ಬೆಂಗಳೂರು: ಮಾಜಿ ಜೆಡಿಎಸ್ ಹಾಗೂ ರೋಟರಿ ಕ್ಲಬ್ ಮುಖಂಡರಾದ ಬಿ. ಕರಿ ಗೌಡ, ಸಮಾಜವಾದಿ ಪಾರ್ಟಿ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಶಾಂತಾ ಮೋಹನ್, ಕಿರುತೆರೆ ಹಾಗೂ ಹಿರಿತೆರೆ ನಟ ಕಿಶನ್, ಹೊಳಲ್ಕೆರೆ ಮಾಜಿ ಶಾಸಕ ಜಿ.ದುಗ್ಗಪ್ಪರವರ ಪುತ್ರಿ ಸುವರ್ಣ ದುಗ್ಗಪ್ಪ, ಸಮಾಜವಾದಿ ಪಾರ್ಟಿ ಯುವ ನಾಯಕ ರವಿ (ದೇವೇಂದ್ರ ಚೌಡಿ) ಆಮ್ ಆದ್ಮಿ ಪಾರ್ಟಿಗೆ ಗುರುವಾರ ಸೇರ್ಪಡೆಯಾಗಿದ್ದಾರೆ. ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಇವರನ್ನು ಪಕ್ಷದ ರಾಜ್ಯ ಕಚೇರಿಯಲ್ಲಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಮೋಹನ್ ದಾಸರಿಯವರು ʼಬಿ. ಕರಿ ಗೌಡರವರು ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳು. ಎಂಕಾಂ, ಎಂಬಿಎ, ಸಿಎ ಶಿಕ್ಷಣವನ್ನು ಪೂರೈಸಿದ್ದಲ್ಲದೇ, ಕಂಪನಿ ಸೆಕ್ರೆಟರಿ ಶಿಕ್ಷಣದ ಇಂಟರ್‌ಮೀಡಿಯೇಟ್ ಮಾಡಿದ್ದಾರೆ. ಕಳೆದ 30 ವರ್ಷಗಳಿಂದ ಲೆಕ್ಕ ಪರಿಶೋಧನೆ ಹಾಗೂ ತೆರಿಗೆಗೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ʻರೋಟರಿ ಬೆಂಗಳೂರು ಬನಶಂಕರಿʼ ಅಧ್ಯಕ್ಷರಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿ, ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸಮಾಜವಾದಿ ಪಾರ್ಟಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶಾಂತಾ ಮೋಹನ್‌ರವರು ಮಹಿಳೆಯರ ಸಂಘಟನೆಯಲ್ಲಿ ನಿಪುಣರಾಗಿದ್ದು, ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಹಲವು ವರ್ಷಗಳ ಕಾಲ ಹೋರಾಟ ಮಾಡಿದ ಅನುಭವ ಹೊಂದಿದ್ದಾರೆ. ಹೊಳಲ್ಕೆರೆಯಲ್ಲಿ 20 ವರ್ಷಗಳ ಕಾಲ ಶಾಸಕರಾಗಿದ್ದ ದುಗ್ಗಪ್ಪರವರ ಪುತ್ರಿ ಸುವರ್ಣ ದುಗ್ಗಪ್ಪರವರು ಸಮಾಜವಾದಿ ಪಾರ್ಟಿಯ ಎಸ್‌ಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಿಶನ್‌ರವರು ನಟನೆಯ ಜೊತೆಗೆ ಸಮಾಜವಾದಿ ಪಕ್ಷದ ರಾಜ್ಯ ಯುವಘಟಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರವಿ (ದೇವೇಂದ್ರ ಚೌಡಿ) ಕೂಡ ಅದೇ ಪಕ್ಷದ ಯುವನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆʼ ಎಂದು ಪರಿಚಯಿಸಿದರು.
ಪಕ್ಷ ಸೇರಿದ ಬಿ. ಕರಿ ಗೌಡ ಮಾತನಾಡಿ, ʼಶಿಕ್ಷಣದ ಮಹತ್ವವನ್ನು ಅರಿತು, ಶೈಕ್ಷಣಿಕ ಕ್ರಾಂತಿ ತರುವುದರಲ್ಲಿ ಆಮ್ ಆದ್ಮಿ ಪಾರ್ಟಿ ನಿರತವಾಗಿದೆ. ದೆಹಲಿ ಹಾಗೂ ಪಂಜಾಬ್‌ನ ಎಎಪಿ ಸರ್ಕಾರಗಳು ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಆದ್ಯತೆ ನೀಡುತ್ತಿವೆ. ಆಮ್ ಆದ್ಮಿ ಪಾರ್ಟಿಯ ಭಯದಿಂದಾಗಿ ಬೇರೆ ಪಕ್ಷಗಳು ಕೂಡ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡಲು ಆರಂಭಿಸಿರುವುದನ್ನು ನೋಡುತ್ತಿದ್ದೇವೆ. ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಕುರಿತ ಚರ್ಚೆಯು ಆಮ್ ಆದ್ಮಿ ಪಾರ್ಟಿಯಿಂದಾಗಿ ಮುನ್ನೆಲೆಗೆ ಬರುತ್ತಿದೆʼ ಎಂದು ಹೇಳಿದ್ದಾರೆ.
ಶಾಂತಾ ಮೋಹನ್ ಮಾತನಾಡಿ, ʼಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಹೊಂದಿರುವ ಪಕ್ಷವೆಂದರೆ ಆಮ್ ಆದ್ಮಿ ಪಾರ್ಟಿ. ಪಕ್ಷವು ಹಲವು ಚುನಾವಣೆಗಳಲ್ಲಿ ಶೇ. 50ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿದೆ. ಬೇರೆ ಪಕ್ಷಗಳು ದುರ್ಬಲ ಮಹಿಳೆಯರನ್ನು ಚುನಾವಣಾ ಕಣಕ್ಕಿಳಿಸಿ, ಅವರು ಗೆಲುವು ಸಾಧಿಸಿದರೆ ಅವರ ಹೆಸರಿನಲ್ಲಿ ಬೇರೆ ಪುರುಷರು ಅಧಿಕಾರ ನಡೆಸುವಂತಹ ವ್ಯವಸ್ಥೆಯನ್ನು ಸೃಷ್ಟಿಸಿವೆ. ಆದರೆ ಆಮ್ ಆದ್ಮಿ ಪಾರ್ಟಿಯು ಸುಶಿಕ್ಷಿತ ಹಾಗೂ ಸಶಕ್ತ ಮಹಿಳೆಯರಿಗೆ ಆದ್ಯತೆ ನೀಡಿ, ಮಹಿಳಾ ಪ್ರಾತಿನಿಧ್ಯದ ಆಶಯಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದೆʼ ಎಂದು ಹೇಳಿದ್ದಾರೆ.
ಸೇರ್ಪಡೆ ಸಮಾರಂಭದಲ್ಲಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ಹಾಜರಿದ್ದರು.