ಮೈಸೂರು: ನಿನ್ನೆ ಸಂಸತ್ತಿನ ಕಲಾಪ ನಡೆಯುತ್ತಿರುವಾಗ ಸಂಸದರ ಗ್ಯಾಲರಿಗೆ ನುಗ್ಗಿ ಕಲರ್ ಬಾಂಬ್ ಸಿಡಿಸಿದ ಆರೋಪಿಗಳಲ್ಲಿ ಒಬ್ಬನಾದ ಮನೋರಂಜನ್ ಎನ್ನುವ ವ್ಯಕ್ತಿಯನ್ನು ಕಮ್ಯುನಿಸ್ಟ್ ಪಕ್ಷದ ಬೆಂಬಲಿಗೆ ಎನ್ನುವಂತೆ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ.
ಈ ಆರೋಪಿ ಮನರೋಂಜನನ ಅಪ್ಪನೇ ತನ್ನ ಮಗ ಮೋದಿ ಬೆಂಬಲಿಗನೆಂದು ಹೇಳಿಕೆ ಕೊಟ್ಟಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವನ್ನು ವಿರೋಧ ಪಕ್ಷಗಳತ್ತ ತಿರುಗಿಸುವ ನಿಟ್ಟಿನಲ್ಲಿ ಬಿಜೆಪಿ ಬೆಂಬಲಿಗರು ಕೆಲಸ ಮಾಡತೊಡಗಿದ್ದಾರೆ.
ಈ ನಿಟ್ಟಿನಲ್ಲಿ ಮೈಸೂರಿನ SFI ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಅವರ ಫೋಟೊ ಬಳಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಡಿವೈಎಫ್‌ಐ ನಾಯಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು “ಬಿಜೆಪಿ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದು, ಆರೋಪಿಯ ಅಪ್ಪನೇ ತನ್ನ ಮಗ ಮೋದಿ ಹಾಗೂ ಪ್ರತಾಪಸಿಂಹ ಅವರ ಬೆಂಬಲಿಗ ಎಂದು ಹೇಳಿಕೊಂಡಿದ್ದರೂ ಕಮ್ಯುನಿಸ್ಟ್ ನಾಯಕರ ಚಿತ್ರ ಉಪಯೋಗಿಸಿ ಅಪಪ್ರಚಾರ ಮಾಡುತ್ತಿರುವುದು ಹೇಯ” ಎಂದು ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಸಂಸತ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಇಬ್ಬರು ಸಂಸದರ ಗ್ಯಾಲರಿಗೆ ನುಗ್ಗಿ ಕಲರ್ ಬಾಂಬ್ ಸಿಡಿಸಿ ಸಂಸತ್ತಿನಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಇದೊಂದು ಭದ್ರತಾ ವೈಫಲ್ಯವಾಗಿದ್ದು ಈ ಕುರಿತು ತನಿಖೆ ನಡಯಬೇಕಿದೆ ಎಂದು ವಿಪಕ್ಷಗಳು ಆಗ್ರಹಿಸಿವೆ. ಮೈಸೂರು ಸಂಸದ ಪ್ರತಾಪ ಸಿಂಹ ಅವರ ಕಚೇರಿಯಿಂದ ಸಾರ್ವಜನಿಕ ಪಾಸ್ ಪಡೆದು ಆರೋಪಿಗಳು ಸಂಸತ್ ಗ್ಯಾಲರಿಗೆ ಪ್ರವೇಶ ಪಡೆದಿದ್ದರು ಎನ್ನಲಾಗಿದೆ.