ಹಾಸನ: ಹಾಸನ ತಾಲೂಕಿನ ಹೂವಿನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಸತಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಗೃಹ ಮಂಡಳಿ ಮುಂದಾಗಿರುವ ಕ್ರಮವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಅಗಿಲೆ ಯೋಗೀಶ್ ಅವರು ತಿಳಿಸಿದರು.
ಹೂವಿನಹಳ್ಳಿ, ಹೂವಿನಹಳ್ಳಿ ಕಾವಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಒಟ್ಟು ಸುಮಾರು 387 ಎಕರೆ ಕೃಷಿ ಜಮೀನನ್ನು ವಸತಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಗೃಹ ಮಂಡಳಿ ತೀರ್ಮಾನಿಸಿ ಆಕ್ಷೇಪಣೆ ಸಲ್ಲಿಸಲು ಅರ್ಜಿ ಆಹ್ವಾನಿಸಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಯೋಗೀಶ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಭಾಗದ ರೈತರು ಈಗಾಗಲೇ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದು, ಉಳಿದಿರುವ ಅಲ್ಪಸ್ವಲ್ಪ ಜಮೀನಿನಲ್ಲೇ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇದೀಗ ಅದನ್ನೂ ಸ್ವಾಧೀನಪಡಿಸಿಕೊಂಡರೆ ರೈತರ ಜೀವನವೇ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದರು.
ಹಾಸನ ನಗರದ ಸುತ್ತಮುತ್ತ ಈಗಾಗಲೇ 250ಕ್ಕೂ ಹೆಚ್ಚು ಬಡಾವಣೆಗಳು ನಿರ್ಮಾಣವಾಗಿದ್ದು, ಅನೇಕ ನಿವೇಶನಗಳು ಇನ್ನೂ ಮಾರಾಟವಾಗದೆ ಉಳಿದಿವೆ. ಇಂತಹ ಸಂದರ್ಭದಲ್ಲಿ ಮತ್ತೆ ರೈತರ ಫಲವತ್ತಾದ ಜಮೀನನ್ನೇ ಪಡೆದು ಹೊಸ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಜಮೀನು ನೀಡಲು ವಿರೋಧ ವ್ಯಕ್ತಪಡಿಸಿ ಗ್ರಾಮಸ್ಥರು ಈಗಾಗಲೇ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ರೈತರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಆಮ್ ಆದ್ಮಿ ಪಕ್ಷ ಗ್ರಾಮಸ್ಥರ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರು.
ಮುಂದುವರೆದು ಗೃಹ ಮಂಡಳಿ ರೈತರ ಜಮೀನನ್ನೇ ಸ್ವಾಧೀನಪಡಿಸಿಕೊಳ್ಳಲು ಮುಂದಾದರೆ ಗ್ರಾಮಸ್ಥರು ಮತ್ತು ರೈತರ ಜೊತೆಗೂಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಯಾವುದೇ ಕಾರಣಕ್ಕೂ ರೈತರ ಜಮೀನು ಕಳೆದುಕೊಳ್ಳಲು ಬಿಡುವುದಿಲ್ಲ, ರೈತರ ಪರವಾಗಿ ಸದಾ ನಿಲ್ಲುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಅಗಿಲೆ ಯೋಗೀಶ್, ವಿಕಾಸ್, ಮಧು, ಖಾದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
