Wednesday, June 19, 2024

ಸತ್ಯ | ನ್ಯಾಯ |ಧರ್ಮ

ಸಾರಾಯಿ ವಿರೋಧಿ ಹೋರಾಟ ಕಟ್ಟಿದ ಮಂಜಮ್ಮ ಗೋಗಡಿಗೆ

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ 10 ವರ್ಷಗಳಾದ ನೆನಪಿಗೆ  ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ (ಕೊಂಡಜ್ಜಿ ಬಸಪ್ಪ) ಸಭಾಂಗಣದಲ್ಲಿ 2023, ಜನವರಿ 8ನೇ ತಾರೀಕು ಭಾನುವಾರ `ಒಕ್ಕೂಟ-10: ಒಗ್ಗೂಡುವ ಹಬ್ಬ’ ಕಾರ್ಯಕ್ರಮವನ್ನು ಒಕ್ಕೂಟವು ಆಯೋಜಿಸಿದೆ. ಆ ಸಂದರ್ಭದಲ್ಲಿ ಒಕ್ಕೂಟವು ಪಯಣ ನಡೆಸಿದ 11 ಜಿಲ್ಲೆಗಳಿಂದ ಒಬ್ಬೊಬ್ಬ ಹಿರಿಯ ಸಂಗಾತಿಯ ವ್ಯಕ್ತಿಗತ-ಸಂಘಟಿತ ಹೋರಾಟದ ಸ್ಫೂರ್ತಿಯನ್ನು ತೆರೆದಿಡುತ್ತಾ, `ನಮ್ಮ ಅಕ್ಕ, ನಮ್ಮ ಹಿರಿಮೆ’ ಎಂದು ಅವರನ್ನು ಗೌರವಿಸಲಿದೆ. ಅಕ್ಕಂದಿರ ಬದುಕು-ಸಾಧನೆಯ ಕಿರು ಚಿತ್ರಗಳನ್ನು ಪೀಪಲ್‌ ಮೀಡಿಯಾವು ಪ್ರಕಟಿಸುತ್ತಿರುವ ಸರಣಿಯಲ್ಲಿ, ತೆರೆಮರೆಯಲ್ಲೇ ಉಳಿದ ಹಳ್ಳಿಮೂಲೆಯ ಸಾಧಕಿಯನ್ನು ಹುಡುಕಿ ಪರಿಚಯಿಸಿದ್ದಾರೆ ಪ್ರಗತಿಪರ ಚಿಂತಕಿ  ಕೃತಿ ಪುರಪ್ಪೇಮನೆ.

ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಹಕ್ರೆ ಸಮೀಪದಲ್ಲಿರುವ ಗೋಗಡಿಗೆ ಎಂಬ ಹಳ್ಳಿಯ ಮಂಜಮ್ಮನವರು ಮದ್ಯವಿರೋಧಿ ಚಳುವಳಿ ನಡೆಸಿದವರು. ಅವರು ಹುಟ್ಟಿದ್ದು ಅಲ್ಲಿಯೇ ಹತ್ತಿರದ ಕಡಕೊಡು ಎಂಬ ಊರಿನಲ್ಲಿ. ಶಾಲೆಗೆ ಹೋಗಿದ್ದು ಬರೀ ನಾಲ್ಕನೇ ತರಗತಿಯ ತನಕ ಮಾತ್ರ. 17ನೇ ವಯಸ್ಸಿನಲ್ಲೇ ಮದುವೆಯಾಗಿ ಗೋಗಡಿಗೆಯಲ್ಲಿ ಸಂಸಾರ ಹೂಡಿದರು. ಕೂಲಿ ಕೆಲಸ ಮಾಡುತ್ತಾ ಇರುವುದರಲ್ಲೇ ಸುಖವಾಗಿದ್ದರು. ಆದರೆ ಮೂವರು ಮಕ್ಕಳು ಸಣ್ಣವರಿದ್ದಾಗಲೇ ಅವರ ಗಂಡ ಕುಡಿಯುವುದಕ್ಕೆ ಆರಂಭಿಸಿದರು. ಅಲ್ಲಿಂದ ಅವರ ಕಷ್ಟಗಳು ಆರಂಭವಾದವು. ಗಂಡನಿಗೆ ಕುಡಿಯಬೇಡವೆಂದು ತಿಳಿ ಹೇಳಿದರೂ, ಕೂಲಿ ಕೆಲಸದ ಮೈಕೈ ನೋವಿಗೆ ಎಲ್ಲೊ ಸ್ವಲ್ಪ ಕುಡಿತೀನಿ ಎಂದು ಹೇಳುತ್ತಲೇ, ಜೀವನ ಕಳೆದುಕೊಂಡರು. ಇಂತಹ ಸಂಕಷ್ಟಗಳ ಮಧ್ಯದಲ್ಲೇ ಜೀವನ ನಿರ್ವಹಣೆಗೆ ತೋಟ, ಗದ್ದೆಯ ಕೂಲಿ ಕೆಲಸ ಮಾಡಿ ಮೂವರು ಮಕ್ಕಳನ್ನು ಬೆಳೆಸಿದರು.

ತವರು ಮನೆಯಲ್ಲಿ ಅವರ ಇಬ್ಬರು ತಮ್ಮಂದಿರೂ ಹೆಂಡಕ್ಕೆ ದಾಸರಾಗಿ ಸಂಸಾರ ಹಾಳು ಮಾಡಿಕೊಳ್ಳುವುದನ್ನು ನೋಡಿದ ಮೇಲೆ ಇದರ ವಿರುದ್ಧ ಹೋರಾಟ ಮಾಡದಿದ್ದರೆ ಹಳ್ಳಿಗಳೇ ಉಳಿಯುವುದಿಲ್ಲವೆಂದು ಅವರಿಗೆ ಅನ್ನಿಸಿತು. ಹೆಂಡದಂಗಡಿಗಳಿಗೆ ಊರಿನಲ್ಲಿ ಲೈಸೆನ್ಸ್ ಕೊಡಬಾರದು, ಅಲ್ಲಿ ಮಾರಬಾರದು, ಆಗಲಾದರೂ ಹೆಂಡದ ಚಾಳಿ ಕಡಿಮೆಯಾಗುತ್ತದೆ ಎಂದು ಆಲೋಚಿಸಿದರು. ಅಲ್ಲೊಂದು ಇಲ್ಲೊಂದು ಮನೆಯಿರುವ ಮಲೆನಾಡಿನ ಹಳ್ಳಿಮೂಲೆಯಲ್ಲಿ ಸಂಘಟನೆಯನ್ನು ಮಾಡುವುದೂ ಒಂದು ಹೋರಾಟವೇ. ಊರಿನ ಕೆಲವರಿಗೆ ಅದು ಸರಿ ಅನ್ನಿಸಿದರೂ ಕೊಚ್ಚೆಗೆ ಕಲ್ಲು ಹೊಡೆದರೆ ನಮಗೇ ಸೀರುತ್ತದೆ ಎನ್ನುವ ರೀತಿಯ ಉದಾಸೀನ. ಇನ್ನು ಕೆಲವರು, ಊರಿನವರು ಕುಡಿಯುವುದು ಬಿಟ್ಟರೆ ಅಂಗಡಿಗಳು ತನ್ನಿಂದ ತಾನೇ ಮುಚ್ಚುತ್ತವೆ ಎಂದರು. ಇವರು ಬಿಡುವುದಿಲ್ಲ, ಅವರು ಮುಚ್ಚುವುದಿಲ್ಲ. ಏನಾದರಾಗಲಿ ಇದರ ಬಗ್ಗೆ ಎಚ್ಚರ ಮೂಡಿಸಲೇಬೇಕೆಂದು ಊರಿನ ಹೆಂಗಸರನ್ನು ಹುರಿದುಂಬಿಸಿ ಮನೆ ಮನೆಗೆ ಹೋಗಿ ಕುಡಿತದ ತೊಂದರೆಗಳ ಬಗ್ಗೆ ತಿಳಿ ಹೇಳಿದರು. ತಮ್ಮೂರಿನಿಂದ ಸಾಗರದ ಅಬಕಾರಿ ಆಫೀಸಿನ ತನಕ ಕಾಲ್ನಡಿಗೆಯಲ್ಲಿ ಹೋಗಿ ಪ್ರತಿಭಟನೆಯನ್ನು ನಡೆಸಿದರು. ಮನವಿ ಕೊಟ್ಟರು.

‘ನೀರಿಗಾಗಿ ಬಾವಿ, ಕುಡಿಯುವರಿಗಾಗಿ ಸರಾಯಿ’ ಅಂತ ಬರಹ ಬರೆದು ಎಲ್ಲಾ ಪೊಲೀಸ್ ಸ್ಟೇಶನ್‍ಗಳಿಗೆ, ಮಂಡಲ ಪಂಚಾಯ್ತಿಗಳಿಗೆ ಕೊಟ್ಟರು. ಮುಂದೆ ಸಾಗರದ ಇತರ ಹೋರಾಟಗಾರರ ಪರಿಚಯವಾಗಿ, ಅವರೊಂದಿಗೆ ಡಿಸಿ ಆಫೀಸಿನ ಎದುರು ಮತ್ತೆ ಪ್ರತಿಭಟನೆ ನಡೆಸಿದರು. ಈ ಸಾರಾಯಿ ಮಾರುವವರು ಯಾವುದಕ್ಕೆ ಕಡಿಮೆಯಾಗಿ ಇದನ್ನು ಮಾಡುತ್ತಾರೆ ಅನ್ನುವುದು ಅವರಿಗೆ ತಿಳಿಯಬೇಕಾಗಿತ್ತು. ಹಾಗಾಗಿಯೇ ಮತ್ತೆ ಸ್ತ್ರೀ ಶಕ್ತಿ ಸಂಘಗಳ ಸದಸ್ಯರನ್ನು ಸೇರಿಸಿಕೊಂಡು ಹೆಂಡದಂಗಡಿಯವರನ್ನು ಮನವೊಲಿಸಲು ನೋಡಿದರು. ಆಗ ಹೆಂಡಕ್ಕೂ, ಸರಕಾರಕ್ಕೂ, ರಾಜಕೀಯಕ್ಕೂ ಇರುವ ನಂಟಿನ ಅರಿವಾಯಿತು. `ಏನು ಮಾಡಿದರೂ ಪ್ರಯೋಜನವಿಲ್ಲ. ಓಟಿನ ರಾಜಕೀಯದಲ್ಲಿ, ತನ್ನೊಬ್ಬಳ ಓಟಿಗೆ ಏನು ಬೆಲೆ?’ ಎನ್ನುವ ದುಗುಡ ಕಾಡಿತು. ಆ ವೇಳೆಗೆ ಅವರ ಮಗ ಕುಡಿತದ ದಾಸನಾಗಿದ್ದ. ಆರೋಗ್ಯ ಕುಸಿಯುತ್ತಿತ್ತು. ಕೊನೆಗೆ ಹಿರಿಯ ಮಗನನ್ನು ಕುಡಿತಕ್ಕೆ ಕಳೆದು‌ ಕೊಂಡರು. ಆಗ ಕುಡಿತದ ವಿರುದ್ಧ, ಸಾರಾಯಿ ಮಾರಾಟದ ವಿರುದ್ಧ ಅವರ ಹೋರಾಟ ಮತ್ತಷ್ಟು ತೀವ್ರವಾಯಿತು.

ಈಗಲೂ ತಮ್ಮ 72 ನೇ ವಯಸ್ಸಿನಲ್ಲೂ, ಹಳ್ಳಿಗಳಿಗೆ ಸಾರಾಯಿ ಅಂಗಡಿಗಳು ಬರಬಾರದು ಅನ್ನುವುದೇ ಅವರ ಮುಖ್ಯ ಕಾಳಜಿ. ಅವರ ಹೋರಾಟದ ಆಶಯದ ಹಿಂದಿನ ಸತ್ಯವನ್ನು ಊರು ಗುರುತಿಸಿದೆ. ಜಾತಿ, ವರ್ಗ, ಲಿಂಗದ ಮೇಲರಿಮೆಯ ಬಂಡವಾಳವಿಲ್ಲದೆ ಹಳ್ಳಿಯಲ್ಲಿ ಮಾತಾಡುವುದೇ ದೊಡ್ಡ ಸಾಹಸ. ಆದರೆ ಮಂಜಮ್ಮ ತಮ್ಮ ಜೀವನಾನುಭವ ಕೊಟ್ಟ ವಿವೇಕವನ್ನು ಸ್ಪಷ್ಟವಾಗಿ ನಾಣ್ನುಡಿ, ನುಡಿಗಟ್ಟುಗಳ ಮೂಲಕ ಯಾರೇ `ದೊಡ್ಡ ಮನುಷ್ಯರು’ ಇದ್ದಾಗಲೂ ತೆರೆದಿಡುವ ಗಟ್ಟಿಗಿತ್ತಿ. ಮದ್ಯ ವಿರೋಧಿ ಹೋರಾಟಕ್ಕೂ ಮೊದಲು ಅವರೂರಿನಲ್ಲಿ ವಯಸ್ಕರ ಶಿಕ್ಷಣ ಅಭಿಯಾನ ಆರಂಭವಾದಾಗ, ಮಂಜಮ್ಮನನ್ನು ಟೀಚರ್ ಮಾಡಿದ್ದವರು ಅವರಿಗೆ ಎಸ್‍ಎಸ್‍ಎಲ್‍ಸಿ ಆಗಿದೆ ಅಂದುಕೊಂಡಿದ್ದರಂತೆ. ಅಂತಹ ಉತ್ತಮ ಸಾಮಾನ್ಯ ಜ್ಞಾನ ಹೊಂದಿದವರು ಅವರು.

ಕದ್ದು ಹೆಂಡ ಮಾರುವ ಅಂಗಡಿಗಳೂ ಇಲ್ಲದ ಊರಿನ ನಿರೀಕ್ಷೆಯಲ್ಲೇ ಮಂಜಮ್ಮ ಇದ್ದರೂ, ಅವರ ನೆರಳು ಕಂಡರೂ ಕುಡುಕರು ಹಿಂದೆ ಸರಿಯುತ್ತಾರೆ. ಏನೆ ಜಗಳ ದೊಂಬಿ ಮಾಡುತ್ತಿರಲಿ, ಅವರಿದ್ದಾರೆಂದರೆ ಸುಮ್ಮನಾಗುತ್ತಾರೆ. ಊರಿನಲ್ಲಿ ಏನೇ ಸಮಸ್ಯೆ ಇದ್ದರೂ, ಅದು ಮಂಜಮ್ಮನವರ ತನಕ ಬಂದು ತಲುಪಿದರೆ ಸಂಬಂಧಿಸಿದವರೊಟ್ಟಿಗೆ ಮಾತಾಡಿ ಪರಿಹರಿಸುತ್ತಾರೆ. ಊರಿನ ಶಾಲೆ, ಸಮಾರಂಭ, ದೇವಸ್ಥಾನ, ಎಲ್ಲೇ ಹೋದರೂ ಅವರಿಗೆ ಗೌರವವಿದೆ.

ಮಹಿಳಾ ಹೋರಾಟಗಳ ಇತಿಹಾಸವನ್ನು ಮರುನಿರೂಪಿಸುವ ನಿಟ್ಟಿನಲ್ಲಿ ಒಕ್ಕೂಟವು, ಏಕಾಂಗಿಯಾಗಿ ಸಂಘಟಿಸಿ, ವಿಫಲ ಹೋರಾಟ ಎಂದೇ ಕರೆಸಿಕೊಳ್ಳುವ ಸಾರಾಯಿ ವಿರೋಧಿ ಹೋರಾಟ ಕಟ್ಟಿದ್ದ ಮಂಜಮ್ಮನವರನ್ನು ನೆನೆಯುತ್ತಿರುವುದು ಅನುಕರಣೀಯವಾಗಿದೆ. ನಮ್ಮ ಹಿರಿಯಕ್ಕನಾದ ಮಂಜಮ್ಮನವರು `ನಮ್ಮ ಅಕ್ಕ, ನಮ್ಮ ಹಿರಿಮೆ’ಯಾಗಿದ್ದಾರೆ.

ಕೃತಿ ಪುರಪ್ಪೇಮನೆ

ಪ್ರಗತಿಪರ ಚಿಂತಕಿ, ಯಕ್ಷಗಾನ ಕಲಾವಿದೆ

Related Articles

ಇತ್ತೀಚಿನ ಸುದ್ದಿಗಳು