕ್ಸಿಗೆ ಸೇರಿದವರು.

ಘಟನೆಯ ದಿನದಂದು ಏನಾಯಿತೆನ್ನುವುದನ್ನು ಸಂತ್ರಸ್ತರು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ: ಈ ಘಟನೆಯು ಮೈತೇಯಿ ಪ್ರಾಬಲ್ಯದ ಕಣಿವೆ ಜಿಲ್ಲೆ ತೌಬಲ್‌ನಲ್ಲಿ ನಡೆದಿದೆ, ನಂತರ ಸಂತ್ರಸ್ತರು ಕಂಗ್‌ಪೊಕ್ಸಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಲ್ಲಿ ಶೂನ್ಯ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ವಿಷಯವನ್ನು ತೌಬಲ್‌ನಲ್ಲಿರುವ ಸಂಬಂಧಪಟ್ಟ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಅವರ ದೂರಿನ ಪ್ರಕಾರ, 50 ವರ್ಷದ ಮತ್ತೊಬ್ಬ ಮಹಿಳೆಗೆ ಜನಸಮೂಹವು ಬಲವಂತವಾಗಿ ಬಟ್ಟೆ ಬಿಚ್ಚಿಸಿತ್ತು. ಅಪ್ರಾಪ್ತ ಮಹಿಳೆಯ ಮೇಲೆ ಹಾಡಹಗಲೇ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

800ರಿಂದ 1000 ಮಂದಿಯಿಂದ ಊರಿಗೆ ದಾಳಿ: ಮೇ 3ರಂದು ಹಿಂಸಾಚಾರ ಭುಗಿಲೆದ್ದ ಬಳಿಕ 800ರಿಂದ 1000 ಜನರು ಮಾರಕಾಯುಧಗಳಿಂದ (ಎಕೆ ರೈಫಲ್ಸ್, ಎಸ್‌ಎಲ್‌ಆರ್, ಐಎನ್‌ಎಸ್‌ಎಎಸ್, 303 ರೈಫಲ್ಸ್) ಊರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಸಂತ್ರಸ್ತರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅವರು ಲೂಟಿ ಮಾಡಲು ಮತ್ತು ಬೆಂಕಿ ಹಚ್ಚಲು ಪ್ರಾರಂಭಿಸಿದರು. ದಾಳಿಯ ನಂತರ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಮತ್ತು ಹದಿಹರೆಯದ ಹುಡುಗ ಸೇರಿದಂತೆ ಅವರ ಕುಟುಂಬದ ಐದು ಸದಸ್ಯರು ಕಾಡಿಗೆ ಓಡಿಹೋದರು.

ನಂತರ ಮೇ 4ರಂದು, ಪೊಲೀಸರು ಅವರನ್ನು ರಕ್ಷಿಸಿ ಗ್ರಾಮಕ್ಕೆ ಕರೆತರುತ್ತಿದ್ದರು. ಅದೇ ಸಮಯದಲ್ಲಿ ಜನಸಮೂಹ ಅವರನ್ನು ದಾರಿಯಲ್ಲಿ ನಿಲ್ಲಿಸಿದೆ. ಪೊಲೀಸ್ ಠಾಣೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಜನಸಂದಣಿ ಪೊಲೀಸರನ್ನು ಓಡಿಸಿತು. ಮೊದಲು ಅವರು 20 ವರ್ಷದ ಯುವತಿಯ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಗುಂಪು ಅವರನ್ನು ಹೊಡೆದು ಕೊಂದಿತು. ಇದಾದ ಬಲವಂತವಾಗಿ ಬಳಿಕ ಮಹಿಳೆಯರ ಬಟ್ಟೆಗಳನ್ನು ಬಿಚ್ಚಲಾಯಿತು. ಮಹಿಳೆಯರನ್ನು ಬೆತ್ತಲೆಯಾಗಿ ರಸ್ತೆಯಿಂದ ಎಳೆದೊಯ್ದು ಹೊಲದ ಕಡೆಗೆ ಕರೆದೊಯ್ಯಲಾಯಿತು. 20 ವರ್ಷದ ಕಿರಿಯ ಯುವತಿಯನ್ನು ಎಲ್ಲರ ಮುಂದೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ, ಪ್ರತಿಭಟಿಸಿದ ಹುಡುಗಿಯ ತಮ್ಮನನ್ನು ಸಹ ಕೊಲ್ಲಲಾಯಿತು. ಮಾಧ್ಯಮ ವರದಿಗಳ ಪ್ರಕಾರ, ಮೂವರು ಮಹಿಳೆಯರು ಹತ್ತಿರದ ಗುಡ್ಡಗಾಡು ಜಿಲ್ಲೆ ತೆಂಗ್ನೌಪಾಲ್‌ನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಪ್ರಸ್ತುತ ಪರಿಹಾರ ಶಿಬಿರಗಳಲ್ಲಿದ್ದಾರೆ.

ಚುರಾಚಾಂದ್ಪುರದ ನೋಂದಾಯಿತ ಬುಡಕಟ್ಟುಗಳ ಗುಂಪಾದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು,  ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗವು ಈ ಘಟನೆಯನ್ನು ಅರಿತುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

 ಈ ವಿಡಿಯೋ  ವೈರಲ್ ಆದ ನಂತರ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ  ಮಣಿಪುರದ ಇಬ್ಬರು ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ಕಿರುಕುಳದ ಭಯಾನಕ ವೀಡಿಯೊ ಖಂಡನೀಯ ಮತ್ತು ಸಂಪೂರ್ಣವಾಗಿ ಅಮಾನವೀಯ ಎಂದು ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ನನಗೆ ಮಾಹಿತಿ ನೀಡಿದ್ದಾರೆ. ತನಿಖೆ ಇನ್ನೂ ನಡೆಯುತ್ತಿದೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಯಾವುದೇ ನಿರ್ಲಕ್ಷ್ಯ ಮಾಡುವುದಿಲ್ಲ ಎಂದಿದ್ದಾರೆ.

ಈ ವಿಷಯದ ಕುರಿತು ಪ್ರಧಾನಿ ಮೌನವನ್ನು ಪ್ರಶ್ನಿಸಿದ ವಿಪಕ್ಷ ನಾಯಕರು, ಘಟನೆಯನ್ನು ಅಮಾನವೀಯ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ.

ಪ್ರಧಾನಿಯ ಮೌನ ಮತ್ತು ನಿಷ್ಕ್ರಿಯತೆಯು ಮಣಿಪುರವನ್ನು ಅವ್ಯವಸ್ಥೆಯ ಕೊಂಪೆಯನ್ನಾಗಿಸಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮಣಿಪುರದಲ್ಲಿ ಭಾರತದ ಕಲ್ಪನೆಯ ಮೇಲೆ ದಾಳಿ ನಡೆಯುತ್ತಿರುವಾಗ ಭಾರತ ಸುಮ್ಮನಿರುವುದಿಲ್ಲ. ನಾವು ಮಣಿಪುರದ ಜನರೊಂದಿಗೆ ನಿಲ್ಲುತ್ತೇವೆ. ಶಾಂತಿಯೊಂದೇ ಮುಂದಿರುವ ದಾರಿ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪ್ರಧಾನಿಯನ್ನು ಗುರಿಯಾಗಿಸಿಕೊಂಡು, ಮಣಿಪುರದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಗಳು ಹೃದಯ ವಿದ್ರಾವಕವಾಗಿವೆ ಎಂದು ಹೇಳಿದ್ದಾರೆ. “ಈ ಭಯಾನಕ ಘಟನೆಯ ಬಗ್ಗೆ ಎಷ್ಟೇ ಖಂಡನೆ ಮಾಡಿದರೂ ಹೆಚ್ಚಾಗುವುದಿಲ್ಲ. ಮಹಿಳೆಯರು ಮತ್ತು ಮಕ್ಕಳು ಸಮಾಜದಲ್ಲಿ ಹಿಂಸಾಚಾರದಿಂದ ಬಳಲುತ್ತಿದ್ದಾರೆ. ಮಣಿಪುರದಲ್ಲಿ ಶಾಂತಿ ಪ್ರಯತ್ನಗಳನ್ನು ಮುನ್ನಡೆಸಲು ನಾವೆಲ್ಲರೂ ಒಂದಾಗಿ ನಿಲ್ಲುತ್ತೇವೆ. ಹಿಂಸಾಚಾರವನ್ನು ಖಂಡಿಸಲೇಬೇಕು. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಏಕೆ ಕಣ್ಣುಮುಚ್ಚಿ ಕುಳಿತಿದ್ದಾರೆ? ಅಂತಹ ಚಿತ್ರಗಳು ಮತ್ತು ಹಿಂಸಾತ್ಮಕ ಘಟನೆಗಳು ಅವರನ್ನು ಕಾಡುವುದಿಲ್ಲವೇ?” ಎಂದು ಕೇಳಿದ್ದಾರೆ.

ಈ ಘಟನೆಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷ ಹೇಳಿಕೆ ಬಿಡುಗಡೆ ಮಾಡಿದೆ. “ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿಷ್ಕ್ರಿಯತೆಯು ದೇಶದ ಎಲ್ಲಾ ನಾಗರಿಕರ ಪಾಲಿಗೆ ನೋವಿನ ಸಂಗತಿಯಾಗಿದೆ. ಮಣಿಪುರದ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ನಾವು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನು ವಿನಂತಿಸುತ್ತೇವೆ. ಸಮಸ್ಯೆಯತ್ತ ಕಣ್ಣು ಮುಚ್ಚಿ ಕೂರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಆಮ್ ಆದ್ಮಿ ಪಕ್ಷವು ಕೇಂದ್ರ ಸರ್ಕಾರಕ್ಕೆ ಸಾಧ್ಯವಿರುವ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಿದ್ಧವಾಗಿದೆ.” ಎಂದು ಅದು ಹೇಳಿದೆ.

You cannot copy content of this page

Exit mobile version