Home ರಾಜ್ಯ ಮೈಸೂರು ಸಂಸತ್‌ ದಾಳಿ: ಸಂಸದ ಪ್ರತಾಪ್ ಸಿಂಹ ಬಳಿಪಾಸ್ ಪಡೆಯಲು ತಂದೆಯ ಹೆಸರನ್ನು ಬಳಸಿಕೊಂಡಿದ್ದ ಮನೋರಂಜನ್

ಸಂಸತ್‌ ದಾಳಿ: ಸಂಸದ ಪ್ರತಾಪ್ ಸಿಂಹ ಬಳಿಪಾಸ್ ಪಡೆಯಲು ತಂದೆಯ ಹೆಸರನ್ನು ಬಳಸಿಕೊಂಡಿದ್ದ ಮನೋರಂಜನ್

0

ಬೆಂಗಳೂರು: ಬುಧವಾರ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಗದ್ದಲ ಸೃಷ್ಟಿಸಿದ್ದ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿರುವಾಗಲೇ ಮೈಸೂರು ಲೋಕಸಭಾ ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದಿರುವ ಮನೋರಂಜನ್ ತಂದೆಯ ಮನೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಆತನ ಹಿನ್ನೆಲೆಯನ್ನು ವಿಚಾರಿಸಿದ್ದಾರೆ.

ಮನೋರಂಜನ್ ಡಿ ಮತ್ತು ಸಾಗರ್ ಶರ್ಮಾ ಬುಧವಾರ ಸಂಸತ್ತಿನ ಹೆಚ್ಚಿನ ಭದ್ರತೆಯನ್ನು ಉಲ್ಲಂಘಿಸಿ ಸಂಸದರತ್ತ ನುಗ್ಗಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರನ್ನು ಸಂಸದರು ಹಿಡಿದು ಥಳಿಸಿದ್ದರು ಎನ್ನಲಾಗಿದೆ. ನಂತರ ಅವರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು.

ಮನೋರಂಜನ್ ಬೆಂಗಳೂರಿಗೆ ಹೋಗುವುದಾಗಿ ಪೋಷಕರಿಗೆ ಸುಳ್ಳು ಹೇಳಿ ಈ ವಾರದ ಆರಂಭದಲ್ಲಿ ದೆಹಲಿ ತಲುಪಿದ್ದ. ಡಿಸೆಂಬರ್ 12ರಂದು ಸಾಗರ್ ಶರ್ಮಾನೊಂದಿಗೆ ಸೇರಿ ಮನೋರಂಜನ್ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಗೆ ಭೇಟಿ ನೀಡಿದ್ದ ಮತ್ತು ಅಲ್ಲಿ ತಾವು ಮೈಸೂರಿನ ವಿಜಯನಗರ ನಿವಾಸಿ ಮತ್ತು ದೇವರಾಜೇಗೌಡ ಅವರ ಪುತ್ರ ಎಂದು ಪರಿಚಯಿಸಿಕೊಂಡಿದ್ದ. ಪ್ರತಾಪ್‌ ಸಿಂಹ ಅವರಿಗೆ ದೇವರಾಜ್‌ ಅವರ ಒಳ್ಳೆಯ ಪರಿಚಯವಿತ್ತು

ಮನೋರಂಜನ್ ಸಾಗರ್ ಶರ್ಮಾನನ್ನು ತಮ್ಮ ಸಹೋದ್ಯೋಗಿ ಎಂದು ಪರಿಚಯಿಸಿ ವೈಯಕ್ತಿಕ ಪಾಸ್‌ ಕೊಡಿಸುವಂತೆ ಬೇಡಿಕೊಂಡಿದ್ದ. ಪಾಸ್‌ ಪಡೆದ ಆರೋಪಿಗಳು ಮಧ್ಯಾಹ್ನದ ಹೊತ್ತಿಗೆ ಸಂಸತ್‌ ಪ್ರವೇಶಿಸಿ ನಂತರ ಸದನದಲ್ಲಿ ಸಂಸದರು ಕುಳಿತುಕೊಳ್ಳುವ ಸ್ಥಳದತ್ತ ಜಿಗಿದಿದ್ದರು.

ಉತ್ತರ ಪ್ರದೇಶದ ಲಕ್ನೋ ನಿವಾಸಿಯಾಗಿರುವ ಸಾಗರ್ ಶರ್ಮಾ ಈ ವರ್ಷ ಮೇ ತಿಂಗಳಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಎಂದು ವರದಿಯಾಗಿದೆ. ಆದರೆ ಸಾಗರ್ ಮನೋರಂಜನನನ್ನು ಭೇಟಿಯಾಗಲು ಬಂದಿದ್ದನೋ ಅಥವಾ ಇತರ ಉದ್ದೇಶಗಳಿಗಾಗಿ ಬಂದಿದ್ದನೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ, ನಗರದಿಂದ ಹೊರಡುವ ಮೊದಲು ಸಾಗರ್ ಶರ್ಮಾ ಮೈಸೂರಿನಲ್ಲಿ ಒಂದೆರಡು ದಿನ ತಂಗಿದ್ದ. ಸಾಗರ್ ಶರ್ಮಾ ಬಗ್ಗೆ ತನಗೆ ಗೊತ್ತಿರಲಿಲ್ಲ ಎಂದು ಮನೋರಂಜನ್ ತಂದೆ ಹೇಳಿದ್ದಾರೆ.

ಆರಂಭಿಕ ತನಿಖೆಯಲ್ಲಿ, ಪೊಲೀಸರಿಗೆ ದೊರೆತ ಮಾಹಿತಿಯ ಮನೋರಂಜನ್ ವಿರುದ್ಧ ಯಾವುದೇ ಹಿಂದಿನ ಪ್ರಕರಣಗಳು ಕಂಡುಬಂದಿಲ್ಲ ಮತ್ತು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ಮನೋರಂಜನ್ ತಂದೆಯ ಪ್ರಕಾರ, ಅವನು ಸ್ವಾಮಿ ವಿವೇಕಾನಂದರ ಪುಸ್ತಕಗಳು ಮತ್ತು ಕ್ರಾಂತಿಕಾರಿಗಳ ಕೆಲವು ಪುಸ್ತಕಗಳನ್ನು ಓದುತ್ತಿದ್ದ. ಮನೋರಂಜನನಿಗೆ ಮೈಸೂರಿನಲ್ಲಿ ಸ್ನೇಹಿತರಿರಲಿಲ್ಲ ಮತ್ತು ಕೆಲವೊಮ್ಮೆ ಆ ಪ್ರದೇಶದಲ್ಲಿನ ಸಣ್ಣ ಮಕ್ಕಳೊಂದಿಗೆ ಆಟವಾಡುತ್ತಿದ್ದ.

ದೆಹಲಿ ಪೊಲೀಸರು ಇನ್ನೂ ಯಾವುದೇ ಮಾಹಿತಿಗಾಗಿ ಮೈಸೂರು ಪೊಲೀಸರಿಗೆ ಯಾವುದೇ ಔಪಚಾರಿಕ ಮನವಿಯನ್ನು ಮಾಡದಿದ್ದರೂ, ಸ್ಥಳೀಯ ಪೊಲೀಸರು ಮನೋರಂಜನ್ ಕುರಿತು ವಿವರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ.

You cannot copy content of this page

Exit mobile version