ನೂತನ ಸಂಸತ್ ಭವನಕ್ಕೆ ಇಬ್ಬರು ಅಪರಿಚಿತ ವ್ಯಕ್ತಿಗಳು ನುಗ್ಗಿದ ಪರಿಣಾಮ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕಲಾಪ ನಡೆಯುತ್ತಿದ್ದ ಜಾಗದಲ್ಲಿ ಅಪರಿಚಿತ ವ್ಯಕ್ತಿಗಳು ಏಕಾಏಕಿ ಸದನದ ಬಾವಿಗೆ ನುಗ್ಗಿದ ಘಟನೆಯಿಂದ, ಭದ್ರತಾ ಲೋಪದ ಬಗ್ಗೆ ಹಲವಷ್ಟು ಅನುಮಾನಗಳು ವ್ಯಕ್ತವಾಗಿದೆ.
ಇಂದು ಲೋಕಸಭೆಯ ಸದನ ನಡೆಯುತ್ತಿರುವ ಸಂದರ್ಭದಲ್ಲಿ ಅಪರಿಚಿತ ಸಂದರ್ಶಕರೊಬ್ಬರು ಭದ್ರತೆಯನ್ನು ಉಲ್ಲಂಘಿಸಿ ಗ್ಯಾಲರಿಯಿಂದ ಕೊಠಡಿಗೆ ಹಾರಿದ ಕಾರಣ ಲೋಕಸಭೆಯಲ್ಲಿ ಗೊಂದಲ ಉಂಟಾಯಿತು.
ಭದ್ರತಾ ಪ್ರೋಟೋಕಾಲ್ಗಳನ್ನು ತ್ವರಿತವಾಗಿ ಸಕ್ರಿಯಗೊಳಿಸಿದ್ದರಿಂದ ಸ್ಪೀಕರ್ ಕೆಲ ಕಾಲ ಸಭೆಯನ್ನು ತಕ್ಷಣವೇ ಮುಂದೂಡಿದ್ದಾರೆ. ಹಠಾತ್ ಒಳನುಸುಳುವಿಕೆಯಿಂದ ಸದನವನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಅಚಾನಕ್ಕಾಗಿ ಲೋಕಸಭೆ ಸದನದ ಒಳಗೆ ನುಗ್ಗಿದ ಅಪರಿಚಿತರ ಕೈಯಲ್ಲಿ ಅಶ್ರುವಾಯು ಡಬ್ಬಿಗಳು ಹಾಗೂ ಕಣ್ಣಿಗೆ ಕಿರಿಕಿರಿ ಉಂಟುಮಾಡುವ ಅನಿಲದ ಮಾದರಿಗಳು ಇದ್ದವು ಎಂದು ತಿಳಿದು ಬಂದಿದೆ.
ಇತ್ತ ಅಪರಿಚಿತ ವ್ಯಕ್ತಿಗಳು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿ ಪಾಸ್ ತಗೆದುಕೊಂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಂಸದ ಡ್ಯಾನಿಶ್ ಅಲಿ ಅವರು ತಿಳಿಸಿರುವ ಮಾಹಿತಿಯಂತೆ, “ದಾಳಿ ಮುಂದಾಗಿದ್ದ ಯುವಕರ ಪೈಕಿ ಓರ್ವ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದರು” ಎಂದು ಮಾಹಿತಿ ನೀಡಿದ್ದಾರೆ.